ಪಕ್ಷ ಬಯಸಿದರೆ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ, ವರಿಷ್ಠರ ತೀರ್ಮಾನಕ್ಕೆ ಬದ್ಧ: ಕೆ.ಎಸ್ ಈಶ್ವರಪ್ಪ
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ, ನಾನು ಪುನಃ ಮಂತ್ರಿಯಾಗ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಕಳಂಕ ರಹಿತನಾಗಿದ್ದೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
Published: 08th August 2022 09:26 AM | Last Updated: 08th August 2022 12:55 PM | A+A A-

ಕೆ ಎಸ್ ಈಶ್ವರಪ್ಪ
ಶಿವಮೊಗ್ಗ: ಪಕ್ಷ ಬಯಸಿದರೆ ಚುನಾವಣೆಗೆ ಸ್ಪರ್ಧೆ ಮಾಡ್ತೇನೆ, ಇಲ್ಲವಾದ್ರೆ ಇಲ್ಲ ಎಂದಿದ್ದಾರೆ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಚುನಾವಣಾ ನಿವೃತ್ತಿ ಘೋಷಣೆ ಮಾಡಿದ್ದಾರೆ, ನೀವೂ ಕೂಡ ನಿವೃತ್ತಿ ತಗೋತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ, ಚುನಾವಣೆಗೆ ಸ್ಪರ್ಧಿಸುವ ವಿಚಾರವನ್ನು ಪಕ್ಷ ತೀರ್ಮಾನ ಮಾಡುತ್ತದೆ ಎಂದು ಸ್ಪಷ್ಟಪಡಿಸಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು. ನಾನು ಮೊದಲು ಎಂಎಲ್‌ಎ ಆದಾಗಲೂ ನಾನೇ ಸ್ವಯಂ ಇಚ್ಛೆಯಿಂದ ಶಾಸಕನಾಗಿದ್ದಲ್ಲ. ಹಿರಿಯರೆಲ್ಲಾ ಕೂತು ನನ್ನನ್ನು ಆಯ್ಕೆ ಮಾಡಿದರು. ನಂತರ ಯುವ ಮೋರ್ಚಾ ರಾಜ್ಯಾಧ್ಯಕ್ಷ ಆಗಬೇಕು ಎಂದು ಹೇಳಿದರು. ನಾನು ಅದನ್ನೂ ನಿರ್ವಹಿಸಿದೆ. ಬಳಿಕ ಬಿಜೆಪಿ ರಾಜ್ಯಾಧ್ಯಕ್ಷನಾಗಿಯೂ ಕೆಲಸ ಮಾಡಿದೆ. ನಂತರ ಅನೇಕ ಮಂತ್ರಿ ಪದವಿಗಳನ್ನ ನೋಡಿದ್ದೇನೆ, ಉಪ ಮುಖ್ಯಮಂತ್ರಿ ಕೂಡ ಆಗಿದ್ದೇನೆ. ಈಗಲೂ ಅಷ್ಟೇ ಪಕ್ಷ ಚುನಾವಣೆಗೆ ಟಿಕೆಟ್ ಕೊಟ್ಟರೆ ಸ್ಪರ್ಧಿಸುತ್ತೇನೆ ಇಲ್ಲದಿದ್ದರೆ ಇಲ್ಲ ಎಂದು ಹೇಳಿದ್ದಾರೆ.
ಸಚಿವ ಸಂಪುಟ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ, ನಾನು ಪುನಃ ಮಂತ್ರಿಯಾಗ್ತೀನೋ ಇಲ್ಲವೋ ಗೊತ್ತಿಲ್ಲ. ಆದರೆ ನಾನು ಕಳಂಕ ರಹಿತನಾಗಿದ್ದೇನೆ ಎಂದು ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಇದನ್ನೂ ಓದಿ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪಗೆ ಕ್ಲೀನ್ ಚಿಟ್; ದುರ್ದೈವದ ಸಂಗತಿ ಎಂದ ಕಾಂಗ್ರೆಸ್
ಇದೇ ವೇಳೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಈಶ್ವರಪ್ಪ, ದಾವಣಗೆರೆಯಲ್ಲಿ ನಡೆಸಿರುವುದು ಸಿದ್ದರಾಮೋತ್ಸವ ಅಲ್ಲ, ಅದು ಚುನಾವಣೋತ್ಸವ ಎಂದರು. ಅಂದು ಚುನಾವಣೋತ್ಸವಕ್ಕೆ ಬಂದಿದ್ದ ಜನರೇ ಮುಂದೆ ಕಾಂಗ್ರೆಸ್ ಪಕ್ಷಕ್ಕೆ ಮಣ್ಣು ಮುಕ್ಕಿಸಲಿದ್ದಾರೆ ಎಂದು ಈಶ್ವರಪ್ಪ ಭವಿಷ್ಯ ನುಡಿದರು.
ಸಿದ್ದರಾಮೋತ್ಸವದಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ಆಲಂಗಿಸಿಕೊಂಡ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಆಲಿಂಗನಕ್ಕೆ ಪಕ್ಷದ ವರಿಷ್ಟ ರಾಹುಲ್ ಗಾಂಧಿ ಹೇಳಿ ಕೊಡಬೇಕಾಯಿತು. ಕೆಲ ಕಾಲ ಜೊತೆಗೆ ಓಡಾಡಿದ ಪ್ರೇಮಿಗಳು ಬೇರೆಯಾದಾಗ ಕುಟುಂಬದವರೇ ಬುದ್ದಿ ಹೇಳಿ ಮದುವೆಗೆ ಒಪ್ಪಿಸಿ ತಬ್ಬಿಕೊಳ್ಳಿ ಎಂದು ಗದರುವಂತಿತ್ತು.
ಅಂದು ವೇದಿಕೆ ಕಾರ್ಯಕ್ರಮದ ಮಟ್ಟಿಗಷ್ಟೇ ತಬ್ಬಿಕೊಂಡರು, ವೇದಿಕೆಯಿಂದ ಕೆಳಗಿಳಿದ ಮೇಲೆ ಕೈಯಲ್ಲಿ ಏನು ತೆಗೆದುಕೊಂಡರೋ ಎಂದು ಈಶ್ವರಪ್ಪ ಲೇವಡಿ ಮಾಡಿದರು. ಇನ್ನು ಮಂತ್ರಿ ಮಂಡಲ ವಿಸ್ತರಣೆ ಕುರಿತು ಯಾವುದೇ ಮಾಹಿತಿ ಇಲ್ಲ ಎಂದ ಈಶ್ವರಪ್ಪ, ನಾನು ಪುನಃ ಮಂತ್ರಿಯಾಗ್ತೀನೋ ಇಲ್ಲವೋ ಮಾಹಿತಿ ಇಲ್ಲ, ಆದರೆ ಕಳಂಕ ರಹಿತನಾಗಿದ್ದೇನೆ ಎಂದು ಹೇಳಿದರು.