ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ: ಹೆಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಿ
ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಕಿಡಿಕಾರಿದ್ದಾರೆ.
Published: 28th April 2022 01:02 PM | Last Updated: 28th April 2022 01:41 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಚಿತ್ರನಟ ಕಿಚ್ಚ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಗುರುವಾರ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಚಿತ್ರನಟ ಸುದೀಪ್ ಅವರು, ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿರುವುದು ಸರಿ ಇದೆ. ಅವರ ಮಾತಿನಲ್ಲಿ ತಪ್ಪು ಹುಡುಕುವಂಥದ್ದು ಏನೂ ಇಲ್ಲ. ನಟ ಅಜಯ್ ದೇವಗನ್ ಅತಿರೇಕದಿಂದ ಪ್ರತಿಕ್ರಿಯಿಸಿ ಅಧಿಕ ಪ್ರಸಂಗತನ ಮೆರೆದಿದ್ದಾರೆ.
ದೇಶ ಭಾಷೆಗಳಲ್ಲಿ ಹಿಂದಿಯೂ ಒಂದಷ್ಟೇ. ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿಯಂತೆ ಅದೂ ಒಂದು ಭಾಷೆ ಮಾತ್ರ. ಭಾರತ ಬಹು ಭಾಷೆಗಳ ತೋಟ. ಬಹು ಧರ್ಮ, ಬಹು ಭಾಷೆ, ಬಹು ಸಂಸ್ಕೃತಿಗಳ ಬೀಡು. ಇದನ್ನು ಕದಡುವ ಪ್ರಯತ್ನ ಬೇಡ. ಹೆಚ್ಚು ಜನ ಮಾತನಾಡುತ್ತಾರೆ ಎಂದ ಮಾತ್ರಕ್ಕೆ ಹಿಂದಿ ಎಲ್ಲರ ಭಾಷೆಯಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಕೇವಲ 9ಕ್ಕಿಂತ ಕಡಿಮೆ ರಾಜ್ಯಗಳಲ್ಲಿ ಹಿಂದಿ 2ನೇ ಭಾಷೆ, ಇಲ್ಲವೇ 3ನೇ ಭಾಷೆ ಅಥವಾ ಅದೂ ಆಗಿಲ್ಲ. ಹೀಗಿದ್ದ ಮೇಲೆ ಅಜಯ್ ದೇವಗನ್ ಮಾತುಗಳು ಎಷ್ಟು ಸರಿ. ಡಬ್ ಮಾಡಬೇಡಿ ಎಂದರೆ ಏನರ್ಥ?
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ವಾರ್: ಸುದೀಪ್ ಗೆ ಭಾರಿ ಬೆಂಬಲ, ಅಜಯ್ ದೇವಗನ್ ಗೆ ತಿರುಗೇಟು; ಸಿದ್ದು, ರಮ್ಯ ಹೇಳಿದ್ದೇನು?
ಮೊದಲಿನಿಂದಲೂ ಕೇಂದ್ರದಲ್ಲಿ ಆಡಳಿತ ನಡೆಸಿದ 'ಹಿಂದಿ ರಾಜಕೀಯ ಪಕ್ಷಗಳು' ಪ್ರಾದೇಶಿಕ ಭಾಷೆಗಳನ್ನು ಹೊಸಕಿ ಹಾಕುವ ದುಷ್ಟ ಪ್ರಯತ್ನ ಮಾಡುತ್ತಿವೆ. ಕಾಂಗ್ರೆಸ್ ಆರಂಭ ಮಾಡಿದ ಅನ್ಯಭಾಷೆಗಳ ಹತ್ತಿಕ್ಕುವ ಕೃತ್ಯಗಳನ್ನು ಈಗ ಬಿಜೆಪಿ ಅತಿಯಾಗಿ ಮುಂದುವರಿಸುತ್ತಿದೆ. ಒಂದೇ ಪಕ್ಷ, ಒಂದೇ ತೆರಿಗೆ, ಒಂದೇ ಭಾಷೆ, ಒಂದೇ ಸರಕಾರ ಎನ್ನುವ ಸರ್ವಾಧಿಕಾರಿ ಮನಃಸ್ಥಿತಿಯ ಬಿಜೆಪಿ ಮತ್ತು ಅದರ ಹಿಂದಿ ರಾಷ್ಟ್ರೀಯವಾದದ ಮುಖವಾಣಿ ರೀತಿಯಲ್ಲಿ ದೇವಗನ್ ಬಡಬಡಿಸಿದ್ದಾರೆ.
