ವಿಧಾನಸೌಧದಲ್ಲಿ ಬಸವಣ್ಣ, ಕೆಂಪೇಗೌಡರ ಪ್ರತಿಮೆ ಸ್ಥಾಪನೆ: ಎರಡು ಪ್ರಬಲ ಸಮುದಾಯಗಳ ಓಲೈಕೆಗಾಗಿ ಬಿಜೆಪಿ ಸ್ಟ್ಯಾಚ್ಯು ಪಾಲಿಟಿಕ್ಸ್?

ವಿಧಾನಸೌಧದ ಆವರಣದಲ್ಲಿ ಈಗ ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಮಹಾತ್ಮ ಗಾಂಧಿ ಮತ್ತಿತರರ ಪ್ರತಿಮೆಗಳಿವೆ. ವಾಸ್ತವವಾಗಿ, 2021 ರಲ್ಲಿ, ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವಾಗ ಬಿಜೆಪಿ ಸರ್ಕಾರವು ವಿಧಾನಸೌಧದಲ್ಲಿ ಸಮಾಜ ಸುಧಾರಕ, ದಾರ್ಶನಿಕ ಬಸವಣ್ಣ ಮತ್ತು ನಾಡಪ್ರಭು ಕೆಂಪೇಗೌಡರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ರಾಜ್ಯದ ಎರಡು ದೊಡ್ಡ ಸಮುದಾಯಗಳಾದ ಲಿಂಗಾಯತ ಮತ್ತು ಒಕ್ಕಲಿಗರನ್ನು ಓಲೈಸಲು ಪ್ರಯತ್ನಿಸುತ್ತಿದೆ. ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1 ರಂದು ಅನಾವರಣಗೊಳ್ಳುವ ನಿರೀಕ್ಷೆಯಿದೆ.

ವಿಧಾನಸೌಧದ ಆವರಣದಲ್ಲಿ ಈಗ ಡಾ.ಬಿ.ಆರ್.ಅಂಬೇಡ್ಕರ್, ಕೆಂಗಲ್ ಹನುಮಂತಯ್ಯ, ಮಹಾತ್ಮ ಗಾಂಧಿ ಮತ್ತಿತರರ ಪ್ರತಿಮೆಗಳಿವೆ. ವಾಸ್ತವವಾಗಿ, 2021 ರಲ್ಲಿ, ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ವಿಧಾನಸೌಧದಲ್ಲಿ ಬಸವಣ್ಣ ಪ್ರತಿಮೆ ಸ್ಥಾಪನೆಗೆ ಕ್ಯಾಬಿನೆಟ್ ಅನುಮೋದನೆ ನೀಡಿತು, ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ ಇತ್ತೀಚೆಗಷ್ಟೇ ಕೆಂಪೇಗೌಡ ಜಯಂತಿ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಂಪೇಗೌಡ ಪ್ರತಿಮೆ ಸ್ಥಾಪಿಸುವುದಾಗಿ ಘೋಷಿಸಿದ್ದರು.

