ಸಂತೋಷ್ ಪಾಟೀಲ್ ಸಾವು ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ: ಈಶ್ವರ್ ಖಂಡ್ರೆ ಆಗ್ರಹ
ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜ್ಯವಾಗಲು ಬಿಜೆಪಿಯವರೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
Published: 18th April 2022 07:51 AM | Last Updated: 18th April 2022 01:03 PM | A+A A-

ಈಶ್ವರ ಖಂಡ್ರೆ
ಕಲಬುರಗಿ: ರಾಜ್ಯ ಬಿಜೆಪಿ ಸರ್ಕಾರ ಬ್ರಹ್ಮಾಂಡ ಭ್ರಷ್ಟಾಚಾರ ನಡೆಸುತ್ತಿದೆ. ಕರ್ನಾಟಕ ಭ್ರಷ್ಟಾಚಾರದ ರಾಜಧಾನಿಯಾಗಲು ಬಿಜೆಪಿಯವರೇ ಕಾರಣ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆರೋಪಿಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪ ಹೆಸರು ಬರೆದು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸಬೇಕಿತ್ತು. ಆದರೆ ಸರ್ಕಾರ ಈಶ್ವರಪ್ಪ ಅವರನ್ನು ರಕ್ಷಿಸುವ ಕೆಲಸ ಮಾಡುತ್ತಿದೆ ಎಂದು ಖಂಡ್ರೆ ಇದೇ ವೇಳೆ ಗುಡುಗಿದರು.
ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ ಈಶ್ವರ್ ಖಂಡ್ರೆ, ತನಿಖೆ ಪ್ರಾರಂಭವಾಗುವ ಮುನ್ನವೇ ಈಶ್ವರಪ್ಪ ತಪ್ಪು ಮಾಡಿಲ್ಲ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಬಿಜೆಪಿ ನಾಯಕರ ವರ್ತನೆಯಿಂದಲೇ ರಾಜ್ಯದ ಜನತೆ ಎಲ್ಲವನ್ನೂ ತಿಳಿದುಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಗಲಾಟೆ ವಿಷಯವಾಗಿ ಪ್ರತಿಯೊಬ್ಬರು ಸಾಮರಸ್ಯ ಕಾಪಾಡಬೇಕು. ಯಾರೇ ತಪ್ಪು ಮಾಡಿದ್ರು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಭಾವನಾತ್ಮಕ ವಿಷಯಗಳನ್ನು ಮುನ್ನೆಲೆಗೆ ಬಿಟ್ಟು ಬಿಜೆಪಿ ತನ್ನ ತಪ್ಪುಗಳನ್ನು ಮುಚ್ಚಿ ಹಾಕುತ್ತಿದೆ. ಜನರು ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದರು. ಗಲಭೆಗಳಿಗೆ ಸರ್ಕಾರ ಕುಮ್ಮಕ್ಕು ನೀಡ್ತಿದೆ. ತಮ್ಮ ತಪ್ಪು ಮುಚ್ಚಿಕೊಳ್ಳಲು ಭಾವನಾತ್ಮಕ ವಿಚಾರಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಬಿಜೆಪಿ ಮಾಡ್ತಿದೆ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕಾರ್ಯಕರ್ತರೆಂದರೆ ಬಿಜೆಪಿಗೆ ಬಳಸಿ ಬೀಸಾಡುವ ಟೂಲ್ಕಿಟ್; ಹಣ ಅಧಿಕಾರ ಇರುವವರ ಮುಂದೆ ಕೇವಲ ಟೈರ್ ಕೆಳಗಿಡುವ ಲಿಂಬೆಹಣ್ಣು ಅಷ್ಟೇ!
‘ನಾ ಖಾವುಂಗಾ, ನಾ ಖಾನೆ ದುಂಗಾ’ ಎಂದು ಸದಾ ಹೇಳುವ ಪ್ರಧಾನಿ ನರೇಂದ್ರ ಮೋದಿ ಕೂಡಲೇ ಮಧ್ಯಪ್ರವೇಶಿಸಿ ಕರ್ನಾಟಕವನ್ನು ವ್ಯಾಪಕ ಭ್ರಷ್ಟಾಚಾರದಿಂದ ಪಾರು ಮಾಡಬೇಕು. ಪ್ರಧಾನಿ ಮತ್ತು ಸಿಎಂ ಮೌನ ವಹಿಸಿದರೆ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದರ್ಥ ಎಂದು ಖಂಡ್ರೆ ಹೇಳಿದರು.
ಹಿಂದಿನ ಕಾಂಗ್ರೆಸ್ ಆಡಳಿತದ ನಾಯಕರು ಗುತ್ತಿಗೆದಾರರಿಂದ ಕಮಿಷನ್ ಕೇಳಿದ್ದರು ಎಂಬ ಬಿಜೆಪಿ ಮುಖಂಡರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಸರ್ಕಾರವು ಕಾಂಗ್ರೆಸ್ ನಾಯಕರ ವಿರುದ್ಧವೂ ತನಿಖೆ ನಡೆಸಲಿ, ಆರೋಪ ನಿಜವೆಂದು ಕಂಡುಬಂದರೆ ಕಾನೂನು ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.
ಪಿಎಸ್ಐ ಸಿಇಟಿ ಹಗರಣದ ಅಕ್ರಮಗಳನ್ನು ಆರಂಭದಲ್ಲಿ ನಿರಾಕರಿಸಿದ ಬಿಜೆಪಿ ಸರ್ಕಾರ ನಂತರ ಸಿಐಡಿ ತನಿಖೆಗೆ ಆದೇಶಿಸಿತು. ಸಿಐಡಿ ಈಗಾಗಲೇ ಏಳು ಆರೋಪಿಗಳನ್ನು ಬಂಧಿಸಿದೆ.“ನಾವು ಸಿಐಡಿ ವಿಚಾರಣೆಯನ್ನು ನಂಬುವುದಿಲ್ಲ. ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಬೇಕು' ಎಂದು ಖಂಡ್ರೆ ಆಗ್ರಹಿಸಿದರು.