ನಿಮಗೆ ಗೂಂಡಾ, ಲಫಂಗರ ಸರ್ಕಾರ ಬೇಕೆ ಅಥವಾ ಪ್ರಾಮಾಣಿಕ ಆಡಳಿತ ಬೇಕೆ?: ಕನ್ನಡಿಗರಿಗೆ ಕೇಜ್ರಿವಾಲ್ ಪ್ರಶ್ನೆ
ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು...
Published: 21st April 2022 04:41 PM | Last Updated: 21st April 2022 04:41 PM | A+A A-

ಬೆಂಗಳೂರಿನಲ್ಲಿ ನಡೆದ ರೈತರ ಬೃಹತ್ ಸಮಾವೇಶದಲ್ಲಿ ಕೇಜ್ರಿವಾಲ್
ಬೆಂಗಳೂರು: ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಗುರುವಾರ ನಡೆದ ರೈತರ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು, ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅಲ್ಲದೆ 40 ಪರ್ಸೆಂಟ್ ಸರ್ಕಾರವನ್ನು ಧಿಕ್ಕರಿಸಿ, ಆಮ್ ಆದ್ಮಿ ಪಾರ್ಟಿಯನ್ನು ಬೆಂಬಲಿಸಿ ಎಂದು ಕರೆ ನೀಡಿದರು.
ಭಾರತೀಯ ಜನತಾ ಪಕ್ಷ ದೇಶದ ಎಲ್ಲೆಡೆ ದಂಗೆ, ಹಿಂಸಾಚಾರಗಳನ್ನು ಮಾಡಿಸುತ್ತಿದೆ. ನನ್ನ ಮನೆಯ ಮೇಲೆ ನಾನಿಲ್ಲದ ಸಮಯದಲ್ಲಿ, ನನ್ನ ವಯಸ್ಸಾದ ತಂದೆತಾಯಿ ಇದ್ದ ಸಂದರ್ಭದಲ್ಲಿ ದಾಳಿ ನಡೆಸಿದರು. ಇಂಥ ಗೂಂಡಾಗಳ ಸರ್ಕಾರ ನಿಮಗೆ ಬೇಕೆ ಎಂದು ದೆಹಲಿ ಸಿಎಂ ಪ್ರಶ್ನಿಸಿದರು. ಉತ್ತರ ಪ್ರದೇಶದ ಲಖೀಂಪುರಖೇರಿಯಲ್ಲಿ ರೈತರ ಮೇಲೆ ವಾಹನ ಹತ್ತಿಸಿ ಕೊಂದವನ ತಂದೆಗೆ ಕೇಂದ್ರ ಸಚಿವ ಸ್ಥಾನ ನೀಡಿ ಗೌರವಿಸಲಾಯಿತು. ನೀಚರು, ಅತ್ಯಾಚಾರಿಗಳು, ಗೂಂಡಾಗಳಿಗೆ ಬಿಜೆಪಿಯಲ್ಲಿ ಗೌರವ, ಸ್ಥಾನಮಾನ ದೊರೆಯುತ್ತದೆ ಎಂದು ಆರೋಪಿಸಿದರು.
ಇದನ್ನು ಓದಿ: ಬೆಂಗಳೂರಿಗೆ ದೆಹಲಿ ಸಿಎಂ ಕೇಜ್ರಿವಾಲ್, ಏಪ್ರಿಲ್ 21ರಂದು ರೈತರ ಬೃಹತ್ ಸಮಾವೇಶ
ಜಮ್ಮು ಮತ್ತು ಕಾಶ್ಮೀರದಲ್ಲಿ ಅಪ್ರಾಪ್ತ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ ಕಾಮುಕ ಜೈಲಿನಿಂದ ಹೊರಗೆ ಬಂದಾಗ ಅವನನ್ನು ಶೋಭಾಯಾತ್ರೆಯಲ್ಲಿ ಮೆರವಣಿಗೆ ಮಾಡಿದ ಇತಿಹಾಸ ಬಿಜೆಪಿಯದ್ದು. ಅದು ಲಫಂಗರ, ಗೂಂಡಾಗಳ, ಅತ್ಯಾಚಾರಿಗಳ ಪಕ್ಷ ಎಂದು ನೇರವಾಗಿ ವಾಗ್ದಾಳಿ ನಡೆಸಿದ ಅರವಿಂದ ಕೇಜ್ರಿವಾಲ್, ನನಗೆ ರಾಜಕಾರಣ ಮಾಡಲು ಬರುವುದಿಲ್ಲ, ಒಳ್ಳೆಯ ಆಡಳಿತ ಮಾಡುವುದು ಮಾತ್ರ ಗೊತ್ತಿದೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ ಕ್ಷೇತ್ರಗಳನ್ನು ಹೇಗೆ ಅಭಿವೃದ್ಧಿಪಡಿಸೋದು ಎಂಬುದು ಗೊತ್ತಿದೆ. ಹೀಗಾಗಿಯೇ ದೆಹಲಿಯ ಚಿತ್ರಣವನ್ನೇ ಬದಲಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳಿದರು.