ಇದೀಗ ಎರಡೂ ಪ್ರತಿಮೆ ಸ್ಥಾಪಿಸಲು ಸರ್ಕಾರ ಆದೇಶ ಹೊರಡಿಸಿದೆ. ನವೆಂಬರ್ 1 ರಂದು ಪ್ರತಿಮೆಗಳನ್ನು ಅನಾವರಣಗೊಳಿಸಲಾಗುವುದು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ, ಪಿಡಬ್ಲ್ಯೂಡಿಯ ಮುಖ್ಯ ವಾಸ್ತುಶಿಲ್ಪಿ ಪ್ರತಿಮೆಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ವಿಧಾನಸೌಧದಲ್ಲಿರುವ ಬಹುತೇಕ ಪ್ರತಿಮೆಗಳು 14 ಅಡಿ ಎತ್ತರವಿದ್ದು,  ಎರಡು ಹೊಸ ಪ್ರತಿಮೆಗಳು ಒಂದೇ ಗಾತ್ರದ್ದಾಗಿರುತ್ತವೆ. ಇವುಗಳನ್ನು ಹಿತ್ತಾಳೆಯಿಂದ ಮಾಡಲಾಗುತ್ತದೆ. ನವೆಂಬರ್ 1 ರೊಳಗೆ ಪ್ರತಿಮೆ ವಿನ್ಯಾಸಗೊಳಿಸಲು ಸೂಚಿಸಲಾಗಿದೆ,  ಪ್ರತಿಮೆ ಸ್ಥಾಪನೆಗೆ ನಮಗೆ ಕಡಿಮೆ ಸಮಯವಿದೆ, ಹೀಗಾಗಿ ನಾವು ಕೆಲಸ ಆರಂಭಿಸಿದ್ದೇವೆ ಎಂದು ಹೇಳಿದ್ದಾರೆ.

ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಪ್ರತಿಮೆಗಳನ್ನು ಸ್ಥಾಪಿಸುತ್ತಿರುವುದು ಮತದಾರರ ಸೆಳೆಯುವ ಗುರಿಯನ್ನು ಹೊಂದಿರುವಂತಿದೆ. ಬಸವಣ್ಣ ಮತ್ತು ಕೆಂಪೇಗೌಡರು ಜಾತಿ, ಧರ್ಮ ಮೀರಿದವರು. ಆದರೆ ಲಿಂಗಾಯತರು ಮತ್ತು ಒಕ್ಕಲಿಗರು ಇಬ್ಬರು ಶ್ರೇಷ್ಠರೊಂದಿಗೆ ಭಾವನಾತ್ಮಕ ಸಂಪರ್ಕವನ್ನು ಹೊಂದಿದ್ದಾರೆ. ಹಲವೆಡೆ ಈ ಇಬ್ಬರು ವ್ಯಕ್ತಿಗಳ ಪ್ರತಿಮೆಗಳಿವೆ, ಆದರೆ ವಿಧಾನಸೌಧದಲ್ಲಿ ಅವುಗಳನ್ನು  ಸ್ಫಾಪಿಸುವುದು ಬಹಳ ವ್ಯತ್ಯಾಸ ಹೊಂದಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಹಿಂದೆ ರಾಮನಗರದಲ್ಲಿ, ಲಿಂಗಾಯತ ಮಠಾಧೀಶರಾದ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಒಕ್ಕಲಿಗ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಅವರ 111 ಅಡಿ ಎತ್ತರದ ಕಂಚಿನ ಪ್ರತಿಮೆ ಸ್ಥಾಪಿಸಲು ಸರ್ಕಾರ ಅನುಮೋದನೆ ನೀಡಿದ್ದು, ಎರಡು ಸಮುದಾಯಗಳನ್ನು ಓಲೈಸಲು ಪ್ರತಿಮೆ ರಾಜಕಾರಣ ಮಾಡಲು ಯತ್ನಿಸಿತ್ತು. ಅಂದಿನ ಸಿಎಂ ಯಡಿಯೂರಪ್ಪ ಪ್ರತಿಮೆಗೆ ತಲಾ 25 ಕೋಟಿ ಮಂಜೂರು ಮಾಡಿದ್ದು, ಕಾಮಗಾರಿ ನಡೆಯುತ್ತಿದೆ.

ಜ್ಞಾನ ಭಾರತಿ ಆವರಣದಲ್ಲಿರುವ ಕಲಾಗ್ರಾಮದಲ್ಲಿ 30 ಅಡಿ ಎತ್ತರದ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪಿಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮುಂದಾಗಿದೆ. ಇದು ಭಾಷಾ ಭಾವನೆಯ ಮೇಲೆ ಮತದಾರರನ್ನು ಸೆಳೆಯುವ ಪ್ರಯತ್ನ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com