ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಬಿಜೆಪಿಗೆ ಹಿನ್ನಡೆ? ವಿಧಾನಸಭೆ ಚುನಾವಣೆ ಮುನ್ನ ವಿವಾದಗಳಿಂದ ದೂರವುಳಿಯಲು ಕೇಸರಿ ಪಕ್ಷ ಯತ್ನ
ನಿನ್ನೆ ಗುರುವಾರ ಮಧ್ಯಾಹ್ನದವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿದ್ದ ಕೆ ಎಸ್ ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ ಮಧ್ಯೆ ಪ್ರವೇಶದ ನಂತರ ತಮ್ಮ ನಿರ್ಧಾರವನ್ನು ಸಡಿಲಿಸಿ ಮೃದುವಾದರು ಎಂದು ಕೇಳಿಬರುತ್ತಿದೆ. ಆದರೆ ರಾಜೀನಾಮೆ ನೀಡುವುದು ತಮ್ಮದೇ ನಿರ್ಧಾರ ಎಂದು ಕೆ ಎಸ್ ಈಶ್ವರಪ್ಪನವರು ಹೇಳುತ್ತ
Published: 15th April 2022 09:52 AM | Last Updated: 15th April 2022 12:55 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ನಿನ್ನೆ ಗುರುವಾರ ಮಧ್ಯಾಹ್ನದವರೆಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹೇಳುತ್ತಿದ್ದ ಕೆ ಎಸ್ ಈಶ್ವರಪ್ಪನವರು ಬಿಜೆಪಿ ಹೈಕಮಾಂಡ್ ಮಧ್ಯೆ ಪ್ರವೇಶದ ನಂತರ ತಮ್ಮ ನಿರ್ಧಾರವನ್ನು ಸಡಿಲಿಸಿ ಮೃದುವಾದರು ಎಂದು ಕೇಳಿಬರುತ್ತಿದೆ. ಆದರೆ ರಾಜೀನಾಮೆ ನೀಡುವುದು ತಮ್ಮದೇ ನಿರ್ಧಾರ ಎಂದು ಕೆ ಎಸ್ ಈಶ್ವರಪ್ಪನವರು ಹೇಳುತ್ತಿದ್ದಾರೆ.
ಮುಂದಿನ ವರ್ಷ ಏಪ್ರಿಲ್ ನಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಯಾವುದೇ ಕಾರಣಕ್ಕೂ ಭ್ರಷ್ಟಾಚಾರದ ಆರೋಪವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳಬಾರದೆಂಬ ಯೋಚನೆಯಲ್ಲಿ ಬಿಜೆಪಿಯಿದೆ. ಇದುವೇ ಇಂದು ಈಶ್ವರಪ್ಪನವರು ಸಚಿವ ಸ್ಥಾನದಿಂದ ಕೆಳಗಿಳಿಯಲು ಕಾರಣ ಎಂದು ಹೇಳಲಾಗುತ್ತಿದೆ.
ಸಾರ್ವಜನಿಕ ವಲಯದಲ್ಲಿ ಬಿಜೆಪಿ ಬಗ್ಗೆ ಯಾವುದೇ ಋಣಾತ್ಮಕ ಆಲೋಚನೆಗಳು ಬರದಂತೆ ನೋಡಿಕೊಳ್ಳಲು ರಾಜೀನಾಮೆ ಕೊಡುವುದು ಅನಿವಾರ್ಯವಾಗಿದೆ. ಹಾಗೆಂದು ರಾಜೀನಾಮೆ ನೀಡಿದವರು ತಪ್ಪು ಮಾಡಿದ್ದಾರೆ ಎಂದರ್ಥವಲ್ಲ ಎಂದು ಬಿಜೆಪಿಯ ಹಿರಿಯ ನಾಯಕರು ಹೇಳುತ್ತಾರೆ.
