'ಅಸ್ಪೃಶ್ಯರ ಬಗ್ಗೆ ನಾನು ಮಾತನಾಡಿಲ್ಲ...'; ದಲಿತ ಸಿಎಂ ವಿಚಾರವಾಗಿ ಎಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ!

ಅವಕಾಶ ಸಿಕ್ಕದರೆ ಸರ್ಕಾರ ಅಧಿಕಾರ ಬಂದರೆ ದಲಿತರು ಯಾಕೆ ಸಿಎಂ ಆಗಬಾರದು. ಅಂತಹ ಸಮಯ ಬಂದ್ರೆ ನಾನೇ ಮಾಡ್ತೀನಿ, ಎಲ್ಲದಕ್ಕೂ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ತುಮಕೂರು: ಅವಕಾಶ ಸಿಕ್ಕದರೆ ಸರ್ಕಾರ ಅಧಿಕಾರ ಬಂದರೆ ದಲಿತರು ಯಾಕೆ ಸಿಎಂ ಆಗಬಾರದು. ಅಂತಹ ಸಮಯ ಬಂದ್ರೆ ನಾನೇ ಮಾಡ್ತೀನಿ, ಎಲ್ಲದಕ್ಕೂ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶವಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಹೇಳಿದ್ದಾರೆ.

‘ಪಂಚರತ್ನ ರಥಯಾತ್ರೆ’ ತುಮಕೂರು ನಗರಕ್ಕೆ ಪ್ರವೇಶಿಸಿದ್ದು, ಈ ಸಂದರ್ಭದಲ್ಲಿ ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಹೆಚ್‌ಡಿಕೆ ಅವರು, ಮುಂಬರುವ ಚುನಾವಣೆಯಲ್ಲಿ (Elections) 123 ಸ್ಥಾನಗಳಲ್ಲಿ ಜೆಡಿಎಸ್ ಗೆದ್ದರೆ ದಲಿತ ಸಿಎಂ (Dalit CM) ಮಾಡಲು ನಾವು ತಯಾರಿದ್ದೇವೆ. ಅದಕ್ಕೆ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶ ಇದೆ. ದಲಿತರ ಬಗ್ಗೆ ಅಭಿಮಾನ ಇಟ್ಕೊಂಡಿರೋ ಸಿದ್ದರಾಮಯ್ಯ ಏನ್ ಮಾತಾಡಿದ್ದಾರೆ ದಾಖಲೆ ಕೊಡ್ಲ? ಅಸ್ಪಶ್ಯರ ಬಗ್ಗೆ ಎಷ್ಟು ಕೀಳಾಗಿ ಮಾತಾಡಿದ್ದಾರೆ. ಮುಖ್ಯಮಂತ್ರಿ ಇದ್ದಾಗ ದಲಿತ ಕುಟುಂಬ ಮಹಿಳೆಯನ್ನ ಚಿಕಿತ್ಸೆ ಕೊಡಿಸಿ ನಮ್ಮ ಮನೆಯಲ್ಲೇ ಆರೈಕೆ ಮಾಡಿದ್ದೆವು. ಯಾವ್ ಮುಖ್ಯಮಂತ್ರಿ ಮಾಡಿದ್ದಾರೆ ಹೇಳ್ಲಿ ಎಂದು ಸಿದ್ದು ವಿರುದ್ಧ ಗುಡುಗಿದರು. 

123 ಬಂದ್ರೆ ದಲಿತ ಮುಖ್ಯಮಂತ್ರಿ ಯಾಕೆ ಆಗ್ಬಾರದು? ದಲಿತರನ್ನ ಮುಖ್ಯಮಂತ್ರಿ ಮಾಡಲು ನಾವು ತಯಾರಿದ್ದೇವೆ. ದೇವೆಗೌಡರು (HD Devegowda) ಮೀಸಲಾತಿ ಇಲ್ಲದೇ ಇದ್ದಾಗ ದಲಿತರನ್ನ ಮುಖಂಡರನ್ನಾಗಿ ಮಾಡಿದ್ದನ್ನ ನಾವು ಮರೆಯೋ ಹಾಗಿಲ್ಲ ಎಂದು ತಿಳಿಸಿದರು.

ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ?
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಮಾತನಾಡಿ, ಇದು ಬಿಟ್ಟರೆ ಕಾಂಗ್ರೆಸ್ ಬೇರೆ ಏನು ಇದೆ. ಕಳೆದ ಬಾರಿ ಹೇಳಿ ಹೇಳಿ 70 ಸ್ಥಾನಕ್ಕೆ ಬಂದ್ರು, ಬಿಜೆಪಿ 65 ಸ್ಥಾನಕ್ಕೆ ನಿಲ್ಲರೋರನ್ನ 105 ತೆಗೆದುಕೊಂಡು ಹೋದವರು ಇದೇ ಕಾಂಗ್ರೆಸ್ ನವರು. ಹಲವಾರು ಭಾಗ್ಯಗಳನ್ನ ಕೊಟ್ಟು ಯಾರು ಮಾಡ್ದೆ ಇರೋ ಸಾಧನೆ ಮಾಡಿದ್ದೇವೆ ಅಂತ ಹೇಳಿ. ಯಾಕೆ 78 ಸ್ಥಾನಕ್ಕೆ ಬಂದ್ರು.? ಈಗೀನ ಸರ್ಕಾರ ಬರೋಕೆ ಕಾರಣ ಯಾರು.? ನನ್ನಷ್ಟು ಶಾಸಕರಿಗೆ ಸಿಕ್ತಾ ಇದ್ದ ಮುಖ್ಯಮಂತ್ರಿ ಯಾರಿದ್ದರು ಎಂದು ಪ್ರಶ್ನಿಸಿದರು.

ಚುನಾವಣಾ ಅಭ್ಯರ್ಥಿಗಳ ಬದಲಾವಣೆ ವಿಚಾರವಾಗಿ ಮಾತನಾಡಿ, ಸದ್ಯಕ್ಕೆ ನಾನು ಘೋಷಣೆ ಮಾಡಿರುವ ಅಭ್ಯರ್ಥಿಗಳ ಬದಲಾವಣೆ ಇಲ್ಲ. ದೇವೇಗೌಡರು ಪ್ರತಿಯೊಂದು ಕ್ಷೇತ್ರದಲ್ಲಿ ಅಭ್ಯರ್ಥಿಗಳು ಅವರು ಮಾಡುವ ಕೆಲಸದ ಮೇಲೆ ತೀರ್ಮಾನ ಮಾಡ್ತಾರೆ. ಜನರ ವಿಶ್ವಾಸ ಗಳಿಸಿದ್ದಾರೆ ಅವರನ್ನ ಘೋಷಣೆ ಮಾಡಿದ್ದೇನೆ. 14 ಕ್ಷೇತ್ರದಲ್ಲಿ 13 ಸ್ಥಾನಗಳಿಗೆ ಘೋಷಣೆ ಮಾಡಿದ್ದೇನೆ, ಘೋಷಣೆ ಮಾಡಿರುವ ಅಭ್ಯರ್ಥಿಗಳು ಜನತೆಯ ಅಲೆ‌ ನೋಡಿ ಮೈ ಮರೆತರೇ ಬದಲಾವಣೆ ಆಗಬಹುದು, ಆ ದೃಷ್ಟಿಯಿಂದ ದೇವೇಗೌಡರು ಹೇಳಿದ್ದಾರೆ. ಅಭ್ಯರ್ಥಿಗಳನ್ನ ಘೋಷಣೆ ಮಾಡಿದ್ರು ಬದಲಾವಣೆ ಆಗಬಹುದು. ಅಭ್ಯರ್ಥಿಗಳಿಗೆ ನಾನು ಸ್ಪಷ್ಟವಾಗಿ ಹೇಳಿದ್ದೇನೆ. ಚುನಾವಣೆಯಲ್ಲಿ ನಾನು ಜನರ ವಿಶ್ವಾಸದಿಂದ ಗೆಲ್ಲಬೇಕು, ಕುತಂತ್ರದಿಂದ ಗೆಲ್ಲುವ ಅವಶ್ಯಕತೆ ಇಲ್ಲ. ಜನತ ವಿಶ್ವಾಸ ಗಳಿಸಿ,ಅವರ‌ ಕಷ್ಟ ದುಃಖದಲ್ಲಿ ಭಾಗಿಯಾಗಬೇಕು. ಕಾರ್ಯಕರ್ತರ ಜೊತೆ ವಿಶ್ವಾಸ ತೆಗೆದುಕೊಳ್ಳುವುದು ಮುಖ್ಯ ಎಂದರು.

ಜಮೀರ್ ಹಾಗೂ ಜಯಚಂದ್ರ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿ, ಆ ರೀತಿಯ ಚರ್ಚೆ ನನ್ನ ಮುಂದೆ ಇಲ್ಲ. ಕಾಂಗ್ರೆಸ್ ನಲ್ಲಿ ಅರ್ಜಿ ಹಾಕಿಕೊಂಡಿದ್ದಾರೆ, ಜಯಚಂದ್ರ ಅಲ್ಲಿ ಹಿರಿಯ ನಾಯಕರು, ಅಲ್ಲಿನ ಪರಿಸ್ಥಿತಿ ಬಗ್ಗೆ ಅವರಿಗೆ ಚನ್ನಾಗಿ ಗೊತ್ತಿದೆ ಎಂದರು.

