'ನನಗೆ ಇದೊಂದು ಅಗ್ನಿಪರೀಕ್ಷೆ, ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ, ಶೀಘ್ರವೇ ಆರೋಪ ಮುಕ್ತನಾಗಿ ಹೊರಬರುತ್ತೇನೆ': ಕೆ ಎಸ್ ಈಶ್ವರಪ್ಪ
ನನಗೆ ಇದೊಂದು ಅಗ್ನಿಪರೀಕ್ಷೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ, ನನ್ನ ಮೇಲೆ ಆಪಾದನೆ ಬಂದಿದೆ. ನನ್ನ ಮೇಲಿನ ಆಪಾದನೆಯಿಂದ ಮುಕ್ತವಾಗಿ ಹೊರಬರಬೇಕೆಂದು ನನ್ನ ಬೆಂಬಲಿಗರು ಒಪ್ಪಿಕೊಂಡಿದ್ದಾರೆ. ನನ್ನ ಅನುಯಾಯಿಗಳಿಗೆ ಬಹಳ ನೋವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
Published: 15th April 2022 02:02 PM | Last Updated: 15th April 2022 04:26 PM | A+A A-

ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ನನಗೆ ಇದೊಂದು ಅಗ್ನಿಪರೀಕ್ಷೆ, ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದಾರೆ, ನನ್ನ ಮೇಲೆ ಆಪಾದನೆ ಬಂದಿದೆ. ನನ್ನ ಮೇಲಿನ ಆಪಾದನೆಯಿಂದ ಮುಕ್ತವಾಗಿ ಹೊರಬರಬೇಕೆಂದು ನನ್ನ ಬೆಂಬಲಿಗರು ಒಪ್ಪಿಕೊಂಡಿದ್ದಾರೆ. ನನ್ನ ಅನುಯಾಯಿಗಳಿಗೆ ಬಹಳ ನೋವಾಗಿದೆ. ಅವರಿಗೆ ಮನವರಿಕೆ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು, ಹಿರಿಯರು, ಸ್ವಾಮೀಜಿಗಳು, ಪಕ್ಷದ ನಾಯಕರ ಬೆಂಬಲದಿಂದ ಈ ವಿಚಾರದಲ್ಲಿ ಗೆದ್ದು ಬರುತ್ತೇನೆ ಎಂಬ ವಿಶ್ವಾಸವಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಹೇಳಿದ್ದಾರೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಕ್ಕೆ ಗುರಿಯಾಗಿರುವ ಕೆ ಎಸ್ ಈಶ್ವರಪ್ಪನವರು ಇಂದು ಸಂಜೆ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ತಲುಪಿಸುವುದಾಗಿ ಹೇಳಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಸಚಿವರಾಗಿ ಇಂದು ಕೊನೆಯ ದಿನ ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ತೇವರ ಚಟ್ನಹಳ್ಳಿಯ ಶುಭಶ್ರೀ ಸಮುದಾಯ ಭವನ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದ ಎಲ್ಲಾ ಮಂತ್ರಿಗಳು, ಬಿಜೆಪಿ ಶಾಸಕರು ನನ್ನ ಮೇಲೆ ತೋರಿಸುತ್ತಿರುವ ಪ್ರೀತಿಯಿಂದ ಭಾವುಕನಾಗಿದ್ದೇನೆ, ಇವರೆಲ್ಲರ ಪ್ರೀತಿಯಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಸಿದವರಿಗೆ ತಕ್ಕ ಪಾಠ ಸಿಗುತ್ತದೆ, ನನಗೆ ನ್ಯಾಯ ಸಿಗುತ್ತದೆ ಎಂದು ಭಾವಿಸಿದ್ದೇನೆ ಎಂದರು.