ದೇವಗನ್ ಅರ್ಥ ಮಾಡಿಕೊಳ್ಳಬೇಕು. ಕನ್ನಡ ಚಿತ್ರರಂಗ ಇವತ್ತು ಹಿಂದಿ ಚಿತ್ರರಂಗವನ್ನು ಮೀರಿ ಬೆಳೆಯುತ್ತಿದೆ. ಕನ್ನಡಿಗರು ಕೂಡ ಪ್ರೋತ್ಸಾಹಿಸಿದ ಪರಿಣಾಮ ಹಿಂದಿ ಚಿತ್ರರಂಗ ಬೆಳೆದಿದೆ. ಅವರ 'ಫೂಲ್ ಔರ್ ಕಾಂಟೆ' ಸಿನಿಮಾ ಬೆಂಗಳೂರಿನಲ್ಲಿ ಒಂದು ವರ್ಷ ಪ್ರದರ್ಶನ ಆಗಿದ್ದನ್ನು ದೇವಗನ್ ಮರೆಯಬಾರದು. ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ. ಬಿಜೆಪಿ ಬಿತ್ತಿದ ಈ ರೋಗ, ಅಂಟುಜಾಡ್ಯದಂತೆ ಹರಡುತ್ತಾ ದೇಶವನ್ನು ಛಿದ್ರಗೊಳಿಸುವಂತಿದೆ. ಭಾರತದ ಏಕತೆಗೆ ಇದು ಅಪಾಯಕಾರಿ ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯ ವಿರೋಧ:
ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಅಜಯ್ ದೇವಗನ್ ಅವರ ಹೇಳಿಕೆಯನ್ನು ವಿರೋಧಿಸಿದ್ದು, ಹಿಂದಿ ಎಂದಿಗೂ ರಾಷ್ಟ್ರಭಾಷೆಯಾಗಿಲ್ಲ ಮತ್ತು ಎಂದಿಗೂ ನಮ್ಮ ರಾಷ್ಟ್ರೀಯ ಭಾಷೆಯಾಗುವುದಿಲ್ಲ. ನಮ್ಮ ದೇಶದ ಭಾಷಾ ವೈವಿಧ್ಯತೆಯನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಪ್ರತಿಯೊಂದು ಭಾಷೆಯು ತನ್ನದೇ ಆದ ಶ್ರೀಮಂತ ಇತಿಹಾಸವನ್ನು ಹೊಂದಿದೆ, ಅದರ ಬಗ್ಗೆ ಜನ ಹೆಮ್ಮೆಪಡುತ್ತಾರೆ. ನಾನೊಬ್ಬ ಕನ್ನಡಿಗ ಎಂದು ಹೆಮ್ಮೆ ಪಡುತ್ತೇನೆ!! ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ಪ್ರತಿಕ್ರಿಯೆ:
ಮಾಜಿ ಸಂಸದೆ, ನಟಿ ರಮ್ಯ ಕೂಡ ಅಜಯ್ ದೇವಗನ್ ಹೇಳಿಕೆ ವಿರೋಧಿಸಿ, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ. ನಿಮ್ಮ ಅಜ್ಞಾನವು ವಿಸ್ಮಯಕಾರಿಯಾಗಿದೆ. ಕೆಜಿಎಫ್ ಪುಷ್ಪ ಮತ್ತು ಆರ್‌ಆರ್‌ಆರ್‌ನಂತಹ ಚಲನಚಿತ್ರಗಳು ಹಿಂದಿ ಬೆಲ್ಟ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವುದು ಅದ್ಭುತವಾಗಿದೆ. ಕಲೆಗೆ ಯಾವುದೇ ಭಾಷೆಯ ತಡೆ ಇಲ್ಲ. ನಿಮ್ಮ ಚಲನಚಿತ್ರಗಳನ್ನು ನಾವು ಆನಂದಿಸಿದಂತೆ ದಯವಿಟ್ಟು ನಮ್ಮ ಚಲನಚಿತ್ರಗಳನ್ನು ಆನಂದಿಸಿ ಎಂದು ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರ ಭಾಷೆ ಅಂದ ಅಜಯ್ ದೇವಗನ್ ಗೆ ಕಿಚ್ಚ ಸುದೀಪ್ ಕೊಟ್ಟ ಖಡಕ್ ತಿರುಗೇಟು ಏನು ಗೊತ್ತ?