ಸಿದ್ದರಾಮಯ್ಯ ಬಗ್ಗೆ ಲಘುವಾಗಿ ಮಾತನಾಡಲ್ಲ
ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ ಮಾತನಾಡಿ, ಸಿದ್ದರಾಮಯ್ಯ ಕ್ಷೇತ್ರ ಹುಡುಕಾಟ ಕುರಿತು ನಾನು ಲಘುವಾಗಿ ಮಾತಾಡಲ್ಲ. ಮುಖ್ಯಮಂತ್ರಿ ಆಗಿ, ಉಪಮುಖ್ಯಮಂತ್ರಿಯಾಗಿ ವರ್ಚಸ್ಸು ಇಟ್ಟುಕೊಂಡಿದ್ದಾರೆ ಎಂದರು. ಮುಂದಿನ ನಾಲ್ಕು ತಿಂಗಳು ಬಹಳ ಪ್ರಮುಖವಾದ ದಿನಗಳು ಅತ್ಯಂತ ಸೂಕ್ಷ್ಮ ವಾದ ದಿನಗಳು. ರಥಯಾತ್ರೆಗೆ ಜನರು ಮನೆ ಮನೆಯಿಂದ ತಾಯಂದಿರು, ಮಕ್ಕಳನ್ನ ಎತ್ತಿಕೊಂಡು ಬಂದು ಬೆಂಬಲ ಸೂಚನೆ ಕೊಡ್ತಾ ಇದ್ದಾರೆ, ಇದನ್ನ ಗಮನದಲ್ಲಿಟ್ಟುಕೊಂಡು ಮೈ ಮರೆತರೇ ಅದಕ್ಕೆ ಅಭ್ಯರ್ಥಿಗಳಿಗೆ ಎಚ್ಚರಿಕೆ ನೀಡಬೇಕು. 50,60 ಸ್ಥಾನ ಗುರಿ ಅಲ್ಲ. ಮನೆಯಲ್ಲಿ ಇದ್ದರು 50 ಸ್ಥಾನ ಗೆಲ್ಲುತ್ತೇವೆ. ನನಗೆ ಪಂಚರತ್ನ‌ ಯೋಜನೆಗಳ ಅನುಷ್ಠಾನಕ್ಕೆ ಸಂಪೂರ್ಣ ಬಹುಮತದ ಸರ್ಕಾರ ಬೇಕು ಎಂದರು.

ಗಡಿ ವಿವಾದ ಮುಗಿದ ಅಧ್ಯಾಯ
ಇದೇ ವೇಳೆ ಬೆಳಗಾವಿ ಗಡಿ ವಿವಾದದ ಕುರಿತು ಮಾತನಾಡಿದ ಅವರು, 'ಗಡಿ ವಿವಾದ ಮುಗಿದು ಹೋಗಿರುವ ಅಧ್ಯಾಯ. ರಾಜಕೀಯ ಉದ್ದೇಶಕ್ಕಾಗಿ ಹುನ್ನಾರ ಮಾಡುತ್ತಿದ್ದಾರೆ. ಮಹಾಜನ್ ವರದಿ ನೀಡಿದ ಮೇಲೆ ತಮಿಳುನಾಡು, ಕೇರಳ ಗಡಿ ಭಾಗದಲ್ಲೂ ಸಮಸ್ಯೆಗಳನ್ನ ಹೇಳ್ತಾರೆ. ಇದನ್ನು ಪದೇ ಪದೇ ಯಾಕೆ ಕೆಣುಕುತ್ತಿದ್ದಾರೆ? ಅಭಿವೃದ್ಧಿ ವಿಚಾರವನ್ನು ಇಟ್ಟುಕೊಂಡು ಚುನಾವಣೆಗೆ ಹೋಗಲ್ಲ ಇವರು, ಈ ರೀತಿ ವಿಷಯಗಳನ್ನ ಇಟ್ಟುಕೊಂಡು ಸಮಾಜ ಹೊಡೆಯುವ ಹುನ್ನಾರ ಇದು. ಸರ್ಕಾರ ಇದನ್ನ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಬೇಕು. ನಮ್ಮ ನೆಲ, ಜಲ ಕಾಪಾಡುವ ಬಗ್ಗೆ ಎಲ್ಲರೂ ಯೋಚನೆ ಮಾಡಬೇಕು ಎಂದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com