ನಾನು ಸಚಿವನಾಗಿ ನಮ್ಮ ಇಲಾಖೆಯಲ್ಲಿ ನಿರೀಕ್ಷೆಗೆ ಮೀರಿ ಕೆಲಸಗಳಾಗಿವೆ. ಜಲಧಾರೆ ಯೋಜನೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಬಡವರಿಗೆ ಉದ್ಯೋಗ ಸೃಷ್ಟಿಯಲ್ಲಿ ನರೇಗ ಯೋಜನೆಯಡಿ ಕೆಲಸ ವೇಗವಾಗಿ ಆಗುತ್ತಿದೆ. ನರೇಗಾ ಯೋಜನೆಯಡಿ ಕೂಲಿ ಕಾರ್ಮಿಕರ ವೇತನ ಹೆಚ್ಚಳವಾಗಿದೆ. ಮನೆ ಮನೆಗೆ ನಳ್ಳಿ ಯೋಜನೆಯ ಕೆಲಸ ಕೂಡ ವೇಗವಾಗಿ ನಡೆಯುತ್ತಿದೆ. ಪ್ರಧಾನ ಮಂತ್ರಿ ರಸ್ತೆ ಯೋಜನೆ ಕೆಲಸ ಕೂಡ ವೇಗವಾಗಿ ನಡೆದಿದೆ ಎಂದರು.
ಇದನ್ನೂ ಓದಿ: ಸಂತೋಷ್ ಪಾಟೀಲ್ ಸೂಸೈಡ್ ಕೇಸ್: ಬೆಳಗಾವಿ ಜಿಪಂ ಸಿಇಒ ರಜೆ, ತನಿಖೆ ಮತ್ತಷ್ಟು ವಿಳಂಬ
ನಮ್ಮ ಮನೆ ದೇವರಾಣೆಯಾಗಿ ಆರೋಪದಿಂದ ಮುಕ್ತನಾಗುತ್ತೇನೆ; ನನ್ನ ಮೇಲೆ ಬಂದಿರುವ ಆರೋಪದಿಂದ ಶೀಘ್ರ ಮುಕ್ತನಾಗುತ್ತೇನೆ ಎಂಬ ವಿಶ್ವಾಸ ನನಗಿದೆ. ನಮ್ಮ ಮನೆದೇವರಾಣೆಯಾಗಿ ಶೀಘ್ರ ಆರೋಪ ಮುಕ್ತನಾಗುತ್ತೇನೆ ಎಂದು ಈ ಸಂದರ್ಭದಲ್ಲಿ ಹೇಳುತ್ತೇನೆ ಎಂದರು.
ಬಲಗಡೆಯಿಂದ ಬಿದ್ದ ಹೂವು: ಇನ್ನು ಇಂದು ಈಶ್ವರಪ್ಪನವರು ಶುಭಶ್ರೀ ಸಮುದಾಯ ಭವನದ ಆವರಣದಲ್ಲಿರುವ ಗಣಪತಿ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿದ ಸಂದರ್ಭದಲ್ಲಿ ಬಲಗಡೆಯಿಂದ ಹೂವು ಬಿದ್ದಿದೆ. ಇದರಿಂದ ಬಹಳ ಸಂತೋಷಗೊಂಡ ಈಶ್ವರಪ್ಪ ಮತ್ತು ಅವರ ಬೆಂಬಲಿಗರು ಶುಭಸೂಚನೆ ಎಂದರು.
ಬಲಗಡೆಯಿಂದ ಅಷ್ಟು ದೊಡ್ಡ ಪ್ರಸಾದ ಬಿದ್ದಿದ್ದು ನಾನು ಇದುವರೆಗೆ ನೋಡಿರಲಿಲ್ಲ. ನನಗೆ ಆಶ್ಚರ್ಯ ಮತ್ತು ಸಂತೋಷವಾಯಿತು. ನಾವು ಪ್ರಾಮಾಣಿಕವಾಗಿದ್ದೇವೆ, ಸತ್ಯದಲ್ಲಿ ನಡೆಯುತ್ತಿದ್ದೇವೆ ಎನ್ನುವುದಕ್ಕೆ ಆ ಗಣಪತಿ ಮೂರ್ತಿಯಿಂದ ಬಿದ್ದ ಹೂವುಗಳೇ ಸಾಕ್ಷಿ ಎಂದರು.