ನಟ ನೀನಾಸಂ ಸತೀಶ್ ಸುದೀಪ್ ಅವರ ಬೆಂಬಲಕ್ಕೆ ನಿಂತಿದ್ದು ನಿಮ್ಮ ಧ್ವನಿಗೆ ನಮ್ಮ ಧ್ವನಿ ಸುದೀಪ್ ಸರ್ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.
ಹತ್ತಾರು ವರ್ಷಗಳಿಂದ ನಿಮ್ಮ ಹಿಂದಿ ಸಿನಿಮಾಗಳು ಕನ್ನಡ ನೆಲದಲ್ಲಿ ಹಣ ಮಾಡಿವೆ, ಈಗಷ್ಟೆ ನಮ್ಮ ಕನ್ನಡ ಸಿನಿಮಾಗಳು ಅಲ್ಲಿಗೆ ಕಾಲಿಟ್ಟಿವೆ, ನಮ್ಮಂತೆ ನೀವು ನಮ್ಮನ್ನು, ನಮ್ಮ ಬಾಷೆಯನ್ನು ಗೌರವಿಸಿ. ಹಿಂದಿ ಅಂದಿಗೂ ಎಂದಿಗೂ ನಮ್ಮ ರಾಷ್ತ್ರ ಭಾಷೆಯಲ್ಲ. ನಿಮ್ಮ ಧ್ವನಿಗೆ ನಮ್ಮ ಧ್ವನಿ ಎಂದು ಹೇಳಿದ್ದಾರೆ.
ಸ್ಯಾಂಡಲ್ ವುಡ್ ವರ್ಸಸ್ ಬಾಲಿವುಡ್, ನಟ ಕಿಚ್ಚ ಸುದೀಪ್ ವರ್ಸಸ್ ನಟ ಅಜಯ್ ದೇವಗನ್ ಎಂಬ ಚರ್ಚೆಗೆ ಹಿಂದಿ ರಾಷ್ಟ್ರಭಾಷೆ ವಿಚಾರ ಎಡೆಮಾಡಿಕೊಟ್ಟಿದೆ.
ಇತ್ತೀಚಿಗೆ ಸಮಾರಂಭವೊಂದರಲ್ಲಿ ನಟ ಕಿಚ್ಚ ಸುದೀಪ್ ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ ಎಂದಿದ್ದರು. ಇದಕ್ಕೆ ಬಾಲಿವುಡ್ ನಟ ಅಜಯ್ ದೇವಗನ್ ಹಿಂದಿ ನಮ್ಮ ಮಾತೃಭಾಷೆಯಾಗಿದೆ ಮತ್ತು ರಾಷ್ಟ್ರ ಭಾಷೆಯಾಗಿ ಯಾವಾಗಲೂ ಇರುತ್ತದೆ ಎಂದು ಟ್ವೀಟ್ ಮಾಡಿದ್ದರು. ಇದು ಇಬ್ಬರ ನಡುವೆ ಟ್ವಿಟರ್ ನಲ್ಲಿ ಸಾಕಷ್ಟು ವಾದಕ್ಕೆ ತಿರುಗಿದೆ.
