ಮಂಡ್ಯದ ಜನರನ್ನು ಕೇಳದೆ ಯಾವುದೇ ತೀರ್ಮಾನ ಮಾಡಲ್ಲ: ಬಿಜೆಪಿ ಸೇರ್ಪಡೆ ಬಗ್ಗೆ ಸುಮಲತಾ ಪ್ರತಿಕ್ರಿಯೆ
ರಡು ಮೂರು ದಿನದಲ್ಲಿ ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿ ಸದ್ಯಕ್ಕೆ ನಾನು ಯಾವ ಪಕ್ಷದ ಬಗ್ಗೆಯೂ ಆಲೋಚಿಸಿಲ್ಲ. ಯಾವುದಾದ್ರೂ ಪಕ್ಷಕ್ಕೆ ಸೇರಬೇಕು ಅನ್ನೋ ಉದ್ದೇಶವಿದೆ.
Published: 28th April 2022 04:30 PM | Last Updated: 28th April 2022 04:58 PM | A+A A-

ಸುಮಲತಾ ಅಂಬರೀಷ್
ಮಂಡ್ಯ: ಎರಡು ಮೂರು ದಿನದಲ್ಲಿ ಬಿಜೆಪಿ ಸೇರುತ್ತಾರೆ ಎಂಬ ವಿಚಾರಕ್ಕೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಪ್ರತಿಕ್ರಿಯಿಸಿ ಸದ್ಯಕ್ಕೆ ನಾನು ಯಾವ ಪಕ್ಷದ ಬಗ್ಗೆಯೂ ಆಲೋಚಿಸಿಲ್ಲ. ಯಾವುದಾದ್ರೂ ಪಕ್ಷಕ್ಕೆ ಸೇರಬೇಕು ಅನ್ನೋ ಉದ್ದೇಶವಿದೆ. ಮಂಡ್ಯದ ಜನ ,ಮಂಡ್ಯದ ಅಭಿವೃದ್ಧಿ ಕಾಳಜಿ ಇರೋ ಪಕ್ಷ ಸೇರುತ್ತೇನೆ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಶ್ ಅವರು ಮಾತನಾಡಿದ್ದು, ಮಂಡ್ಯದ ಅಭಿವೃದ್ಧಿ ಕಾಳಜಿ ಇರೋ ಪಕ್ಷ ಸೇರುತ್ತೇನೆ. ಮಂಡ್ಯದ ಜನರನ್ನೂ ಕೇಳದೇ ನಾನು ಏನೂ ತೀರ್ಮಾನ ಮಾಡಲ್ಲ. ಕೇಂದ್ರ ಗೃಹಸಚಿವ ಅಮಿತ್ ಶಾ ಬರೋ ದಿನ ನಾನು ಮಂಡ್ಯದಲ್ಲೇ ಇರಲ್ಲ ಎಂದು ಹೇಳಿದ್ದಾರೆ.
ಎರಡು ವರ್ಷಗಳಿಂದ ಸಂಸದರ ನಿಧಿ ಬಂದಿರಲಿಲ್ಲ. ಈಗ ಸಂಸದರ ನಿಧಿ ಬಿಡುಗಡೆಯಾಗಿದೆ. ಈ ಕಾರಣದಿಂದ ಮುಖಂಡರಿಗೆ ಸಂಸದರ ನಿಧಿ ಬಗ್ಗೆ ತಿಳಿಸುತ್ತಿದ್ದೇನೆ. ಮುಖಂಡರು ಹಿಂದೆ ಫಂಡ್ ಬಗ್ಗೆ ಕೇಳಿದ್ದರು. ಈ ಬಗ್ಗೆ ಪ್ರಸ್ತಾಪ ಮಾಡಲು ಅವರನ್ನು ಸಭೆ ಕರೆದಿದ್ದೇನೆ.
ಇದನ್ನೂ ಓದಿ: ಸಂಸದೆ ಸುಮಲತಾ ಸೇರಿದಂತೆ ಕಾಂಗ್ರೆಸ್, ಜೆಡಿಎಸ್ ನಿಂದ ಹಲವು ಮುಖಂಡರು ಶೀಘ್ರದಲ್ಲೇ ಬಿಜೆಪಿ ಸೇರ್ಪಡೆ- ಆರ್.ಅಶೋಕ
ಹಾಗಂತ ಈ ಸಭೆ ಬಿಜೆಪಿ ಸೇರುವ ಬಗ್ಗೆ ಅಲ್ಲ. ನಾನು ಬಿಜೆಪಿ ಸೇರುವ ಬಗ್ಗೆ ಎಲ್ಲೂ ಹೇಳಿಲ್ಲ. ಬಿಜೆಪಿ ಮುಖಂಡರನ್ನು ಭೇಟಿಯಾಗಿದ್ದರೆ, ಅಭಿವೃದ್ಧಿಯ ವಿಚಾರವಾಗಿ ಅಷ್ಟೇ. ಅವರ ಜೊತೆ ಅಭಿವೃದ್ಧಿ ವಿಚಾರವನ್ನಷ್ಟೇ ಮಾತನಾಡಿದ್ದೇನೆ. ಸಚಿವ ಅಶ್ವತ್ಥ್ ನಾರಾಯಣ್ ಪಕ್ಷಕ್ಕೆ ಬಂದ್ರೆ ಸ್ವಾಗತ ಎಂದಿದ್ದಾರೆ.
ಆದರೆ ನನಗೆ ಈಗ ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಈಗ ಚುನಾವಣೆಯೂ ಇಲ್ಲ, ಈಗ ಈ ಪ್ರಸ್ತಾಪವೇ ಬೇಡ. ಪಕ್ಷ ಸೇರ್ಪಡೆ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸುತ್ತಿದ್ದೇನೆ. ಇದನ್ನು ಬಹಿರಂಗವಾಗಿ ಹೇಳಲು ಆಗಲ್ಲ. ಜನರು ಏನು ಅಭಿಪ್ರಾಯ ಹೇಳಿದ್ದಾರೆ ಅದನ್ನು ಹೇಳಲ್ಲ. ನನ್ನ ಬೆಂಬಲಿಗರು ಬಿಜೆಪಿ ಸೇರ್ಪಡೆ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ನಾನು ಹೇಳಲ್ಲ.
ಎಲ್ಲರೂ ಸ್ವತಂತ್ರರು, ಯಾವ ಪಕ್ಷಕ್ಕಾದ್ರು ಸೇರಬಹುದು. ನನ್ನ ಚುನಾವಣೆ ವೇಳೆ ಎಲ್ಲಾ ಪಕ್ಷದವರು ದುಡಿದಿದ್ದಾರೆ. ಅಭಿಷೇಕ್ ಚುನಾವಣೆ ಸ್ಪರ್ಧೆ ಆತನಿಗೆ ಬಿಟ್ಟಿದ್ದು. ಸಿನಿಮಾಗೆ ಬಾ ಎಂದು ನಾವು ಹೇಳಿಲ್ಲ, ರಾಜಕೀಯ ಬಗ್ಗೆನೂ ನಾವು ಹೇಳಲ್ಲ. ಇದು ಆತನ ವೈಯಕ್ತಿಕ ವಿಚಾರ ಎಂದು ಸಂಸದೆ ಸುಮಲತಾ ಹೇಳಿದ್ದಾರೆ.