ಸಿದ್ದರಾಮಯ್ಯ ನನ್ನನ್ನು ಜೈಲಿಗೆ ಕಳುಹಿಸಲು ಯತ್ನಿಸಿದ್ದರು: ಎಚ್ಡಿ ಕುಮಾರಸ್ವಾಮಿ
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಅಹಿಂದ ನಾಯಕರು ನನ್ನನ್ನು ಜೈಲಿಗೆ ಕಳುಹಿಸಲು ಪಿತೂರಿ ನಡೆಸಿದ್ದರು ಎಂದು ಗುರುವಾರ ಆರೋಪಿಸಿದ್ದಾರೆ.
Published: 22nd April 2022 08:22 AM | Last Updated: 22nd April 2022 12:58 PM | A+A A-

ಹೆಚ್.ಡಿ.ಕುಮಾರಸ್ವಾಮಿ
ಮೈಸೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಮಾಜಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಡುವಿನ ವಾಕ್ಸಮರ ತೀವ್ರಗೊಂಡಿದ್ದು, ಅಹಿಂದ ನಾಯಕರು ನನ್ನನ್ನು ಜೈಲಿಗೆ ಕಳುಹಿಸಲು ಪಿತೂರಿ ನಡೆಸಿದ್ದರು ಎಂದು ಗುರುವಾರ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಲು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಮುರಿದು ಬೀಳಲು ಸಿದ್ದರಾಮಯ್ಯ ಅವರೇ ಕಾರಣ’ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಈಶ್ವರಪ್ಪ ಬದಲಿಗೆ ಕುಮಾರಸ್ವಾಮಿಯವರನ್ನು ಬಂಧಿಸಬೇಕೆಂಬ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಕಿಡಿಕಾರಿದ ಅವರು, ನನ್ನನ್ನು ಬಂಧನಕ್ಕೊಳಪಡಿಸುವ ಕುರಿತು ಇರುವ ಅಜೆಂಡಾವನ್ನು ಇದು ತೋರಿಸುತ್ತಿದೆ. ಅವರೊಬ್ಬ ಸುಳ್ಳಿನ ರಾಮಯ್ಯ. ಅವರಿಗೆ ನನ್ನ ಭಯ ಕಾಡುತ್ತಿದೆ. ಎಲ್ಲಿ ನಾನು ಅಧಿಕಾರಕ್ಕೆ ಬಂದು ಬಿಡುತ್ತೇನೋ ಎಂದು ಆತಂಕದಲ್ಲಿದ್ದಾರೆ. ಸಿದ್ದರಾಮಯ್ಯ ಸಿ.ಎಂ ಆಗಿದ್ದಾಗ ಹನ್ನೆರಡು ವರ್ಷದ ಹಿಂದೆ ದಾಖಲಾಗಿದ್ದ ಪ್ರಕರಣದಲ್ಲಿ ನನ್ನನ್ನು ಬಂಧಿಸಲು ಯೋಜಿಸಿದ್ದರು ಎಂದು ಹೇಳಿದರು. ಅಲ್ಲದೆ, ಅರ್ಕಾವತಿ ವಿಚಾರ ಕುರಿತು ಸಿದ್ದರಾಮಯ್ಯ ಅವರಿಂದ ಮಾಹಿತಿ ತಿಳಿದುಕೊಳ್ಳಲು ಬಯಸುತ್ತಿದ್ದೇನೆಂದು ತಿಳಿಸಿದರು.
ಬಿಜೆಪಿ ಸರ್ಕಾರಕ್ಕೆ ನಾನು ಸರ್ಟಿಫಿಕೇಟ್ ಕೊಟ್ಟಿದ್ದೇನೆ ಎನ್ನುವ ಕಾಂಗ್ರೆಸ್ಸಿಗರ ನಾಲಿಗೆಯಲ್ಲಿ ಮೂಳೆ ಇದೆಯಾ. ಕೆ.ಎಸ್.ಈಶ್ವರಪ್ಪ ಕುರಿತು ಮೃದು ಧೋರಣೆ ಇಲ್ಲ. ಸಾಕ್ಷ್ಯಾಧಾರಗಳಿದ್ದರೆ ಬಂಧಿಸಿ. ಬಂಧಿಸಿದ ಬಳಿಕ ನ್ಯಾಯಾಲಯ ನಿರಪರಾಧಿ ಎಂದರೆ ಏನು ಮಾಡುವುದು? ಎಲ್ಲದರಲ್ಲೂ ರಾಜಕೀಯ ಬೇಡ ಎಂದು ಹೇಳಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ನಲ್ಲಿ ಮೃತರ ಕುಟುಂಬಕ್ಕೆ ಆರ್ಥಿಕ ನೆರವು ನೀಡಲು ಪೈಪೋಟಿ ನಡೆಯುತ್ತಿದೆ, ಆತ್ಮಹತ್ಯೆಗೆ ಈಶ್ವರಪ್ಪ ಕಾರಣ ಎಂಬುದಕ್ಕೆ ಸಾಕ್ಷಿ ಸಮೇತ ಕಾಂಗ್ರೆಸ್ ಹೊರ ಬರಬೇಕು ಎಂದು ಒತ್ತಾಯಿಸಿದರು.
ಬಳಿಕ ನವದೆಹಲಿಯಲ್ಲಿ ಬುಲ್ಡೋಜರ್ಗಳು ಕಟ್ಟಡಗಳನ್ನು ನೆಲಸಮಗೊಳಿಸುತ್ತಿರುವುದನ್ನು ಉಲ್ಲೇಖಿಸಿದ ಅವರು, ಬೆಂಗಳೂರು ಮತ್ತು ಮೈಸೂರು ಎರಡರಲ್ಲೂ ನಿರ್ಮಾಣವಾಗಿರುವ ಅಕ್ರಮ ಕಟ್ಟಡಗಳ ಕುರಿತು ಸರ್ಕಾರಕ್ಕೆ ಪಟ್ಟಿ ಒದಗಿಸುವುದಾಗಿ ತಿಳಿಸಿದರು.