ಹಾಲು ಒಕ್ಕೂಟದ ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ: ಒಂದು ಹುದ್ದೆಗೆ 25 ರಿಂದ 50 ಲಕ್ಷ ರೂ. ಲಂಚ: ಕುಮಾರಸ್ವಾಮಿ
ಪಿಎಸ್‌ಐ ನೇಮಕಾತಿಯಲ್ಲಿ ಅಷ್ಟೇ ಅಲ್ಲ, ಹಾಲು ಒಕ್ಕೂಟದಲ್ಲಿ ಪ್ರತಿಯೊಂದು ಹುದ್ದೆಯ ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ ನಡೆಯುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
Published: 23rd April 2022 06:39 PM | Last Updated: 23rd April 2022 07:26 PM | A+A A-

ಎಚ್.ಡಿ ಕುಮಾರಸ್ವಾಮಿ
ಬೀದರ್: ಪಿಎಸ್‌ಐ ನೇಮಕಾತಿಯಲ್ಲಿ ಅಷ್ಟೇ ಅಲ್ಲ, ಹಾಲು ಒಕ್ಕೂಟದಲ್ಲಿ ಪ್ರತಿಯೊಂದು ಹುದ್ದೆಯ ನೇಮಕಾತಿಯಲ್ಲೂ ಭಾರಿ ಭ್ರಷ್ಟಾಚಾರ ನಡೆಯುತ್ತದೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ.
ಬೀದರ್ ತಾಲ್ಲೂಕಿನ ಕಾಶೆಂಪುರ ಗ್ರಾಮದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಾಲು ಒಕ್ಕೂಟದಲ್ಲಿ ಒಂದು ಹುದ್ದೆ ಪಡೆಯಬೇಕಾದರೆ 25 ಲಕ್ಷ ಕೊಡುವ ಪರಿಸ್ಥಿತಿ ಇದೆ’ ಎಂದರು.
ಕೆಪಿಎಸ್‌ಸಿ ಮೂಲಕ ನಡೆಯುವ ಎ.ಸಿ, ಡಿವೈಎಸ್‌ಪಿ ಹುದ್ದೆ ನೇಮಕಾತಿಯಲ್ಲಿ 1 ಕೋಟಿ ಕೇಳಲಾಗುತ್ತಿದೆ. ನನ್ನ ಹತ್ತಿರ ಅನೇಕ ಅಭ್ಯರ್ಥಿಗಳು ಬಂದಿದ್ದರು. ಆದರೆ, ನನ್ನ ಬಳಿ ಇದೆಲ್ಲ ನಡೆಯಲ್ಲ ಎಂದು ಸ್ಪಷ್ಟವಾಗಿಯೇ ಹೇಳಿ ಕಳಿಸಿದ್ದೇನೆ’ ಎಂದು ತಿಳಿಸಿದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಕುಟುಂಬದಲ್ಲಿ ಒಬ್ಬರಿಗೆ ಉದ್ಯೋಗ: ಹೆಚ್‌ಡಿಕೆ ಭರವಸೆ
ಎಲ್ಲ ಇಲಾಖೆಗಳಲ್ಲಿಯೂ ಪಾರದರ್ಶಕವಾಗಿ ನೇಮಕಾತಿ ನಡೆಯುತ್ತಿಲ್ಲ. ಕಮೀಷನ್ ದಂಧೆ ಅವ್ಯಾಹತವಾಗಿ ನಡೆಯುತ್ತಿದೆ. ವಸ್ತುಸ್ಥಿತಿ ಹೀಗಿರುವಾಗ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಬಡ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಅನ್ಯಾಯದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು. ಪಾರದರ್ಶಕ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನು ಮುಖ್ಯಮಂತ್ರಿ ಕೈಗೊಳ್ಳಬೇಕು ಹಾಗೂ ಈ ಬಗ್ಗೆ ಸಹಕಾರಿ ಸಚಿವರು ವಾಸ್ತವಾಂಶವನ್ನು ಜನರ ಮುಂದೆ ಇಡಲಿ ಎಂದು ಅವರು ಒತ್ತಾಯಿಸಿದರು.