ಸಂತೋಷ್ ಆತ್ಮಹತ್ಯೆ: ಕುಟಂಬಸ್ಥರಿಗೆ ಕೆಪಿಸಿಸಿ 11 ಲಕ್ಷ ರೂ. ಪರಿಹಾರ; 1 ಕೋಟಿ ರೂ. ಪರಿಹಾರ ಘೋಷಿಸುವಂತೆ ಸರ್ಕಾರಕ್ಕೆ ಒತ್ತಾಯ
ಶೇ.40ರಷ್ಟು ಗುತ್ತಿಗೆ ಹಣದಲ್ಲಿ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಕುಟುಂಬಕ್ಕೆ ಕೆಪಿಸಿಸಿ ಬುಧವಾರ ರೂ.11 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಸರ್ಕಾರ ರೂ.1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದೆ.
Published: 14th April 2022 02:21 PM | Last Updated: 14th April 2022 03:57 PM | A+A A-

ಮೃತ ಸಂತೋಷ್ ಕುಟುಂಬಕ್ಕೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕರು
ಬೆಳಗಾವಿ: ಶೇ.40ರಷ್ಟು ಗುತ್ತಿಗೆ ಹಣದಲ್ಲಿ ಕಮೀಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಕುಟುಂಬಕ್ಕೆ ಕೆಪಿಸಿಸಿ ಬುಧವಾರ ರೂ.11 ಲಕ್ಷ ಪರಿಹಾರವನ್ನು ಘೋಷಿಸಿದ್ದು, ಸರ್ಕಾರ ರೂ.1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಿದೆ.
ಆತ್ಮಹತ್ಯೆಗೆ ಶರಣಾದ ಗುತ್ತಿಗೆದಾರ ಸಂತೋಷ್ ಪಾಟೀಲ್ ಅವರ ಹಿಂಡಲಗಾದ ವಿಜಯನಗರದಲ್ಲಿರುವ ಮನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್ ನಾಯಕರು ನಿನ್ನೆಯಷ್ಟೇ ಭೇಟಿ ನೀಡಿ, ಕುಟುಂಬಕ್ಕೆ ಸಾಂತ್ವನ ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಈಶ್ವರ ಖಂಡ್ರೆ ಸೇರಿ ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.
ಇದನ್ನೂ ಓದಿ: ಸಚಿವ ಕೆ ಎಸ್ ಈಶ್ವರಪ್ಪ ಬಂಧನಕ್ಕೆ ಆಗ್ರಹ; ಕಾಂಗ್ರೆಸ್ ನಾಯಕರಿಂದ ಸಿಎಂ ಬೊಮ್ಮಾಯಿ ಮನೆಗೆ ಮುತ್ತಿಗೆ ಯತ್ನ; ಪೊಲೀಸರ ವಶ
ಈ ವೇಳೆ ಸಂತೋಷ್ ಕುಟುಂಬದವರೊಂದಿಗೆ ಸಮಾಲೋಚನೆ ನಡೆಸಿದ ಕಾಂಗ್ರೆಸ್ ಮಖಂಡರು, ತಾಯಿ ಮತ್ತು ಪತ್ನಿಗೆ ಸಾಂತ್ವನ ಹೇಳಿದರು.
ಕಾಂಗ್ರೆಸ್ ಮುಖಂಡರನ್ನು ಕಾಣುತ್ತಿದ್ದಂತೆಯೇ ಸಂತೋಷ್ ಅವರ ತಾಯಿ ಕಣ್ಣೀರು ಹಾಕಿದರು. ಸಿದ್ದರಾಮಯ್ಯ ಅವರ ಮುಂದೆ ಮಗನ ಸಾವಿನ ನ್ಯಾಯ ಸಿಗಬೇಕೆಂದು ಮನವಿ ಮಾಡಿಕೊಂಡರು. ಇದೇ ವೇಳೆ ಸಂತೋಷ್ ಸಂಬಂಧಿಕರು ಕೂಡಲೇ ಆರೋಪಿಗಳನ್ನು ಜೈಲಿಗೆ ಹಾಕಬೇಕು ಎಂದು ಅಳಲು ತೋಡಿಕೊಂಡರು. ಈ ವೇಳೆ ಸಿದ್ದರಾಮಯ್ಯ ಅವರು ನ್ಯಾಯಕ್ಕಾಗಿ ಹೋರಾಡುತ್ತೇವೆಂದು ತಿಳಿಸಿದರು.
ಇದೇ ವೇಳೆ ಸಂತೋಷ್ ಪಾಟೀಲ್ ಅವರ ಕುಟುಂಬವನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ.ಶಿವಕುಮಾರ್ ಅವರು, ಕುಟುಂಬಕ್ಕೆ ರೂ.11 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದರು. ಇದೇ ವೇಳೆ ಸರ್ಕಾರ ಸಂತೋಷ್ ಕುಟುಂಬಕ್ಕೆ ರೂ.1 ಕೋಟಿ ಪರಿಹಾರವನ್ನು ಕೂಡಲೇ ನೀಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಸಾವಿನ ತನಿಖೆ ಮುಗಿಯುವವರೆಗೂ ಸಚಿವ ಈಶ್ವರಪ್ಪ ರಾಜೀನಾಮೆ ನೀಡುವುದಿಲ್ಲ: ಸಿಎಂ ಬೊಮ್ಮಾಯಿ
ಬೆಳಗಾವಿಯ ಹಿಂಡಲಗಾ ಗ್ರಾ.ಪಂ.ವ್ಯಾಪ್ತಿಯಲ್ಲಿ 108 ರಸ್ತೆ ಕಾಮಗಾರಿಗೆ ಸಂತೋಷ್ ಪಾಟೀಲ್ ರೂ.4 ಕೋಟಿ ಹಣ ಖರ್ಚು ಮಾಡಿದ್ದು, ಈ ಬಿಲ್ ಗಳನ್ನೂ ಸರ್ಕಾರ ಪಾವತಿ ಮಾಡಲಿ ಎಂದು ಆಗ್ರಹಿಸಿದರು.
