ಧರ್ಮ ಸಂಘರ್ಷಗಳಿಗೆ ಸುದ್ದಿಯಾಗಿರುವ ಕರ್ನಾಟಕ: ಅಭಿವೃದ್ಧಿಪರ ಕೆಲಸಗಳತ್ತ ಗಮನ ಕೊಡಿ ಎಂದು ಬೊಮ್ಮಾಯಿಗೆ ಹೈಕಮಾಂಡ್ ಸಲಹೆ
ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹತ್ತಾರು ವಿವಾದಗಳು ಬಿಜೆಪಿ ಹೈಕಮಾಂಡ್ ಗೆ ಸರಿ ಕಾಣುತ್ತಿಲ್ಲ ಎನಿಸುತ್ತಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು ಇಂತಹ ಸಂದರ್ಭದಲ್ಲಿ ಜನಪರ ಕಾರ್ಯಗಳಿಗೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದ
Published: 10th April 2022 08:06 AM | Last Updated: 11th April 2022 12:59 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ನವದೆಹಲಿ/ಬೆಂಗಳೂರು: ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಹತ್ತಾರು ವಿವಾದಗಳು ಬಿಜೆಪಿ ಹೈಕಮಾಂಡ್ ಗೆ ಸರಿ ಕಾಣುತ್ತಿಲ್ಲ ಎನಿಸುತ್ತಿದೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು ಇಂತಹ ಸಂದರ್ಭದಲ್ಲಿ ಜನಪರ ಕಾರ್ಯಗಳಿಗೆ, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ಕೆಲವು ತಿಂಗಳುಗಳಿಂದ ರಾಜ್ಯದಲ್ಲಿ ಬರೀ ಧರ್ಮ ಸಂಘರ್ಷವೇ ತುಂಬಿಹೋಗಿದೆ. ಹಿಜಾಬ್ ವಿವಾದದಿಂದ ಆರಂಭವಾಗಿ ಹಲಾಲ್ ಮಾಂಸ ಮಾರಾಟಕ್ಕೆ ನಿರ್ಬಂಧ, ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಅಜಾನ್ ನಲ್ಲಿ ಧ್ವನಿವರ್ಧಕಗಳ ನಿಷೇಧ ಇತ್ಯಾದಿಗಳೇ ವಿವಾದವಾಗುತ್ತಿದ್ದು ಮುಖ್ಯಮಂತ್ರಿ ಬೊಮ್ಮಾಯಿಯವರು ಬಹುತೇಕ ಈ ವಿಷಯಗಳಲ್ಲಿ ಮೌನವಾಗಿದ್ದಾರೆ.
ಇತ್ತೀಚೆಗಷ್ಟೆ ದೆಹಲಿಗೆ ಹೋಗಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು ಅಲ್ಲಿ ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಅದರ ಜೊತೆಗೆ ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ನಿರ್ಮಲಾ ಸೀತಾರಾಮವನ್ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಆದರೆ ಅಮಿತ್ ಶಾ ಅವರ ಭೇಟಿಗೆ ಸಮಯಾವಕಾಶ ಸಿಕ್ಕಿಲ್ಲ. ಆದರೆ ಮೊನ್ನೆ ಗುರುವಾರ ಸಂಜೆ ಜಗದೀಶ್ ಶೆಟ್ಟರ್ ಅವರಿಗೆ ಅಮಿತ್ ಶಾ ಭೇಟಿ ಮಾಡಿದ್ದಾರೆ. ಅದು ಕೂಡ ಬೊಮ್ಮಾಯಿಯವರು ದೆಹಲಿ ತೊರೆದ ಕೆಲವೇ ಹೊತ್ತಿನಲ್ಲಿ. ಶೆಟ್ಟರ್ ಅವರ ಭೇಟಿ ಮುಂದಿನ ಚುನಾವಣೆಯ ವೇಳೆ ಕರ್ನಾಟಕದಲ್ಲಿ ಬಿಜೆಪಿ ಬೊಮ್ಮಾಯಿ ನಾಯಕತ್ವದಲ್ಲಿ ಎದುರಿಸುತ್ತದೆಯೇ ಅಥವಾ ಬೇರೊಬ್ಬರ ಸಾರಥ್ಯ ವಹಿಸಲಿದೆಯೇ ಎಂಬ ಊಹಾಪೋಹ ಎದುರಾಗಿದೆ. ತಮ್ಮದು ಕೇವಲ ಸೌಹಾರ್ದಯುತ ಭೇಟಿಯಷ್ಟೆ ಎಂದು ಶೆಟ್ಟರ್ ಮಾಧ್ಯಮ ಪ್ರತಿನಿಧಿಗಳ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಂಘ ಪರಿವಾರದ ಪುಂಡರ ಕೈಯಲ್ಲಿನ ಆಟಿಕೆಯ ಗೊಂಬೆ- ಸಿದ್ದರಾಮಯ್ಯ
ಬಿಜೆಪಿ ಮೂಲಗಳು, ಕಾದುನೋಡಿ, ಮುಂದೆ ಏನಾಗುತ್ತದೆ ಎಂದು ಹೇಳಿದ್ದು ಇನ್ನಷ್ಟು ರೆಕ್ಕೆಪುಕ್ಕ ಹುಟ್ಟಿಸಿದೆ. ಬೊಮ್ಮಾಯಿಯವರಿಗೆ ಈ ಎಲ್ಲಾ ವಿವಾದಗಳಿಂದ ದೂರ ಉಳಿದು ಬಜೆಟ್ ನಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವತ್ತ ಗಮನಹರಿಸಿ ಎಂದು ಬಿಜೆಪಿ ಹೈಕಮಾಂಡ್ ನಿಂದ ಸೂಚನೆ ಬಂದಿದೆ ಎಂದು ಹೇಳಲಾಗುತ್ತಿದೆ. ಬಜೆಟ್ ನಲ್ಲಿ ಘೋಷಿಸಿರುವ ಕಾರ್ಯಕ್ರಮಗಳನ್ನು ಈಡೇರಿಸುವತ್ತ ಗಮನ ಕೊಡಿ ಎಂದು ಇತ್ತೀಚೆಗೆ ಅಮಿತ್ ಶಾ ಅವರು ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದಾರೆ ಎಂದು ಬಿಜೆಪಿಯ ನಂಬಲರ್ಹ ಮೂಲಗಳು ತಿಳಿಸಿವೆ.