ಇದನ್ನೂ ಓದಿ: ಭಾಷೆಯ ವಿಚಾರದಲ್ಲಿ ಕಿಚ್ಚ ಸುದೀಪ್ ಮಾತನಾಡಿದ್ದು ಸರಿ, ಕೋವಿಡ್ 4ನೇ ಅಲೆ ಬಂದಿಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಚಿತ್ರವೊಂದರ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಟ ಸುದೀಪ್, ಚಲನಚಿತ್ರಗಳ ವ್ಯಾಪ್ತಿಯ ಬಗ್ಗೆ ಪ್ಯಾನ್-ಇಂಡಿಯಾ ಸಿನಿಮಾಗಳ ಮಾತನಾಡುತ್ತಾ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂದಿದ್ದರು.
ಕನ್ನಡ ಚಲನಚಿತ್ರವನ್ನು ಪ್ಯಾನ್-ಇಂಡಿಯಾ ಮಟ್ಟದಲ್ಲಿ ನಿರ್ಮಿಸಲಾಗಿದೆ ಎಂದು ಎಲ್ಲರೂ ಹೇಳುತ್ತಾರೆ. ಬಾಲಿವುಡ್ ಕೂಡ ಅನೇಕ ಪ್ಯಾನ್-ಇಂಡಿಯಾ ಚಲನಚಿತ್ರಗಳನ್ನು ನಿರ್ಮಿಸುತ್ತದೆ. ಅದು ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆಯಾಗುತ್ತದೆ. ಆದರೆ ಅದೇ ಪ್ರಮಾಣದಲ್ಲಿ ಯಶಸ್ಸನ್ನು ಹುಡುಕಲು ಹೆಣಗಾಡುತ್ತದೆ. ಅದೇ ದಕ್ಷಿಣ ಭಾರತ ಸಿನಿರಂಗದವರು ಇಲ್ಲಿನ ಚಿತ್ರಗಳನ್ನ ಹಿಂದಿಗೆ ಡಬ್ ಮಾಡಿ ಬಿಡುಗಡೆ ಮಾಡುತ್ತಾರೆ. ಇದು ಯಶಸ್ವಿಯಾಗುತ್ತಿದೆ. ಪುಷ್ಪ ಮತ್ತು ಆರ್ ಆರ್ ಆರ್ ಇದೇ ರೀತಿ ಮಾಡಿ ಗೆದ್ದಿದ್ದಾರೆ. ಹಿಂದಿ ನಮ್ಮ ರಾಷ್ಟ್ರಭಾಷೆಯಲ್ಲ” ಎಂದಿದ್ದರು.
ಈ ಕಾಮೆಂಟ್‌ಗೆ ಪ್ರತಿಕ್ರಿಯಿಸಿದ ಅಜಯ್ ದೇವಗನ್, ಟ್ವಿಟರ್ ನಲ್ಲಿ ಪ್ರತಿಕ್ರಿಯಿಸಿ “ನನ್ನ ಸಹೋದರ ಸುದೀಪ್, ನಿಮ್ಮ ಪ್ರಕಾರ ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲದಿದ್ದರೆ ನಿಮ್ಮ ಮಾತೃಭಾಷೆಯ ಚಲನಚಿತ್ರಗಳನ್ನು ಹಿಂದಿಗೆ ಡಬ್ ಮಾಡಿ ಏಕೆ ಬಿಡುಗಡೆ ಮಾಡುತ್ತೀರಿ? ಹಿಂದಿ ನಮ್ಮ ಮಾತೃಭಾಷೆ ಮತ್ತು ರಾಷ್ಟ್ರ ಭಾಷೆಯಾಗಿದೆ, ಮುಂದೆಯೂ ಆಗಿರುತ್ತದೆ. ಜನ ಗಣ ಮನ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಅಜಯ್ ದೇವಗನ್ ಟ್ವೀಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.