ಕಾಂಗ್ರೆಸ್ ನಿಂದ ನಿರ್ಗಮನದ ವದಂತಿ: ಮುನಿಯಪ್ಪ ಭೇಟಿ ಮಾಡಿದ ಸುರ್ಜೆವಾಲಾ

ಕಾಂಗ್ರೆಸ್ ಗುಡ್ ಬೈ ಹೇಳುವ ವದಂತಿ ಬೆನ್ನಲ್ಲೇ ಇಂದು ಕರ್ನಾಟಕ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಹಿರಿಯ ನಾಯಕ ಕೆಎಚ್ ಮುನಿಯಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಮುನಿಯಪ್ಪ ಮತ್ತು ಸುರ್ಜೇವಾಲಾ
ಮುನಿಯಪ್ಪ ಮತ್ತು ಸುರ್ಜೇವಾಲಾ

ಬೆಂಗಳೂರು: ಕಾಂಗ್ರೆಸ್ ಗುಡ್ ಬೈ ಹೇಳುವ ವದಂತಿ ಬೆನ್ನಲ್ಲೇ ಇಂದು ಕರ್ನಾಟಕ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಪಕ್ಷದ ಹಿರಿಯ ನಾಯಕ ಕೆಎಚ್ ಮುನಿಯಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಇಂದು ಕೇಂದ್ರದ ಮಾಜಿ ಸಚಿವ ಕೆ ಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಬಿಬಿಎಂಪಿ ಚುನಾವಣಾ ಪ್ರಣಾಳಿಕೆ ಸಭೆಯ ಬಳಿಕ ಸುರ್ಜೇವಾಲಾ ನೇರವಾಗಿ ಸಂಜಯ್ ನಗರದಲ್ಲಿರುವ ಮುನಿಯಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದರು.

ಸಂಜೆ 4:30ರ ವೇಳೆಗೆ ಮುನಿಯಪ್ಪ ಮನೆಗೆ ತೆರಳಿ ಅವರ ಜೊತೆ ಸುರ್ಜೇವಾಲಾ ಸುದೀರ್ಘ ಸಮಾಲೋಚನೆ ನಡೆಸಿದರು. ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ಪರಿಗಣಿಸುತ್ತಿಲ್ಲ. ರಾಜ್ಯ ನಾಯಕರದ ಡಿ ಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ತಮ್ಮನ್ನು ವಿಶ್ವಾಸಕ್ಕೆ ಪಡೆಯದೆ ಕೋಲಾರ ಜಿಲ್ಲೆಯ ಮುಖಂಡರನ್ನು ಕಾಂಗ್ರೆಸ್​​ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಎಂ ಸಿ ಸುಧಾಕರ್ ಹಾಗೂ ಕೊತ್ತೂರು ಮಂಜುನಾಥ್ ಸೇರ್ಪಡೆಗೆ ತಮ್ಮನ್ನು ಪರಿಗಣಿಸಲೇ ಇಲ್ಲ ಎಂದು ಮುನಿಯಪ್ಪ ಮುನಿಸಿಕೊಂಡು ಪಕ್ಷದ ಚಟುವಟಿಕೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಇವರ ಮುನಿಸು ಕಡಿಮೆಗೊಳಿಸುವ ಉದ್ದೇಶದಿಂದ ಸುರ್ಜೇವಾಲಾ ಭೇಟಿ ನೀಡಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಮುಜುಗರ ತಪ್ಪಿಸಲು ದಿಢೀರ್ ಭೇಟಿ
ಇನ್ನು ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ 'ಭಾರತ್ ಜೋಡೋ ಯಾತ್ರೆ' ಪ್ರಾರಂಭಿಸಲು ಕಾಂಗ್ರೆಸ್ ಯೋಜಿಸಿದೆ. 148 ದಿನಗಳ ಪಾದಯಾತ್ರೆ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಐದು ತಿಂಗಳ ಯಾತ್ರೆಯು 3,500 ಕಿಲೋಮೀಟರ್ ಮತ್ತು 12 ಕ್ಕೂ ಹೆಚ್ಚು ರಾಜ್ಯಗಳನ್ನು ಕ್ರಮಿಸಲು ನಿರ್ಧರಿಸಲಾಗಿದೆ. ಪಾದಯಾತ್ರೆ (ಮೆರವಣಿಗೆ) ಪ್ರತಿದಿನ 25 ಕಿ.ಮೀ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಯಾತ್ರೆಯು ಪಾದಯಾತ್ರೆಗಳು, ರ್ಯಾಲಿಗಳು ಮತ್ತು ಸಾರ್ವಜನಿಕ ಸಭೆಗಳನ್ನು ಒಳಗೊಂಡಿರುತ್ತದೆ.

ಇದರಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಹಿರಿಯ ಕಾಂಗ್ರೆಸ್ ನಾಯಕರು ಭಾಗವಹಿಸಲಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ಮುನಿಸಿಕೊಂಡಿರುವ ಮುನಿಯಪ್ಪ ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ನಡೆಸುವ ಸಂದರ್ಭದಲ್ಲಿ ಬಿಜೆಪಿಗೆ ಸೇರ್ಪಡೆಯಾದರೆ ದೊಡ್ಡಮಟ್ಟದ ಅವಮಾನವನ್ನು ಎದುರಿಸಬೇಕಾಗುತ್ತದೆ. ಈ ರೀತಿ ಎದುರಾಗಬಹುದಾದ ಮುಜುಗರವನ್ನು ತಪ್ಪಿಸಿಕೊಳ್ಳುವ ಸಲುವಾಗಿ ಸುರ್ಜೆವಾಲಾ ಮುಂಚಿತವಾಗಿಯೇ ಮುನಿಯಪ್ಪ ಅವರನ್ನು ಭೇಟಿಯಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ.

ಮುನಿಯಪ್ಪ ಟ್ರಬಲ್​​ಗೆ ಟ್ರಬಲ್ ಕೊಡುವಂತ ನಾಯಕ
ಇನ್ನು ಭೇಟಿ ಬಳಿಕ ಮಾತನಾಡಿದ ಸುರ್ಜೆವಾಲಾ, ಮುನಿಯಪ್ಪ ಅವರು ನನ್ನ ಹಿರಿಯ ಸಹೋದರ ಇದ್ದಂತೆ. ಅವರ ಮನೆ ನೋಡಬೇಕು ಅಂತ ಆಸೆಪಟ್ಟಿದ್ದೆ. ಆ ಪ್ರಕಾರ ಬಂದು ಮನೆ ನೋಡಿದ್ದೇನೆ. ಹಾಗೆ ಸಹಜವಾಗಿ ಮಾತುಕತೆ ನಡೆಸಿದ್ದೇವೆ. ಮುನಿಯಪ್ಪಗೆ ಯಾವುದೇ ಟ್ರಬಲ್ ಇಲ್ಲ. ಅವರು ಟ್ರಬಲ್​​ಗೆ ಟ್ರಬಲ್ ಕೊಡುವಂತ ನಾಯಕ. ಎಐಸಿಸಿ ಸೂಚನೆ ಪ್ರಕಾರ ನಾನು ಇಲ್ಲಿ ಬಂದಿಲ್ಲ. ಅವರ ಕುಟುಂಬ ಸದಸ್ಯನಾಗಿ ಬಂದಿದ್ದೇನೆ ಅಷ್ಟೇ. ನನ್ನ ತಂದೆಯ ಕಾಲದಿಂದಲೂ ಅವರು ನನಗೆ ಮಾರ್ಗದರ್ಶನ ಮಾಡುತ್ತಾ ಬಂದಿದ್ದಾರೆ. ಭಾರತ್ ಜೋಡೋ ಯಾತ್ರೆಗೆ ಸಂಬಂಧಿಸಿ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಪಕ್ಷ ಸಂಘಟನೆ ಕುರಿತು ಚರ್ಚೆ
ಬಳಿಕ ಮಾತನಾಡಿದ ಮುನಿಯಪ್ಪ, ಕುಟುಂಬ ಸದಸ್ಯರಾಗಿ ಸುರ್ಜೆವಾಲಾ ಅವರು ಇಲ್ಲಿ ಬಂದಿದ್ದರು. ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಿ ಅವರು ಇಲ್ಲಿಗೆ ಬಂದಿಲ್ಲ. ಪಕ್ಷ ಸಂಘಟನೆ ಕುರಿತಂತೆ ಕೆಲವೊಂದು ಚರ್ಚೆ ಮಾಡಿದ್ದೇವೆ. ಇದು ಹೊಸದೇನಲ್ಲ, ಅವರ ನನ್ನ ವಿಶ್ವಾಸ ಅವರ ತಂದೆಯ ಕಾಲದಿಂದಲೂ ಇದೆ. ನನ್ನ ಎಲ್ಲ ವಿಚಾರಗಳನ್ನು ಹೈಕಮಾಂಡ್​ಗೆ ನಾನು ತಿಳಿಸಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ಇದ್ದೇನೆ, ಇರ್ತೇನೆ. ಬೇರೆ ಯಾವುದೇ ಡಿಸ್ಕಷನ್ ಇಲ್ಲ. ಎಲ್ಲವೂ ಸಮಾಧಾನವಾಗಿ ನಡೆಯುತ್ತಿದೆ ಎಂದರು.

ಈ ಹಿಂದೆ ಅಂದರೆ ಆಗಸ್ಟ್ 26 ರಂದು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಆರೋಗ್ಯ ಸಚಿವ ಕೆ ಸುಧಾಕರ್ ಅವರನ್ನು ಭೇಟಿಯಾದ ನಂತರ ಮಾಜಿ ಕೇಂದ್ರ ಸಚಿವರು ಬಿಜೆಪಿಗೆ ಸೇರುತ್ತಾರೆ ಎಂಬ ಊಹಾಪೋಹಗಳು ಎದ್ದಿದ್ದವು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com