ದೆಹಲಿಯಲ್ಲಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಸರ್ಕಾರಿ ಶಾಲೆಗಳಲ್ಲಿ ನೀಡುತ್ತಿದ್ದೇವೆ. ಈ ವರ್ಷ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ನಾಲ್ಕು ಲಕ್ಷ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗೆ ಸೇರಿಕೊಂಡಿದ್ದಾರೆ. ಸಾಧಾರಣ ಜ್ವರದಿಂದ ಹಿಡಿದು ಕಿಡ್ನಿ ಟ್ರಾನ್ಸ್ ಪ್ಲಾಂಟ್ ನಂಥ ದುಬಾರಿ ಚಿಕಿತ್ಸೆಯೂ ಕೂಡ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ, ಒಂದು ರೂಪಾಯಿ ಖರ್ಚಿಲ್ಲದೆ ಕೊಡುತ್ತಿದ್ದೇವೆ. ಜನರು ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನೇ ಬಿಟ್ಟಿದ್ದಾರೆ. ದೆಹಲಿಯಲ್ಲಿ ಜನರಿಗೆ ಉಚಿತ ವಿದ್ಯುತ್ ಕೊಡುತ್ತಿದ್ದೇವೆ. ಉಚಿತ ನೀರು ನೀಡುತ್ತಿದ್ದೇವೆ. ಇದಲ್ಲದೆ ಮಹಿಳೆಯರಿಗೆ ಸಂಚಾರ ವ್ಯವಸ್ಥೆಯನ್ನು ಉಚಿತಗೊಳಿಸಿದ್ದೇವೆ. ಇದು ಎಎಪಿ ಮಾಡಿದ ಮ್ಯಾಜಿಕ್. ಇದೆಲ್ಲ ಹೇಗೆ ಸಾಧ್ಯವಾಯಿತೆಂದು ನೀವು ಪ್ರಶ್ನಿಸಬಹುದು. ನಾವು ಲಂಚದ ಹಣ ತಿನ್ನೋದಿಲ್ಲ, ನಮ್ಮದು ಅತ್ಯಂತ ಪ್ರಾಮಾಣಿಕ ಸರ್ಕಾರ. ಹಣ ಉಳಿಸುವುದು ಹೇಗೆ ಎಂಬುದು ನಮಗೆ ಗೊತ್ತಿದೆ. ಹೀಗಾಗಿಯೇ ಈ ಮ್ಯಾಜಿಕ್ ಮಾಡಿದ್ದೇವೆ, ಇದು ಕರ್ನಾಟಕಕ್ಕೂ ಬೇಡವೇ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದಲ್ಲಿ ಹಿಂದೆ ಇದ್ದ ಕಾಂಗ್ರೆಸ್ ಸರ್ಕಾರ 20% ಕಮಿಷನ್ ಸರ್ಕಾರ ಎಂದು ಹೆಸರಾಗಿತ್ತು. ಈಗಿನ ಬಿಜೆಪಿ ಸರ್ಕಾರ 40% ಸರ್ಕಾರ ಎಂದು ಹೆಸರಾಗಿದೆ. ಇವರನ್ನೆಲ್ಲ ಈಗ ಮನೆಗೆ ಕಳುಹಿಸುವ ಕಾಲ ಹತ್ತಿರವಾಗಿದೆ. ದೆಹಲಿ, ಪಂಜಾಬ್ ನಲ್ಲಿ ಆಗಿದ್ದನ್ನು ಕರ್ನಾಟಕದಲ್ಲೂ ಮಾಡೋಣ. ಇಲ್ಲಿನ ರಾಜಕಾರಣವನ್ನು ಬದಲಿಸೋಣ ಎಂದು ಕೇಜ್ರಿವಾಲ್ ಕರೆ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಕೇಜ್ರಿವಾಲ್ ಸಮ್ಮುಖದಲ್ಲಿ ಎಎಪಿ ಸೇರಿದರು. ಕೋಡಿಹಳ್ಳಿ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರನ್ನು ಎಎಪಿಗೆ ಬರಮಾಡಿಕೊಂಡ ಕೇಜ್ರಿವಾಲ್, 75 ವರ್ಷಗಳಿಂದ ರೈತರಿಗೆ ಎಲ್ಲ ಪಕ್ಷಗಳೂ ವಂಚಿಸುತ್ತ ಬಂದಿವೆ. ಈಗ ನೀವೇ ರಾಜಕೀಯಕ್ಕೆ ಬಂದು ನೀವು ಆಡಳಿತ ನಡೆಸಿ ಎಂದು ದೇಶದ ರೈತರಿಗೆ ಕರೆ ನೀಡಿದರು. ಎಎಪಿ ರಾಜ್ಯ ಸಂಚಾಲಕ ಪ್ರಥ್ವಿ ರೆಡ್ಡಿ ಸೇರಿದಂತೆ ರೈತ ಸಂಘ ಮತ್ತು ಎಎಪಿಯ ರಾಜ್ಯ ಮುಖಂಡರು ಈ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ರೈತರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.