'ಕಮಿಷನ್ ದಂಧೆ ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಶುರುವಾಗಿದ್ದು, ಆಪರೇಷನ್ ಕಮಲದ ಕೂಸು': ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
Published: 26th August 2022 12:30 PM | Last Updated: 26th August 2022 01:49 PM | A+A A-

ಹೆಚ್ ಡಿ ಕುಮಾರಸ್ವಾಮಿ
ಮೈಸೂರು: 2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಮೇಲೆ ಆಪರೇಷನ್ ಕಮಲದ ಪ್ರಕ್ರಿಯೆಗಳು ಪ್ರಾರಂಭ ಮಾಡಿಕೊಂಡ ಮೇಲೆ ಹಣದ ಮೂಲಕ ಏನು ಬೇಕಾದರೂ ಸಾಧಿಸಬಹುದೆಂಬ ನಿರ್ಮಾಣವನ್ನು ಬಿಜೆಪಿ ನಾಯಕರು ಸೃಷ್ಟಿಸಿದರು. ಬಿಜೆಪಿ ಸರ್ಕಾರ ಬಂದ ಮೇಲೆ ರಾಜ್ಯ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಯಿತು ಎಂದು ಮಾಜಿ ಮುಖ್ಯಮಂತ್ರಿ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಬ್ರಿಟಿಷರ ಕಾಲದಿಂದಲೂ ಕಮಿಷನ್ ದಂಧೆ ಇದೆ. ಕಾಂಗ್ರೆಸ್ ಕರ್ನಾಟಕ ರಾಜ್ಯದಲ್ಲಿ 1983ರವರೆಗೆ ಆಳಿದ್ದಾರೆ, ನಂತರ 8 ವರ್ಷ ಜನತಾದಳ ಸರ್ಕಾರವಿತ್ತು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಕಮಿಷನ್ ದಂಧೆ ಇರಲಿಲ್ಲ ಎಂದು ಕೆಂಪಣ್ಣನವರು ಹೇಳಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಹೋಗಿ ಸಹಾಯ ಮಾಡುತ್ತಿದ್ದರು. ಆದರೆ ದೇವೇಗೌಡರು ಪರ್ಸೆಂಟೇಜ್ ಸಿಸ್ಟಮ್ ಇಟ್ಟಿರಲಿಲ್ಲ ಎಂಬ ಮಾತುಗಳನ್ನು ಹೇಳಿದ್ದಾರೆ. ಅದನ್ನು ನಾವು ಅಳವಡಿಸಿಕೊಂಡು ಬಂದಿದ್ದೇವೆ ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಕಮಿಷನ್ ಪದ್ದತಿ ಇರಲಿಲ್ಲ: ನಾನು ಎರಡು ಬಾರಿ ಈ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಯಾವುದೇ ದಾಖಲೆ ಪತ್ರಗಳಿಗೆ ಸಹಿ ಹಾಕಬೇಕಾದರೆ ಕಮಿಷನ್ ಕೊಟ್ಟು ಸಹಿ ಹಾಕಿಸಿಕೊಂಡು ಹೋಗಿ ಎಂದು ಹೇಳಿರಲಿಲ್ಲ.