ಹೈಕಮಾಂಡ್ ನಿಂದ ಯಾವುದೇ ರೀತಿಯಲ್ಲಿ ಒತ್ತಡವಿಲ್ಲ, ಆದರೆ ಈ ಹಿಂದೆ ಕೇಸುಗಳು, ಆರೋಪಗಳು ಬಂದಾಗ ಕೆಲವು ಬಿಜೆಪಿ ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದನ್ನು ಉದಾಹರಣೆಯಾಗಿ ನೀಡಲಾಗಿದೆ. ಈ ಹೊತ್ತಿನಲ್ಲಿ ಪಕ್ಷವನ್ನು ಮತ್ತು ಸರ್ಕಾರವನ್ನು ಮುಜುಗರದಿಂದ ಪಾರು ಮಾಡಲು ಈಶ್ವರಪ್ಪನವರೇ ಸ್ವತಃ ರಾಜೀನಾಮೆ ನೀಡುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಆರ್ ಎಸ್ ಎಸ್ ನಿಷ್ಠ, ಪ್ರಖರ ಹಿಂದೂವಾದಿ, 'ವಿವಾದಪ್ರಿಯ' ಈಶ್ವರಪ್ಪ ತಲೆದಂಡ! ಬಿಜೆಪಿ ನಾಗಾಲೋಟಕ್ಕೆ ಪರ್ಸೆಂಟೇಜ್ ಬ್ರೇಕ್?
ಸಂತೋಷ್ ಪಾಟೀಲ್ ಆತ್ಮಹತ್ಯೆ ಕೇಸಿನಲ್ಲಿ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿದೆ. ವರ್ಕ್ ಆರ್ಡರ್ ಅಥವಾ ಮಂಜೂರಾತಿ, ಯೋಜನೆ ಇಲ್ಲದೆ ಅದು ಮುಖ್ಯಮಂತ್ರಿಗಳೇ ಬಾಯಿಯಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಸೂಚಿಸಿದರೂ ಕಾಮಗಾರಿ ಕೈಗೆತ್ತಿಕೊಳ್ಳುವಂತಿಲ್ಲ, ಅದನ್ನು ಒಪ್ಪಲಾಗದು. ಪ್ರತಿಯೊಂದಕ್ಕೂ, ದಾಖಲೆಗಳು ಇರಬೇಕಾಗುತ್ತದೆ. ಆದರೆ ಈಶ್ವರಪ್ಪ ನಿರ್ದೇಶನದ ಮೇರೆಗೆ ಈ ಕೃತ್ಯ ನಡೆದಿದೆ ಎಂದು ಮೃತಪಟ್ಟಿರುವ ವ್ಯಕ್ತಿ ಆರೋಪಿಸಿದ್ದಾರೆ ಎಂಬ ವಾಟ್ಸಾಪ್ ಸಂದೇಶ ಹರಿದಾಡುತ್ತಿದೆ. ಈಶ್ವರಪ್ಪ ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಿರುವುದು ಬೇರೆ ವಿಚಾರ. ಆದರೆ ಸಮಾಜದಲ್ಲಿ ಮೊದಲನೆಯದು, ಸಹಾನುಭೂತಿ ಮೃತಪಟ್ಟವರ ಮೇಲೆ ಹೋಗುತ್ತದೆ ಎಂದು ನಾಯಕರು ಹೇಳುತ್ತಾರೆ.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಸಾಮಾನ್ಯವಾಗಿ ಸಮಾಜದಲ್ಲಿ ಮೃತರ ಬಗ್ಗೆ ಸಹಾನುಭೂತಿ ಇರುತ್ತದೆ. ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ. ತನಿಖೆಯ ನಂತರ ಸತ್ಯ ಹೊರಬರಲಿದೆ. ಸಂತೋಷ್ ಸಾವಿನ ಸುತ್ತ ಹಲವು ಪ್ರಶ್ನೆಗಳಿವೆ. ತನಿಖೆಯ ನಂತರವಷ್ಟೇ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೋ ಅಥವಾ ಇನ್ನೇನಾಗಿದೆಯೋ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ಹೇಳಿದ್ದಾರೆ.