ಬಿಜೆಪಿಯಲ್ಲಿ ಎಷ್ಟು ರಾಮಭಕ್ತರು ರಾಮಾಯಣ ಓದಿದ್ದಾರೆ? ಶೇ.80 ರಷ್ಟು ಭಾರತೀಯರು ಮಾಂಸಹಾರಿಗಳು: 'ಕೋಳಿ' ಜಗಳಕ್ಕೆ ಕಾಂಗ್ರೆಸ್ ಕಿಡಿ

ದೇವಸ್ಥಾನಕ್ಕೆ ತೆರಳುವ ಮುನ್ನ ಕೋಳಿ ಮಾಂಸ ಸೇವಿಸಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಟ್ಸ್‌ಆ್ಯಪ್ ಸಂದೇಶಗಳು ಹರಿದಾಡುತ್ತಿದ್ದು, ಮಾಜಿ ಸಂಸದ ವಿಎಸ್ ಉಗ್ರಪ್ಪ ಮತ್ತು ಮಾಜಿ ಸಚಿವ ಎಚ್‌ಎಂ ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.
ಎಚ್. ಎಂ ರೇವಣ್ಣ ಮತ್ತು ಉಗ್ರಪ್ಪ
ಎಚ್. ಎಂ ರೇವಣ್ಣ ಮತ್ತು ಉಗ್ರಪ್ಪ

ಬೆಂಗಳೂರು: ದೇವಸ್ಥಾನಕ್ಕೆ ತೆರಳುವ ಮುನ್ನ ಕೋಳಿ ಮಾಂಸ ಸೇವಿಸಿದ ಆರೋಪದ ಮೇಲೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಟ್ಸ್‌ಆ್ಯಪ್ ಸಂದೇಶಗಳು ಹರಿದಾಡುತ್ತಿದ್ದು, ಮಂಗಳವಾರ ಮಾಜಿ ಸಂಸದ ವಿಎಸ್ ಉಗ್ರಪ್ಪ ಮತ್ತು ಮಾಜಿ ಸಚಿವ ಎಚ್‌ಎಂ ರೇವಣ್ಣ ಸಮರ್ಥಿಸಿಕೊಂಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ. ನಮ್ಮ ದೇಶದಲ್ಲಿ ಶೇ.80 ರಷ್ಟು ಮಂದಿ ಮಾಂಸಾಹಾರಿಗಳು ಇದ್ದಾರೆ. ಹಿಂದಿನಿಂದಲೂ ಅನೇಕ ದೇವಾಲಯಗಳಲ್ಲಿ ಮಾಂಸವನ್ನು ನೈವೇದ್ಯ ಮಾಡಿ ಪೂಜೆ ಮಾಡಿಕೊಂಡು ಬರುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್.ಎಂ.ರೇವಣ್ಣ ಹೇಳಿದ್ದಾರೆ.

ಪಾಂಡವಪುರದ ಆಲತಿಹುತ್ತ ದೇವಾಲಯ, ದಿಲ್ಲಿ ಸಮೀಪದ ಭೈರವೇಶ್ವರ ದೇವಾಲಯದಲ್ಲಿ ಬ್ರಾಂದಿ ಹಾಗೂ ಮಾಂಸ ನೈವೇದ್ಯ ಮಾಡುತ್ತಾರೆ. ಕೇರಳದ ಕನ್ನೂರು ಜಿಲ್ಲೆಯ ಇರ್ಕೂರಿನ ದೇವಾಲಯವೊಂದರಲ್ಲಿ ಕೋಳಿ ಹಾಗೂ ಮದ್ಯವನ್ನು ಇಟ್ಟು ಪೂಜೆ ಮಾಡಿ ಪ್ರಸಾದವಾಗಿ ನೀಡುತ್ತಾರೆ ಎಂದರು.  ತಿರುಪತಿ ತಿಮ್ಮಪ್ಪನ ಒಕ್ಕಲಿನವರು ಶ್ರಾವಣ ಶನಿವಾರದಲ್ಲಿ ಮಾಂಸದ ನೈವೇದ್ಯ ನೀಡುತ್ತಾರೆ. ತುಮಕೂರಿನ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಮಾಂಸದ ನೈವೇದ್ಯ ನೀಡುತ್ತಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಅಘೋರಿಗಳು, ನಾಗಸಾಧುಗಳು, ಋಷಿಮುನಿಗಳ ಆಹಾರ ಪದ್ಧತಿ ಬೇರೆ ಬೇರೆ ಇದೆ. ಬಿಜೆಪಿಯ ಆಧುನಿಕ ರಾಮಭಕ್ತರು ಎಷ್ಟು ಜನ ರಾಮಾಯಣ ಓದಿದ್ದಾರೆ. ರಾಮ, ಲಕ್ಷ್ಮಣ, ಸೀತೆ ವನವಾಸಕ್ಕೆ ತೆರಳುವಾಗ ಸೀತೆಯು ಗಂಗಾ ಮಾತೆಗೆ ‘ತಾಯಿ ನೀನು 14 ವರ್ಷ ನಮ್ಮನ್ನು ರಕ್ಷಣೆ ಮಾಡು, ನಾವು ಹಿಂತಿರುಗಿದ ನಂತರ ನಿಮಗೆ ತೃಪ್ತಿಯಾಗುವಷ್ಟು ಮಾಂಸ ಹಾಗೂ ಮದ್ಯದ ನೈವೇದ್ಯ ನೀಡುತ್ತೇನೆ’ ಎಂದು ಹೇಳುತ್ತಾಳೆ ಎಂದು ಉಗ್ರಪ್ಪ ತಿಳಿಸಿದರು.

ಭಾರಧ್ವಜರ ಆಶ್ರಮಕ್ಕೆ ಹೋದಾಗ ಮಹರ್ಷಿ ಭಾರಧ್ವಜರು ಶ್ರೀರಾಮನಿಗೆ ‘ನೀನು ಕ್ಷತ್ರಿಯ. ನೀನು, ಲಕ್ಷ್ಮಣ ಹಾಗೂ ನಿನ್ನ ಮಡದಿ ಸೀತೆ ಮಾಂಸಾಹಾರಿಯಾಗಿದ್ದು, ನಿಮಗೆ ಮಾಂಸಾಹಾರ ವ್ಯವಸ್ಥೆ ಮಾಡುವುದಾಗಿ ಹೇಳುತ್ತಾರೆ’. ಶಿವನಿಗೆ ಬೇಡರ ಕಣ್ಣಪ್ಪ ಮಾಂಸದ ನೈವೇದ್ಯ ನೀಡುತ್ತಾರೆ ಎಂದು ಉಗ್ರಪ್ಪ ಕಿಡಿ ಕಾರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com