ಸಂದೇಶ್ ನಾಗರಾಜ್
ಸಂದೇಶ್ ನಾಗರಾಜ್

ಮೋಸ ಮಾಡುವಲ್ಲಿ ಬಿಜೆಪಿಗರು ನಿಸ್ಸೀಮರು, ಸಾಕಪ್ಪ ಸಾಕು ಅವರ ಸಹವಾಸ: 'ಕೈ' ಹಿಡಿಯಲು ಮುಂದಾದ ಸಂದೇಶ್ ನಾಗರಾಜ್

ನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ. ಬಿಜೆಪಿವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು. ಮೋಸ ಮಾಡುವುದರಲ್ಲಿ ಬಿಜೆಪಿ ಅವರು ನಂಬರ್ ಓನ್.

ಮೈಸೂರು: ವಿಧಾನಸಭೆ ಚುನಾವಣೆಗೆ ಸಿದ್ದತೆಗಳು ಆರಂಭಗೊಂಡಂತೆ ಪಕ್ಷಾಂತರ ಚಟುವಟಿಕೆಗಳು ಕೂಡಾ ಬಿರುಸು ಪಡೆದಿದೆ. ಮೈಸೂರು ಭಾಗದಲ್ಲಿ ಬಿಜೆಪಿ ಮತ್ತೊಂದು ವಿಕೆಟ್ ಪತನವಾಗಿದ್ದು, ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅವರು ಕಾಂಗ್ರೆಸ್ ಸೇರಲು ಸಿದ್ದರಾಗಿದ್ದಾರೆ. ಅಲ್ಲದೆ ಬಿಜೆಪಿಯಿಂದ 10ಕ್ಕಿಂತ ಹೆಚ್ಚು ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಂದೇಶ್ ನಾಗರಾಜ್, ನಾನು ಬಿಜೆಪಿಯಲ್ಲಿ ಸಕ್ರಿಯನಾಗಿಲ್ಲ, ಅಕ್ರಮವಾಗಿದ್ದೇನೆ. ಬಿಜೆಪಿವರು ನನ್ನನ್ನು ಪಕ್ಷಕ್ಕೆ ಸೇರಿಸಿಕೊಂಡು ಅನ್ಯಾಯ ಮಾಡಿದರು. ಅನ್ಯಾಯ ಮಾಡುವುದರಲ್ಲಿ ಬಿಜೆಪಿ ಅವರು ನಿಸ್ಸೀಮರು. ಮೋಸ ಮಾಡುವುದರಲ್ಲಿ ಬಿಜೆಪಿ ಅವರು ನಂಬರ್ ಓನ್ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ಸಹವಾಸ ನನಗೆ ಸಾಕು, ಎಚ್.ವಿಶ್ವನಾಥ್ ಗೆ ಅನ್ಯಾಯ ಮಾಡಿದರು. ನನಗೂ ಅನ್ಯಾಯ ಮಾಡಿದರು. ನಾನು ಸಿದ್ದರಾಮಯ್ಯ ಅವರ ಜೊತೆ ಮಾತನಾಡಿದ್ದೇನೆ. ಡಿಕೆ ಶಿವಕುಮಾರ್ ಅವರ ಜೊತೆಯೂ ಮಾತಾಡುತ್ತೇನೆ ಎಂದರು.

ನಾನು ಜೆಡಿಎಸ್ ಎಂಎಲ್ ಸಿಯಾಗಿದ್ದರೂ 2 ವರ್ಷ ಬಿಜೆಪಿಗೆ ಸಹಾಯ ಮಾಡಿದ್ದೆ,  ಆದರೆ ನಾನು ಜೆಡಿಎಸ್ ತೊರೆದ ಮೇಲೆ ನನಗೆ ಯಾವುದೇ ಹುದ್ದೆ ನೀಡದೇ ಅನ್ಯಾಯ ಮಾಡಿದ್ದಾರೆ. ಹೀಗಾಗಿ ನಾನು ಬಿಜೆಪಿ ಸೇರುವುದಿಲ್ಲ, ಈ ಬಾರಿ ಚುನಾವಣೆಯಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ಸಂದೇಶ್ ನಾಗರಾಜ್ ಭವಿಷ್ಯ ನುಡಿದಿದ್ದಾರೆ.

ಬಿಜೆಪಿ ನಾಯಕರು ಯಡಿಯೂರಪ್ಪನನ್ನು ಒಳ್ಳೆತನದಲ್ಲಿ ಮುಗಿಸಿದರು. ಆ ವೇಳೆ ಬಿಜೆಪಿಗೆ 40 ಸ್ಥಾನ ನಷ್ಟವಾಯ್ತು. ಈಗ ವಿಜಯೇಂದ್ರನನ್ನು ವರುಣಕ್ಕೆ ತರುವ ಮೂಲಕ ಅವರನ್ನು ಮುಗಿಸಲು ಹೊರಟ್ಟಿದ್ದಾರೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಪ್ಲಾನ್ ಬಿಜೆಪಿಯದು. ವಿಜಯೇಂದ್ರನನ್ನು ಬಲಿ ಕೊಡಲು ವರುಣ ಕ್ಷೇತ್ರಕ್ಕೆ ಕರೆ ತರುತ್ತಿದ್ದಾರೆ. ವಿಜಯೇಂದ್ರಗೆ ರಾಜಕೀಯ ಭವಿಷ್ಯ ಚೆನ್ನಾಗಿ ಇರಬೇಕಾದರೆ ಶಿಕಾರಿಪುರದಲ್ಲೇ ಸ್ಪರ್ಧೆ ಮಾಡಲಿ ಎಂದು ಸಂದೇಶ್ ನಾಗರಾಜ್ ಹೇಳಿದರು.

Related Stories

No stories found.

Advertisement

X
Kannada Prabha
www.kannadaprabha.com