ಇದನ್ನೂ ಓದಿ: ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಮೋದಿಗೂ ಇಲ್ಲ, ಕಮಿಷನ್ ಖಂಡಿಸಿ ಕಾಮಗಾರಿ ನಿಲ್ಲಿಸಿ: ಎಚ್ ಡಿಕೆ
ಬಿಜೆಪಿ ಸರ್ಕಾರ ಬಂದ ನಂತರ ಶಾಸಕರ ಮಟ್ಟದಲ್ಲಿ ಗುತ್ತಿಗೆದಾರರು ಹಣ ಕೊಡುವುದು, ಯಾರದೋ ಹೆಸರಿಗೆ ಗುತ್ತಿಗೆ ಪಡೆದುಕೊಂಡು ಹಣ ಮಾಡುವ ವ್ಯವಸ್ಥೆ ದಂಧೆ ಪ್ರಾರಂಭವಾಯಿತು. ಈ ರಾಜ್ಯದಲ್ಲಿರುವ ಹಲವಾರು ಬೆಟ್ಟ-ಗುಡ್ಡ ಕ್ವಾರಿಗಳನ್ನು ಶಾಸಕರುಗಳೇ ಲೈಸೆನ್ಸ್ ಪಡೆದು ಕ್ರಶರ್ ಹಾಕಿಕೊಳ್ಳುವುದು, ಅವರೇ ಕಂಟ್ರ್ಯಾಕ್ಟ್ ಪಡೆಯುವುದು, ಮರಳು ದಂಧೆ ಹೀಗೆ ನಿರಂತರವಾಗಿ ಸ್ವೇಚ್ಛಾಚಾರವಾಗಿ ಪ್ರಾರಂಭವಾಗಿದ್ದು ಈ ರಾಜ್ಯದಲ್ಲಿ ಬಿಜೆಪಿ ಆಡಳಿತ ಬಂದ ನಂತರ ಎಂದು ನೇರವಾಗಿ ಆರೋಪಿಸಿದರು.
ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಪರ್ಸೆಂಟೇಜ್: ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕೆಲವು ಇಲಾಖೆಗಳಲ್ಲಿ ಪರ್ಸೆಂಟೇಜ್ ತೆಗೆದುಕೊಂಡಿದ್ದಾರೆ. ಬೆಕ್ಕಿಗೆ ಗಂಟೆ ಕಟ್ಟುವವರು ಯಾರು, ಈ ವ್ಯವಸ್ಥೆಯನ್ನು ಸರಿಪಡಿಸುವವರು ಯಾರು? 40 ಪರ್ಸೆಂಟ್ ಗೆ ಕಮಿಷನ್ ಯಾಕೆ ಏರಿಕೆಯಾಯಿತು, ಆರು ತಿಂಗಳು ಸರ್ಕಾರದ ಟೆಂಡರ್ ಗಳಲ್ಲಿ ಭಾಗವಹಿಸದೆ ನಿರ್ಬಂಧ ಹೇರಿ, ಆಗ ಮಾತ್ರ ಕಮಿಷನ್ ದಂಧೆಗೆ ಕಡಿವಾಣ ಹಾಕಬಹುದು, ಸರ್ಕಾರದೊಳಗೆ ಈ ವ್ಯವಸ್ಥೆಯನ್ನು ಸರಿಪಡಿಸದಿದ್ದರೆ ರಾಜ್ಯದ ಜನತೆಗೆ ದ್ರೋಹ ಮಾಡಿದಂತೆ. ಗುತ್ತಿಗೆದಾರರಿಗೂ ಸಮಸ್ಯೆಯಾಗುತ್ತದೆ ಎಂದು ಹೆಚ್ ಡಿ ಕುಮಾರಸ್ವಾಮಿ ಗುತ್ತಿಗೆ ಕಾಮಗಾರಿಯೊಳಗಿನ ಹಲವು ಕರಾಳ ಸತ್ಯಗಳನ್ನು ಬಿಚ್ಚಿಡುವ ಪ್ರಯತ್ನ ಮಾಡಿದರು.
ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಟರಿ ನಿಷೇಧ ಮಾಡಬಾರದೆಂದು ಬಹಳ ಒತ್ತಡ ಹಾಕಿದರು, ಕೋಟಿಗಟ್ಟಲೆ ಆಫರ್ ನೊಂದಿಗೆ ಬಂದರು. ಆಪರೇಷನ್ ಕಮಲದ ಹಿಂದೆ ಪರ್ಸೆಂಟೇಜ್ ವ್ಯವಹಾರದ ವಾಸನೆಯಿದೆ. ರಾಜ್ಯದ ಚುನಾವಣೆ, ಅಕ್ಕಪಕ್ಕದ ರಾಜ್ಯದ ಚುನಾವಣೆ, ದೆಹಲಿಯಿಂದ ಬಂದ ನಾಯಕರನ್ನು ಓಲೈಸಲು ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರು ಈ ರೀತಿಯ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ನೇರವಾಗಿ ಆಪಾದಿಸಿದರು.