ಅಲ್ಲದೆ, ಸಂತೋಷ್ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕು. ಸಂತೋಷ್ ಪತ್ನಿ ಜಯಶ್ರೀಗೆ ಸರ್ಕಾರಿ ನೌಕರಿ ಕೊಡಬೇಕು. ತಾತ್ಕಾಲಿಕವಾಗಿ ನಾವು ಜಯಶ್ರೀಗೆ ನೌಕರಿ ನೀಡುತ್ತೇವೆ. ಕೆಪಿಸಿಸಿಯಿಂದ ಸಂತೋಷ್ ಕುಟುಂಬಕ್ಕೆ 11 ಲಕ್ಷ ರೂ. ನೀಡುತ್ತೇವೆ. ಕೂಡಲೇ ಸಂತೋಷ್ ಮಾಡಿಸಿದ್ದ ಕಾಮಗಾರಿ ಬಿಲ್ ಪಾವತಿಸಲಿ ಎಂದು ಹೇಳಿದರು.
ಇದೇ ವೇಳೆ ಈಶ್ವರಪ್ಪ ಅವರ ರಕ್ಷಣೆಗೆ ಯತ್ನಿಸುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ ಅವರು,`ಸರ್ಕಾರದ ಅನುಮತಿಯಿಲ್ಲದೆ ಗುತ್ತಿಗೆದಾರರು ಇಷ್ಟೊಂದು ದೊಡ್ಡ ಪ್ರಮಾಣದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವೇ? ಅವರು ಕೈಗೆತ್ತಿಕೊಂಡ ಕಾಮಗಾರಿಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ಇತ್ತು. ಸರ್ಕಾರ ಕೂಡಲೇ ರೂ.4 ಕೋಟಿ ಬಿಲ್ ನ್ನು ಪಾವತಿ ಮಾಡಬೇಕು ಎಂದು ತಿಳಿಸಿದರು.
ಪ್ರಸ್ತುತ ಇರುವ ಪತ್ರಗಳು ಹಾಗೂ ದಾಖಲೆಗಳೆಲ್ಲವೂ ಈಶ್ವರಪ್ಪ ಅವರತ್ತವೇ ಬೆರಳು ತೋರಿಸುತ್ತಿದೆ. ಪೊಲೀಸರು ಕೂಡಲೇ ಸಚಿವ ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಹಾಗೂ ಕೊಲೆ ಪ್ರಕರಣ ದಾಖಲಿಸಬೇಕು ಎಂದರು.
ಇದನ್ನೂ ಓದಿ: ಅಪ್ಪ ಎಲ್ಲಿ ಎಂದು ಪಾಪು ಕೇಳುತ್ತಲೇ ಇದೆ: ಕಣ್ಣೀರಿಟ್ಟ ಸಂತೋಷ್ ಪಾಟೀಲ್ ಪತ್ನಿ
ಸಿದ್ದರಾಮಯ್ಯ ಅವರು ಮಾತನಾಡಿ, ಸಂತೋಷ್ ಅವರ ಪತ್ನಿ ಹಾಗೂ ತಾಯಿ ಈಶ್ವರಪ್ಪ ವಿರುದ್ಧ ಆರೋಪ ಮಾಡಿದ್ದಾರೆ. ಅಧಿಕಾರಿಗಳ ಒಪ್ಪಿಗೆ ಅಥವಾ ಅನುಮತಿ ಇಲ್ಲದೆ ಯಾವುದೇ ಗುತ್ತಿಗೆದಾರರು 4 ಕೋಟಿ ರೂಪಾಯಿಗಳ ರಸ್ತೆ ಕಾಮಗಾರಿ ನಡೆಸಲು ಸಾಧ್ಯವೇ. ಪತಿ ಬಳಿ ಈಶ್ವರಪ್ಪ ಅವರು ಶೇ.40 ಕಮಿಷನ್"ಗೆ ಬೇಡಿಕೆ ಇಟ್ಟಿದ್ದರು ಎಂದು ಸಂತೋಷ್ ಅವರ ಪತ್ನಿ ಹೇಳಿದ್ದಾರೆಂದು ಹೇಳಿದ್ದಾರೆ.
ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಮಾತನಾಡಿ, ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಈಶ್ವರಪ್ಪ ಪರವಾಗಿ ಸಿಎಂ ಬೊಮ್ಮಾಯಿ ಸರ್ಕಾರ ನಿಲ್ಲುತ್ತಿದೆ. ಬೊಮ್ಮಾಯಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ. ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ತೊಡಗಿರುವುದನ್ನು ತೋರಿಸುತ್ತಿದೆ. ಬಿಜೆಪಿ ಸಚಿವರನ್ನು ಜೈಲಿಗೆ ಕಳುಹಿಸುವ ಸಮಯ ಬಂದಿದೆ. ಸಂತೋಷ್ ಅವರ ಕುಟುಂಬದೊಂದಿಗೆ ನಾವು ನಿಲ್ಲುತ್ತೇವೆ. ಈ ಪ್ರಕರಣವನ್ನು ನಮ್ಮ ಪಕ್ಷ ಗಂಭೀರವಾಗಿ ತೆಗೆದುಕೊಳ್ಳಲಿದ್ದು, ಈಶ್ವರಪ್ಪ ಅವರಿಗೆ ಶಿಕ್ಷೆಯಾಗುವಂತೆ ಮಾಡಲಾಗುತ್ತದೆ ಎಂದಿದ್ದಾರೆ.