ಕಾಂಗ್ರೆಸ್ ಮುಂದಿನ ಬಾರಿ ವಿಪಕ್ಷ ಸ್ಥಾನದಲ್ಲೂ ಇರಲ್ಲ; ದಿಂಗಾಲೇಶ್ವರ ಸ್ವಾಮಿಗಳು ಆರೋಪಿಸುವ ಬದಲು ದಾಖಲೆ ಕೊಡಲಿ: ಕೆ ಎಸ್ ಈಶ್ವರಪ್ಪ
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ ಎಸ್ ಈಶ್ವರಪ್ಪ ಇಂದು ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
Published: 20th April 2022 11:26 AM | Last Updated: 20th April 2022 12:38 PM | A+A A-

ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಕೆ ಎಸ್ ಈಶ್ವರಪ್ಪ ಇಂದು ಬುಧವಾರ ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದಾರೆ.
ಎಂದಿನಂತೆ ಪ್ರತಿಪಕ್ಷ ಕಾಂಗ್ರೆಸ್, ಡಿ ಕೆ ಶಿವಕುಮಾರ್, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿರುವ ಈಶ್ವರಪ್ಪ, ಹುಬ್ಬಳ್ಳಿಯ ಪೊಲೀಸ್ ಠಾಣೆ ಮೇಲಿನ ದಾಳಿಯಲ್ಲಿ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರ ಮಠಗಳಿಂದಲೂ ಕಮಿಷನ್ ಗೆ ಬೇಡಿಕೆಯಿಡುತ್ತದೆ ಎಂದು ದಿಂಗಾಲೇಶ್ವರ ಸ್ವಾಮೀಜಿ ನೀಡಿರುವ ಹೇಳಿಕೆ ಬಗ್ಗೆ ಕೂಡ ಮಾತನಾಡಿದ್ದಾರೆ.
ಮಠಗಳಿಂದಲೂ ಕಮಿಷನ್ ಕೇಳುತ್ತಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ಆರೋಪಿಸುವ ಬದಲಿಗೆ ದಾಖಲೆಗಳನ್ನು ನೀಡಲಿ. ಬಾಯಿಗೆ ಬಂದಂತೆ ಮಾತನಾಡುವುದು ಬಿಡಬೇಕು. ಯಾವುದೇ ಇಲಾಖೆಗೆ ಕಮಿಷನ್ ಕೊಟ್ಟಿದ್ದರೆ ದಾಖಲೆ
ನೀಡಿ ಎಂದು ಈಶ್ವರಪ್ಪ ಹೇಳಿದ್ದಾರೆ.
ಕಾಂಗ್ರೆಸ್ ವಿಪಕ್ಷ ಸ್ಥಾನದಲ್ಲೂ ಇರಲ್ಲ: ಕೋಮು ಗಲಭೆ ಸೃಷ್ಟಿಸುಸುವುದು ತಪ್ಪೆಂದು ಹೇಳುವ ಧೈರ್ಯ ಡಿಕೆಶಿ, ಸಿದ್ದರಾಮಯ್ಯಗೆ ಇಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಅಭಿವೃದ್ಧಿ ಕೆಲಸಗಳನ್ನು ಮಾಡಲಿಲ್ಲ. ವೀರಶೈವ ಲಿಂಗಾಯತರನ್ನು
ಒಡೆಯುವ ಕೆಲಸ ಮಾಡಿದ್ದರು . ಹೀಗಾಗಿ ರಾಜ್ಯದ ಜನರು ಅಧಿಕಾರವನ್ನು ಕೊಡಲಿಲ್ಲ. ಕಾಂಗ್ರೆಸ್ ಈಗಲಾದರೂ ಜನಪರ ಕೆಲಸಮಾಡಲಿ ಎಂದರು.
ಇದನ್ನೂ ಓದಿ: ಮಠದಿಂದಲೂ 30 ಪರ್ಸೆಂಟ್ ಕಮಿಷನ್: ತಾವು ಅನುದಾನ ಪಡೆಯಲ್ಲ ಎಂದ ಜಯಮೃತ್ಯುಂಜಯ ಸ್ವಾಮೀಜಿ
ಶಾಂತವಾಗಿದ್ದ ಕರ್ನಾಟಕದಲ್ಲಿ ಗಲಭೆಗಳನ್ನು ಸೃಷ್ಟಿಸುತ್ತಿದ್ದಾರೆ.ಮೌಲ್ವಿಯ ಈ ನಡೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೂಡ ಮೌಲ್ವಿ ಪಕ್ಕದಲ್ಲೇ ನಿಂತಿದ್ದಾರೆ. ಅಲ್ತಾಫ್ ಹಳ್ಳೂರ ಕಲ್ಲು ಹೊಡೆದಿರುವುದನ್ನು ನೋಡಿದ್ದೇನೆ. ಆಂಜನೇಸ್ವಾಮಿ ದೇಗುಲ, ಆಸ್ಪತ್ರೆ ,ಠಾಣೆ ಮೇಲೆ ಕಲ್ಲೆಸೆತವಾಗಿದೆ. ದೊಂಬಿ ಮಾಡಲು ತೀರ್ಮಾನಿಸಿ ಅಶಾಂತಿ ಸೃಷ್ಟಿಸಿದ್ದಾರೆ. ಆರ್ ಎಸ್ಎಸ್ ಮುರ್ದಾಬಾದ್ ಎಂದು ಘೋಷಣೆ ಕೂಗಿದ್ದಾರೆ. ಕಲ್ಲು ತೂರಿದ ಪುಂಡರನ್ನು ಎದುರಿಸುವ ಶಕ್ತಿ ಹಿಂದೂಗಳಿಗಿದೆ. ಆದರೆ ಹಿಂದೂಗಳು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಲ್ಲ. ಕೇಂದ್ರ , ರಾಜ್ಯ ಸರ್ಕಾರ ಕಾನೂನು ಕ್ರಮ ಕೈಗೊಳ್ಳುತ್ತದೆ. ಗಲಾಟೆಗೆ ಪ್ರಚೋದನೆ ನೀಡಿದ್ದ ಮೌಲ್ವಿ ಹೇಡಿಯಂತೆ ಓಡಿದ್ದಾನೆ. ದೇಶದ್ರೋಹಿ, ಗೂಂಡಾಗಿರಿ ಮಾಡಿದ ರಾಷ್ಟ್ರದೋಹಿಯನ್ನ ಬಂಧಿಸಿ ಎಂದು ಪ್ರಧಾನಿಮೋದಿ, ಸಿಎಂ , ರಾಜ್ಯ ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದರು.
ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿಯಲ್ಲೂ ಇದೇ ರೀತಿಯ ಘಟನೆಯಾಯಿತು. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆಯಾಯಿತು. ಬೆಂಗಳೂರಿನಲ್ಲಿ ಚಂದ್ರು ಕೊಲೆಯಾಯಿತು , ಆರೋಪಿಗಳನ್ನು ಬಂಧಿಸಿ. ದೊಂಬಿಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕು. ಹುಬ್ಬಳ್ಳಿ ಗಲಾಟೆ ಸಂಬಂಧ ಈಗಾಗಲೇ ಹಲವರನ್ನು ಬಂಧಿಸಿದ್ದಾರೆ. ಇನ್ನುಳಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು ಎಂದು ಈಶ್ವರಪ್ಪ ಒತ್ತಾಯಿಸಿದ್ದಾರೆ.