ರಾಜ್ಯದಲ್ಲಿ ಸಿಎಂ ಬದಲಾವಣೆಯಿಲ್ಲ, ಮುಂದಿನ ಚುನಾವಣೆ ಬೊಮ್ಮಾಯಿ ನಾಯಕತ್ವದಲ್ಲಿ: ಕಾಂಗ್ರೆಸ್ ಗೆ ಬಿಜೆಪಿ ತಿರುಗೇಟು

ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಯಾಗುತ್ತದೆ, ಸಿಎಂ ಬದಲಾಗುತ್ತಾರೆ, ಮೂರನೇ ಸಿಎಂ ಬರುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಜೆಪಿಯನ್ನು ಟೀಕಿಸಿ ನಿನ್ನೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿತ್ತು.
ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು
ಸಿಎಂ ಬೊಮ್ಮಾಯಿ ಮತ್ತು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮಹತ್ತರ ಬದಲಾವಣೆಯಾಗುತ್ತದೆ, ಸಿಎಂ ಬದಲಾಗುತ್ತಾರೆ, ಮೂರನೇ ಸಿಎಂ ಬರುತ್ತಾರೆ ಎಂಬ ಊಹಾಪೋಹಗಳ ನಡುವೆ ಬಿಜೆಪಿಯನ್ನು ಟೀಕಿಸಿ ನಿನ್ನೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿತ್ತು.

ಇದಕ್ಕೆ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್ ಅಶೋಕ್, 2023ರ ವಿಧಾನಸಭೆ ಚುನಾವಣೆ ತನವೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಕೇಂದ್ರ ಸಚಿವ ಅಮಿತ್ ಶಾ ಅವರು ಕೂಡ ಬೊಮ್ಮಾಯಿ ನಾಯಕತ್ವವನ್ನು ಕೊಂಡಾಡಿದ್ದಾರೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆಯ ಪ್ರಶ್ನೆಯೇ ಇಲ್ಲ, ಮುಂದಿನ ವರ್ಷ ಚುನಾವಣೆ ಮುಗಿದ ನಂತರವೂ ಸರಳ ಮನುಷ್ಯ ಬೊಮ್ಮಾಯಿಯವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಎಂದರು.

ಹತಾಶೆಯಿಂದ ಕಾಂಗ್ರೆಸ್ ಇಂತಹ ಸುಳ್ಳುವದಂತಿ ಹಬ್ಬಿಸುತ್ತಿದೆ. ಕರ್ನಾಟಕಕ್ಕೆ ಬಿಜೆಪಿಯಿಂದ ಮೂರನೇ ಮುಖ್ಯಮಂತ್ರಿ ಎಂಬ ಕಾಂಗ್ರೆಸ್ ನ ಟ್ವೀಟ್ ಹಾಸ್ಯಾಸ್ಪದ. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನಾಯಕತ್ವ ಯಾವಾಗಲೂ ಕಾಂಗ್ರೆಸ್ ನ್ನು ಮೂಲೆಗುಂಪು ಮಾಡಲಿದೆ ಎಂದರು.

ನಿನ್ನೆ ಟ್ವಿಟ್ಟರ್ ನಲ್ಲಿ ಸಚಿವ ಉಮೇಶ್ ಕತ್ತಿಯವರು ಈ ಹಿಂದೆ ಹೇಳಿದ್ದರೆನ್ನಲಾದ ಸಿಎಂ ರೇಸ್ ನಲ್ಲಿ ನಾನು ಕೂಡ ಇದ್ದೇನೆ ಎಂಬ ವಿಡಿಯೊ ಕ್ಲಿಪ್ ನ್ನು ಟ್ವೀಟ್ ಮಾಡಿದ್ದ ಕಾಂಗ್ರೆಸ್ ಬಿಜೆಪಿ ಸರ್ಕಾರದಲ್ಲಿ ಮೂರನೇ ಮುಖ್ಯಮಂತ್ರಿ ಬರಲಿದ್ದಾರೆ. ಅಮಿತ್ ಶಾ ಅವರು ರಾಜ್ಯಕ್ಕೆ ಬಂದುಹೋದ ಮೇಲೆ ಬಿಜೆಪಿಯಲ್ಲಿ ಮೋಡಕವಿದ ವಾತಾವರಣವಿದೆ ಎಂದು ಕೆಪಿಸಿಸಿ ಟ್ವೀಟ್ ಮಾಡಿತ್ತು.

