ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ: ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ
‘ಜನತಾ ಜಲಧಾರೆ’ ಕಾರ್ಯಕ್ರಮದಿಂದ ದೂರ ಉಳಿದಿದ್ದಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿರುವ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು. ತಮ್ಮ ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
Published: 23rd April 2022 09:16 AM | Last Updated: 23rd April 2022 01:15 PM | A+A A-

ಶಿವಲಿಂಗೇಗೌಡ
ಹಾಸನ: ‘ಜನತಾ ಜಲಧಾರೆ’ ಕಾರ್ಯಕ್ರಮದಿಂದ ದೂರ ಉಳಿದಿದ್ದಕ್ಕೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೆಂಗಣ್ಣಿಗೆ ಗುರಿಯಾಗಿರುವ ಅರಸೀಕೆರೆ ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರು. ತಮ್ಮ ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ.
ಪಕ್ಷದ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಮಾತನಾಡಿರುವ ಶಿವಲಿಂಗೇಗೌಡ ಅವರು, ಅನಿವಾರ್ಯ ಕೆಲಸಗಳಿದ್ದ ಕಾರಣ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಮುಂದಿನ ನಡೆ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶಿವಲಿಂಗೇಗೌಡ ಇತ್ತೀಚಿನ ದಿನಗಳಲ್ಲಿ ಜೆಡಿಎಸ್ನಲ್ಲಿ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಅದರಲ್ಲೂ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರ ಜೊತೆ ಆಪ್ತರಾಗಿರುವುದು ಕಂಡು ಬರುತ್ತಿದೆ. ಆದರೆ ಪಕ್ಷ ತೊರೆಯುವ ಕುರಿತಾಗಿ ಶಿವಲಿಂಗೇಗೌಡ ಅವರು ಎಲ್ಲಿಯೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ಹಾಸನದಲ್ಲಿ ಜೆಡಿಎಸ್ ಜನತಾ ಜಲಧಾರೆ: ಇಬ್ಬರು ಶಾಸಕರ ಗೈರು, ಹೆಚ್'ಡಿಕೆ, ಹೆಚ್'ಡಿಡಿ ಅಸಮಾಧಾನ
ಈ ನಡುವೆ ಹಾಸನದಲ್ಲಿ ಗುರುವಾರ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಶಿವಲಿಂಗೇಗೌಡರು ಗೈರಾಗಿದ್ದು, ಅವರ ಬಗ್ಗೆ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಹಾಗೂ ಪಕ್ಷದ ವರಿಷ್ಠ ಎಚ್ಡಿ ದೇವೇಗೌಡರು ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದಲ್ಲಿ ಇದ್ದುಕೊಂಡು ಕುತ್ತಿಗೆ ಕೊಯ್ಯಬೇಡಿ, ಬೆನ್ನಿಗೆ ಚೂರಿ ಹಾಕುವ ರಾಜಕಾರಣ ಮಾಡಬಾರದು ಎಂದು ಮಾಜಿ ಸಿಎಂ ಎಚ್ಡಿಕೆ ಹೇಳುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದಾರೆ. ಇಷ್ಟೇ ಅಲ್ಲದೆ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡರೂ “ನಾನು ತೆಂಗಿಗೆ ಪರಿಹಾರ ನೀಡುವ ವಿಚಾರವಾಗಿ ಧರಣಿ ಮಾಡುತ್ತೇನೆ. ಮೂರು ದಿನ ಬಿಟ್ಟು ಬಂದು ಏಳಿಸಿ. ಕುಮಾರಸ್ವಾಮಿಗೆ ಹೇಳಿ ಏನಾದರೂ ಪರಿಹಾರ ಕೊಡಿಸಿ ಅಂದ್ರು. ಅಬ್ಬಾ ಎಂತಾ ಡ್ರಾಮಾ” ಎಂದು ವ್ಯಂಗ್ಯವಾಡಿದ್ದಾರೆ. ಒಟ್ಟಿನಲ್ಲಿ ಶಿವಲಿಂಗೇಗೌಡ ಮುಂದಿನ ನಡೆ ಏನು ಎಂಬುವುದು ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.