ಶನಿವಾರದಿಂದ ಎರಡು ದಿನ ಬಿಜೆಪಿ ರಾಜ್ಯ ಕಾರ್ಯಕಾರಿಣಿ: ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ನಿರೀಕ್ಷೆ
ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಶನಿವಾರದಿಂದ ಎರಡು ದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ.
Published: 16th April 2022 12:32 AM | Last Updated: 16th April 2022 01:05 PM | A+A A-

ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆಯ ಸಿದ್ದತೆ ಪರಿಶೀಲಿಸಿದ ನಳಿನ್ ಕುಮಾರ್ ಕಟೀಲ್
ಬೆಂಗಳೂರು/ಹೊಸಪೇಟೆ: ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಶನಿವಾರದಿಂದ ಎರಡು ದಿನ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸಭೆ ನಡೆಯಲಿದೆ. ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಪಾಲ್ಗೊಳ್ಳುತ್ತಿರುವುದು ವಿಶೇಷವಾಗಿದೆ. ಈ ಮಧ್ಯೆ 40 ಪರ್ಸೆಂಟ್ ಆರೋಪಕ್ಕೆ ಕೆ. ಎಸ್. ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಕಾರ್ಯಕಾರಿಣಿಯ ಗಮನ ಸೆಳೆದಿದೆ.
ಎರಡು ದಿನಗಳ ರಾಜ್ಯ ಕಾರ್ಯಕಾರಿಣಿಯಲ್ಲಿ ಸಚಿವರು, ಶಾಸಕರು, ಪಕ್ಷದ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದು, ಮುಂಬರುವ 2023ರ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಹೇಗೆ ತಳಮಟ್ಟದಿಂದ ಸಂಘಟಿಸಬೇಕು ಎನ್ನುವ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆಯಲಿದೆ.
ಈಗಾಗಲೇ ರಾಜ್ಯ ನಾಯಕರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳು ಹಾಗೂ ಎರಡೂ ಸರ್ಕಾರಗಳು ನೀಡುತ್ತಿರುವ ಯೋಜನೆಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಮೂರು ತಂಡಗಳಾಗಿ ಪ್ರವಾಸ ಆರಂಭಿಸಿದ್ದು, ರಾಜ್ಯ ಕಾರ್ಯಕಾರಿಣಿ ಮುಗಿದ ನಂತರ ಮೂರು ತಂಡಗಳ ರಾಜ್ಯ ಪ್ರವಾಸ ಮತ್ತೆ ಮುಂದುವರೆಯಲಿದೆ. ಇದರ ಹೊರತಾಗಿ ಚುನಾವಣೆ ಎದುರಿಸಲು ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ರಾಜ್ಯ ನಾಯಕರವರೆಗೂ ಏನೆಲ್ಲ ಕೆಲಸಗಳು ಮಾಡಬೇಕು ಎನ್ನುವ ಕುರಿತಂತೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಏಪ್ರಿಲ್ 16 ಮತ್ತು 17 ರಂದು ನಡೆಯಲಿರುವ ರಾಜ್ಯ ಕಾರ್ಯಕಾರಿಣಿಯ ಹಿನ್ನೆಲೆಯಲ್ಲಿ ಪೂರ್ವ ಸಿದ್ಧತೆಯನ್ನು ವೀಕ್ಷಿಸಿದರು.#VijayaKaryakarini pic.twitter.com/EPF25li0zp
— BJP Karnataka (@BJP4Karnataka) April 15, 2022
ಈಶ್ವರಪ್ಪ ಅವರನ್ನು ಬಂಧಿಸುವಂತೆ ಆಗ್ರಹಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಮುಂದಾಗಿದ್ದು, ಪ್ರತಿತಂತ್ರ ರೂಪಿಸುವ ಕುರಿತಂತೆಯೂ ಕಾರ್ಯಕಾರಿಣಿಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ. ಅಲ್ಲದೇ ಕಾಂಗ್ರೆಸ್ ವಿರುದ್ಧ ಹೋರಾಟ ರೂಪಿಸುವ ಕುರಿತಂತೆಯೂ ಪಕ್ಷದ ಕೋರ್ ಕಮಿಟಿ ಸಭೆಯಲ್ಲಿ ನಿರ್ಧಾರವಾಗುವ ಸಾಧ್ಯತೆಯಿದೆ.
ಸಂಪುಟ ಪುನಾರಚಣೆಗೆ ಗ್ರೀನ್ ಸಿಗ್ನಲ್ ನಿರೀಕ್ಷೆ: ಪಕ್ಷದಲ್ಲಿ ಬಹುದಿನಗಳಿಂದ ಚರ್ಚೆಯಾಗುತ್ತಿರುವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಜೆ.ಪಿ. ನಡ್ಡಾ ಮುಖ್ಯಮಂತ್ರಿಗೆ ಏನಾದರೂ ಸೂಚನೆ ನೀಡಬಹುದು ಎಂಬ ನಿರೀಕ್ಷೆ ಅನೇಕ ಮಂದಿ ಸಚಿವಕಾಂಕ್ಷಿಗಳಲ್ಲಿದೆ.
ಸಂಪುಟದಲ್ಲಿ ಖಾಲಿ ಇರುವ ನಾಲ್ಕು ಸ್ಥಾನದ ಜೊತೆಗೆ ಈಗ ಕೆ.ಎಸ್. ಈಶ್ವರಪ್ಪ ಅವರ ರಾಜೀನಾಮೆಯಿಂದ ಮತ್ತೊಂದು ಸ್ಥಾನ ತೆರವಾಗಿದ್ದು, ಖಾಲಿ ಇರುವ ಸ್ಥಾನಗಳನ್ನಾದರೂ ಭರ್ತಿ ಮಾಡಬೇಕೆಂಬ ಒತ್ತಡ ಸಚಿವಕಾಂಕ್ಷಿಗಳಲ್ಲಿ ಹೆಚ್ಚಾಗಿದೆ. ಜೆ. ಪಿ. ನಡ್ಡಾ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗೆ ಅನುಮತಿ ನೀಡಿದರೆ, ಈ ತಿಂಗಳಾಂತ್ಯದಲ್ಲಿ ಸಂಪುಟಕ್ಕೆ ಹೊಸಬರ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿದೆ.