ಕಾಲ ಪಾನಿ ಜೈಲಿನಲ್ಲಿ ಸಾವರ್ಕರ್ 11 ವರ್ಷ ಪಟ್ಟ ಕಷ್ಟಗಳನ್ನು 'ನಕಲಿ' ಗಾಂಧಿಗಳು ಎಂದಿಗೂ ಅನುಭವಿಸಲಿಲ್ಲ: ಪ್ರಹ್ಲಾದ್ ಜೋಶಿ

ಕಾಲ ಪಾನಿ ಜೈಲಿನಲ್ಲಿ 11 ವರ್ಷಗಳ ಸಾವರ್ಕರ್ ಎದುರಿಸಿದ ಕಷ್ಟಗಳನ್ನು ಈಗಿರುವ ಯಾವುದೇ 'ನಕಲಿ' ಗಾಂಧಿಗಳು ಎಂದಿಗೂ ಅನುಭವಿಸಲಿಲ್ಲ ಎಂದು ಜೋಶಿ ತಿಳಿಸಿದ್ದಾರೆ.
ಪ್ರಹ್ಲಾದ್ ಜೋಶಿ
ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಕಾಂಗ್ರೆಸ್ ನಾಯಕರು ವಿಡಿ ಸಾವರ್ಕರ್ ಅವರನ್ನು ಗುರಿಯಾಗಿಸಿಕೊಂಡು ನೀಡುತ್ತಿರುವ ಹೇಳಿಕೆಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದ್ದು, "ಕಾಂಗ್ರೆಸ್‌ನ ಮೊದಲ ಕುಟುಂಬ" ಕೊಡುಗೆಯನ್ನು ಪ್ರಶ್ನಿಸಿದ್ದಾರೆ.

ಕಾಲ ಪಾನಿ ಜೈಲಿನಲ್ಲಿ 11 ವರ್ಷಗಳ ಸಾವರ್ಕರ್ ಎದುರಿಸಿದ ಕಷ್ಟಗಳನ್ನು ಈಗಿರುವ ಯಾವುದೇ 'ನಕಲಿ' ಗಾಂಧಿಗಳು ಎಂದಿಗೂ ಅನುಭವಿಸಲಿಲ್ಲ ಎಂದು ಜೋಶಿ ತಿಳಿಸಿದ್ದಾರೆ.

ಕೊಡಗಿನಲ್ಲಿ ಸಿದ್ದರಾಮಯ್ಯ ಅವರ ಕಾರಿನ ಮೇಲೆ‌ ಮೊಟ್ಟೆ ಎಸೆದ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿದ ಪ್ರಹ್ಲಾದ್ ಜೋಶಿ, ಸಿದ್ದರಾಮಯ್ಯ ಆಗಲಿ ಬೇರೆಯವರಿಗೆ ಆಗಲಿ ಮೊಟ್ಟೆ ಎಸೆಯುವುದು ತಪ್ಪು. ಮೊಟ್ಟೆ ಎಸೆದಿದ್ದು ಸರಿಯಲ್ಲ. ಕಪ್ಪು ಧ್ವಜ ಪ್ರದರ್ಶನ ಮಾಡುವವರ ಪರ ನಾನು ಇಲ್ಲ. ಅದು ಯಾವ ರೀತಿಯಲ್ಲಿಯೂ ಸಮರ್ಥನೀಯವಲ್ಲ. ಆದರೆ ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಹೇಳಿದ್ದನ್ನು ಇಲ್ಲಿ ಗಮನಿಸಬೇಕು. ಸಾವರ್ಕರ್ ಬಗ್ಗೆ ನಿಮ್ಮ ಅಭಿಪ್ರಾಯ ಬೇರೆ ಇರಬಹುದು. ಆದರೆ ಸಾವರ್ಕರ್ ಬಗ್ಗೆ ವಿಶ್ವಾಸ, ಶ್ರದ್ಧೆ ಇದ್ದವರಿಗೆ ಅವರು ಅಪಮಾನವಾಗುವ ರೀತಿಯಲ್ಲಿ ಮಾತನಾಡಿದ್ದಾರೆ. ಇದು ಸರಿಯಲ್ಲ ಎಂದರು.

ಸಾವರ್ಕರ್ ಗುರುತಿಸಲ್ಪಡುವ ಭಾರತದ ಸುಪುತ್ರ ಎಂದು ಸ್ವತಃ ಇಂದಿರಾಗಾಂಧಿ ಅವರು ಹೇಳಿದ್ದರು. ಮಹಾತ್ಮ ಗಾಂಧಿಜೀ ಸೇರಿದಂತೆ ಅಂದಿನ ಕಾಂಗ್ರೆಸ್ ನಾಯಕರು ಸಾವರ್ಕರ್ ಬಿಡುಗಡೆಗೆ ಬ್ರಿಟೀಷ್ ಸರ್ಕಾರಕ್ಕೆ ಆಗ್ರಹಿಸಿದ್ದರು. ಅವರೆಲ್ಲ ಒರಿಜಿನಲ್ ಕಾಂಗ್ರೆಸಿಗರು.‌ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದರೂ, ಸಾವರ್ಕರ್ ಅವರ ಹೋರಾಟ, ವ್ಯಕ್ತಿತ್ವಕ್ಕೆ ಗೌರವ ಕೊಡುತ್ತಿದ್ದರು. ಈಗಿರುವವರು ನಕಲಿ ಕಾಂಗ್ರೆಸಿಗರು. ಇವರು ಸಾವರ್ಕರ್ ವಿರುದ್ಧ ಮಾತನಾಡುತ್ತಿದ್ದಾರೆ. ಇವರು ಒರಿಜಿನಲ್ ಕಾಂಗ್ರೆಸಿಗರಲ್ಲ ಎಂದು ಪ್ರಹ್ಲಾದ್ ಜೋಶಿ ಟೀಕಿಸಿದ್ದಾರೆ.

ಓಲೈಕೆ ರಾಜಕಾರಣದ ಭಾಗವಾಗಿ ಸಿದ್ದರಾಮಯ್ಯ ಅವರು ಬಾಯಿಗೆ ಬಂದ ಹಾಗೆ ಮಾತನಾಡ್ತಿದ್ದಾರೆ. ಮುಸ್ಲಿಂ ಒಲೈಕೆಗಾಗಿ ಇಂತಹ ರಾಜಕಾರಣದಲ್ಲಿ ನಿರತರಾಗಿದ್ಧಾರೆ.‌ ಸಿದ್ದರಾಮಯ್ಯ ಅವರು ಕಾಂಗ್ರೆಸಿಗರಲ್ಲ. ಹೀಗಾಗಿ ಅವರು ಹೈಕಮಾಂಡ್ ನಾಯಕರನ್ನು ಮೆಚ್ಚಿಸಲು ಈ ರೀತಿಯ ಹೇಳಿಕೆಗಳನ್ನ ನೀಡ್ತಿದ್ದಾರೆ.

ಅವರು ಯಾರನ್ನಾದ್ರು ಓಲೈಸಿಕೊಳ್ಳಲಿ. ಆದರೆ, ಸಾವರ್ಕರ್ ಬಗ್ಗೆ ಮಾತಾಡುವುದು ಸರಿಯಲ್ಲ. ಅವರೊಬ್ಬ “ರಿಮಾರ್ಕಬಲ್ ಸನ್ ಆಫ್ ಇಂಡಿಯಾ” ಅಂತಾ ಇಂದಿರಾ ಗಾಂಧಿ ಅವರೇ ಹೇಳಿದ್ದಾರೆ. ಸಿದ್ದರಾಮಯ್ಯ ಅವರು ಇದನ್ನ ತಿಳಿದುಕೊಳ್ಳಲಿ ಎಂದು ಪ್ರಲ್ಹಾದ್ ಜೋಶಿ ಆಶಿಸಿದರು.

ಕಾಂಗ್ರೆಸ್ ಪಕ್ಷವು ಈಗ ಮೂಲ ಕಾಂಗ್ರೆಸ್ ಆಗಿ ಉಳಿದಿಲ್ಲ, ಹೊರಗಿನಿಂದ ಬಂದವರೇ ಈ ಪಕ್ಷದಲ್ಲಿ ಇದ್ದಾರೆ. ಇದರಲ್ಲಿ ಸಿದ್ದರಾಮಯ್ಯ ಕೂಡ ಒಬ್ಬರು. ಮುಸ್ಲಿಂ ತುಷ್ಟೀಕರಣಕ್ಕೆ ಇಂತಹ ಹೇಳಿಕೆಯನ್ನು ಸಿದ್ದರಾಮಯ್ಯ ನೀಡುತ್ತಾರೆ ಎಂದು ಟೀಕಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com