ಅದಕ್ಕೆ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಟ್ವೀಟ್ ಮಾಡಿ, ಶರ್ಟ್ ಬದಲಾಯಿಸುವಂತೆ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಸ್ಥಿತಿ ಇರುವುದು ಕಾಂಗ್ರೆಸ್ ನಲ್ಲಿ. ಕಾಂಗ್ರೆಸ್ ಆಡಳಿತ ಸಂದರ್ಭದಲ್ಲಿ ಸಿಎಂ ಎಂದರೆ ಚಿಟ್ ಮಿನಿಸ್ಟರ್ ಎಂಬಂತಾಗಿದ್ದರು. ದಿಲ್ಲಿ ಮಾಲೀಕರು ಕಳುಹಿಸಿದ ಚೀಟಿ ಆಧಾರದ ಮೇಲೆ ಮುಖ್ಯಮಂತ್ರಿಗಳನ್ನು ಬದಲಾಯಿಸಿದ ಘನ ಉದಾಹರಣೆ ನಿಮ್ಮ ಪಕ್ಷಕ್ಕೆ ಮಾತ್ರ ಇದೆ ಎಂದು ಮೂದಲಿಸಿದ್ದರು.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸುಧಾಕರ್, ಬೊಮ್ಮಾಯಿ ನಾಯಕತ್ವವನ್ನು ಎಲ್ಲರೂ ಒಪ್ಪಿಕೊಂಡಿದ್ದು, ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ನ ಭ್ರಮೆಯಷ್ಟೆ. ಬೊಮ್ಮಾಯಿ ನಾಯಕತ್ವದಲ್ಲಿ ಬಿಜೆಪಿ ಗಟ್ಟಿಯಾಗಿದೆ. ಕಾಂಗ್ರೆಸ್ ಪಕ್ಷದ ಎರಡು ಬಾಗಿಲಿನಿಂದ ಯಾರು ಇಳಿಯುತ್ತಾರೆ ಎಂದು ಸದ್ಯದಲ್ಲಿಯೇ ಗೊತ್ತಾಗಲಿದೆ ಎಂದಿದ್ದಾರೆ.

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕಾಂಗ್ರೆಸ್ ಟ್ವೀಟ್ ಗೆ ಹರಿಹಾಯ್ದಿದ್ದಾರೆ. ವಿಡಿಯೊ ಹೇಳಿಕೆ ನೀಡಿರುವ ಅವರು, ಬೊಮ್ಮಾಯಿಯವರು ಸಿಎಂ ಅವಧಿಯನ್ನು ಪೂರ್ಣಗೊಳಿಸಲಿದ್ದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮೇಲಿನ ಇಡಿ ಕ್ರಮವನ್ನು ಮುಚ್ಚಿಹಾಕಲು ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ನಾಯಕರ ಮಧ್ಯೆ ಸಿಎಂ ಅಭ್ಯರ್ಥಿಗಾಗಿ ನಡೆಯುತ್ತಿರುವ ಜಗಳವನ್ನು ಜನರ ಮನಸ್ಸಿನಿಂದ ಮರೆಮಾಚಲು ಈ ರೀತಿ ಹೇಳಿಕೆಗಳನ್ನು ಕೊಡುತ್ತಾ ತಿರುಗುತ್ತಿದ್ದಾರೆ. ಮುಂದಿನ ವರ್ಷ ಚುನಾವಣೆಯನ್ನು ಬಿಜೆಪಿಯು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಸಿಎಂ ಬೊಮ್ಮಾಯಿ ನಾಯಕತ್ವದಲ್ಲಿ ಎದುರಿಸಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com