ಪಿಎಸ್ಐ ನೇಮಕಾತಿ ಅಕ್ರಮ: ಹೈಕೋರ್ಟ್ ನ್ಯಾಯಧೀಶರ ಮೇಲ್ವಿಚಾರಣೆಯಲ್ಲಿ ತನಿಖೆಗೆ ಕಾಂಗ್ರೆಸ್ ಆಗ್ರಹ
ಪಿಎಸ್ಐ ನೇಮಕಾತಿ ಪಟ್ಟಿಯನ್ನು ರಾಜ್ಯ ಸರಕಾರ ರದ್ದುಪಡಿಸಿದೆ. ಆದರೆ, ಅಕ್ರಮಗೈದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
Published: 29th April 2022 11:05 PM | Last Updated: 30th April 2022 12:58 PM | A+A A-

ರಾಮಲಿಂಗಾ ರೆಡ್ಡಿ
ಬೆಂಗಳೂರು: ಪಿಎಸ್ಐ ನೇಮಕಾತಿ ಪಟ್ಟಿಯನ್ನು ರಾಜ್ಯ ಸರಕಾರ ರದ್ದುಪಡಿಸಿದೆ. ಆದರೆ, ಅಕ್ರಮಗೈದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರ ಪತ್ರಿಕಾ ಪ್ರಕಟಣೆ ನೀಡಿದ್ದು, ಪಿಎಸ್ಐ ನೇಮಕಾತಿ ಪಟ್ಟಿಯನ್ನೇ ರದ್ದುಪಡಿಸಿ ಹೊಸದಾಗಿ ಪರೀಕ್ಷೆ ನಡೆಸಿ ಪ್ರತಿಭಾವಂತರಿಗೆ ನ್ಯಾಯ ದೊರಕಿಸಿಕೊಡುವುದಾಗಿ ಗೃಹ ಮಂತ್ರಿ ಅರಗ ಜ್ಞಾನೇಂದ್ರ ಅವರು ಘೋಷಿಸಿದ್ದಾರೆ.
ಪಿಎಸ್ಐ ನೇಮಕಾತಿ ಬ್ರಹ್ಮಾಂಡ ಭ್ರಷ್ಟಾಚಾರ, ಭಾರಿ ಅಕ್ರಮದ ಕರ್ಮಕಾಂಡ ಅಗಿದ್ದು ದಿನಕ್ಕೊಂದು ರೀತಿಯ ದಗಲ್ಬಾಜಿ ಸಂಗತಿಗಳು ಬೆಳಕಿಗೆ ಬಂದಿದ್ದರಿಂದ ಈ ಪಟ್ಟಿ ರದ್ದಾಗಲೇಬೇಕಿತ್ತು. ಸಹಜವಾಗಿ ಅದನ್ನು ಮಾಡಿದ್ದಾರೆ. ಹೀಗೆ ಮಾಡಿ ಜನರ ಗಮನ ಬೇರೆಡೆ ಸೆಳೆದು ಅಕ್ರಮದ ಆರೋಪಿಗಳನ್ನು ರಕ್ಷಿಸಬಹುದೆಂದು ಗೃಹ ಮಂತ್ರಿ ತಿಳಿದಿದ್ದರೆ ಅದು ಮೂರ್ಖತನವಾದೀತು. ಹೈಕೋರ್ಟ್ ನ್ಯಾಯಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ಈ ಪ್ರಕರಣದ ತನಿಖೆಯಾಗಬೇಕು ಎಂದು ರಾಮಲಿಂಗಾರೆಡ್ಡಿ ಒತ್ತಾಯಿಸಿದ್ದಾರೆ.
ನೇಮಕಾತಿ ಪಟ್ಟಿ ರದ್ದು ಮಾಡಿರುವ ಗೃಹಮಂತ್ರಿಗಳು ಈ ಅಕ್ರಮಕ್ಕೆ ಕಾರಣವಾದ ದೊಡ್ಡ ದೊಡ್ಡ ಕುಳಗಳ ಬಗ್ಗೆ ಚಕಾರ ಎತ್ತುತ್ತಿಲ್ಲ ಏಕೆ? ನೇಮಕಾತಿ ಮಾಡಿದವರೂ ಪೋಲಿಸ್ ಇಲಾಖೆ. ಅಕ್ರಮದಲ್ಲಿ ಶಾಮೀಲಾಗಿರುವವರೂ ಪೊಲೀಸರೆ. ತನಿಖೆ ನಡೆಸುತ್ತಿರುವವರು ಪೊಲೀಸರು. ಅಕ್ರಮದ ಪ್ರಮುಖ ಆರೋಪಿ ದಿವ್ಯ ಹಾಗರಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಸೇರಿದವರು. ಹೀಗಾಗಿ ನಿಷ್ಪಕ್ಷಪಾತ ತನಿಖೆ ನಡೆಯಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
ಇದನ್ನು ಓದಿ: ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: ದಿವ್ಯಾ ಹಾಗರಗಿ ಸೇರಿ 7 ಆರೋಪಿಗಳು 11 ದಿನ ಸಿಐಡಿ ವಶಕ್ಕೆ
ದೊಡ್ಡ ಅಧಿಕಾರಿಗಳು, ಆಡಳಿತ ಪಕ್ಷದ ಪ್ರಭಾವಿ ರಾಜಕಾರಣಿಗಳೇ ಇದರಲ್ಲಿ ಶಾಮಿಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಆದ್ದರಿಂದ ಸರಕಾರದ ನೇರ ನಿಯಂತ್ರಣದಲ್ಲಿ ಇರುವ ಸಿಐಡಿಯಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ತನಿಖೆ ಆರಂಭವಾಗಿ ಇಷ್ಟು ದಿನವದರೂ ಒಂದು ಮಧ್ಯಂತರ ವರದಿಯನ್ನು ಬಿಡುಗಡೆ ಮಾಡಲು ಸಿಐಡಿಗೆ ಸಾಧ್ಯವಾಗಿಲ್ಲ ಏಕೆ? ಬರೀ ಕಲಬುರ್ಗಿ ಅಷ್ಟೇ ಅಲ್ಲ ಬೆಂಗಳೂರಿನ ಕೇಂದ್ರವೊಂದರಲ್ಲೂ ಅಕ್ರಮ ನಡೆದಿರುವ ದೂರುಗಳಿವೆ. ಈ ಬಗ್ಗೆಯೂ ಉನ್ನತ ತನಿಖೆಯ ಅಗತ್ಯವಿದೆ ಎಂದಿದ್ದಾರೆ.
ನೇಮಕಾತಿ ಉಸ್ತುವಾರಿ ಅಧಿಕಾರಿ ADGP ಅಮೃತ್ ಪಾಲ್ ಅವರನ್ನು ಸರ್ಕಾರ ವರ್ಗಾಯಿಸಿದ್ದು ಯಾಕೆ? ಅವರನ್ನು ಸಾಮಾನ್ಯ ವರ್ಗಾವಣೆ ಪದ್ದತಿಯಲ್ಲಿ ವರ್ಗಾಯಿಸಲಾಗಿದೆ. ಹಗರಣಕ್ಕೂ ಈ ವರ್ಗಾವಣೆಗೂ ಸಂಬಂಧವಿಲ್ಲ ಎಂದು ಸಿಎಂ ಹೇಳುವ ಮೂಲಕ ಅಕ್ರಮದ ಹೊಣೆ ಹೊರಬೇಕಾಗಿದ್ದ ಅಧಿಕಾರಿಯನ್ನು ಸಮರ್ಥಿಸಿದಂತೆ ಆಗುವುದಿಲ್ಲವೇ? ಈ ಎಲ್ಲ ಬೆಳೆವಣಿಗೆಗಳು ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನಗಳ ಭಾಗವಾಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೀಗಾಗಿ ಈ ಪ್ರಕರಣದ ತನಿಖೆ ಹೈಕೋರ್ಟ್ ನ್ಯಾಯಧೀಶರೊಬ್ಬರ ಮೇಲ್ವಿಚಾರಣೆಯಲ್ಲಿ ಸಿಐಡಿ ತಂಡ ರಚಿಸಿ ತನಿಖೆ ನಡೆಸಬೇಕು. ಆಗ ಮಾತ್ರ ಸತ್ಯ ಹೊರ ಬೀಳುತ್ತದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.