ಇಡಿ, ಸಿಬಿಐ ತಮ್ಮ ಕಚೇರಿಗಳನ್ನು ಡಿಕೆಶಿ ಮನೆಯಲ್ಲಿಯೇ ತೆರೆದರೆ ಉತ್ತಮ: ಕಾಂಗ್ರೆಸ್

ಡಿ.ಕೆ.ಶಿವಕುಮಾರ್ ಮನೆ ಮೇಲೆ ಪದೇ ಪದೇ ದಾಳಿ ನಡೆಸುವ ಬದಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಕಚೇರಿಗಳನ್ನು ಅವರ ಮನೆಯಲ್ಲಿಯೇ ತೆರೆದರೆ ಉತ್ತಮವಾಗಿರುತ್ತದೆ ಎಂದು ಕಾಂಗ್ರೆಸ್ ಮಂಗಳವಾ ವ್ಯಂಗ್ಯವಾಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಳಗಾವಿ: ಡಿ.ಕೆ.ಶಿವಕುಮಾರ್ ಮನೆ ಮೇಲೆ ಪದೇ ಪದೇ ದಾಳಿ ನಡೆಸುವ ಬದಲು ಜಾರಿ ನಿರ್ದೇಶನಾಲಯ (ಇಡಿ) ಮತ್ತು ಕೇಂದ್ರೀಯ ತನಿಖಾ ದಳ (ಸಿಬಿಐ) ತನ್ನ ಕಚೇರಿಗಳನ್ನು ಅವರ ಮನೆಯಲ್ಲಿಯೇ ತೆರೆದರೆ ಉತ್ತಮವಾಗಿರುತ್ತದೆ ಎಂದು ಕಾಂಗ್ರೆಸ್ ಮಂಗಳವಾ ವ್ಯಂಗ್ಯವಾಡಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಶಿವಕುಮಾರ್ ಒಡೆತನದ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ಸೋಮವಾರ ದಾಳಿ ನಡೆಸಿರುವುದನ್ನು ಖಂಡಿಸಿದರು. ತನಿಖಾ ಸಂಸ್ಥೆಗಳು ಹತ್ತಾರು ಬಾರಿ ದಾಳಿ ಮಾಡಿದರೂ ಏನನ್ನೂ ಹುಡುಕಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.

ಪದೇ ಪದೇ ದಾಳಿ ನಡೆಸುವ ಬದಲು ಇಡಿ ಹಾಗೂ ಸಿಬಿಐ ಡಿಕೆಶಿ ಮನೆಯಲ್ಲಿಯೇ ಕಚೇರಿ ತೆರೆದರೆ ಉತ್ತಮವಾಗಿರುತ್ತದೆ. ಇದರಿಂದ ಅಧಿಕಾರಿಗಳು ಅವರ ಮೇಲೆ ನಿಗಾ ಇಡಲು ಅನುಕೂಲವಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

ಬಿಜೆಪಿ ಸರಕಾರ ಹತಾಶೆಯಿಂದ ಮತ್ತು ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ರೀತಿ ಮಾಡುತ್ತಿದೆ. ಬಿಜೆಪಿಯ ಇಂತಹ ತಂತ್ರಗಳಿಗೆ ಕಾಂಗ್ರೆಸ್ ಹೆದರುವುದಿಲ್ಲ. ಶಿವಕುಮಾರ್ ಜೊತೆ ನಮ್ಮ ಪಕ್ಷ ಮತ್ತು ಕಾರ್ಯಕರ್ತರು ಇದ್ದಾರೆ ಎಂದು ತಿಳಿಸಿದರು.

ಸಿಎಂ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬಹಳ ಹಿಂದೆಯೇ ಪ್ರಜಾಸತ್ತಾತ್ಮಕ ರೀತಿಯಲ್ಲಿ ಜನರ ದೃಷ್ಟಿಯಲ್ಲಿ ಕೆಳಗೆ ಬಿದ್ದು ಹೋಗಿದೆ. ಅಧಿಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕಿಲ್ಲ ಎಂದರು.

ಸದ್ಯ ಬೊಮ್ಮಾಯಿ ಸರ್ಕಾರದ ‘ಶೇ 40 ಕಮಿಷನ್’ ವಿಚಾರ ಚರ್ಚೆಯಾಗಬೇಕಿದೆ. ಬಿಜೆಪಿ ಸರ್ಕಾರ ಕರ್ನಾಟಕದ ಜನರನ್ನು ಲೂಟಿ ಮಾಡುತ್ತಿದೆ. “ಕರ್ನಾಟಕದ ಜನರು ಈ ಸರ್ಕಾರವನ್ನು ಅಧಿಕಾರದಿಂದ ತೆಗೆದುಹಾಕಿದರೆ ಒಳ್ಳೆಯದು. ಮುಂದಿನ ಚುನಾವಣೆಯಲ್ಲಿ ಜನರು ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಡಿಕೆಶಿ ವಿರುದ್ಧದ ಕ್ರಮ ಸಮರ್ಥಿಸಿಕೊಂಡ ಬಿಜೆಪಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ಇಡಿ ಹಾಗೂ ಸಿಬಿಐ ಕೈಗೊಂಡಿರುವ ಕ್ರಮವನ್ನು ರಾಜ್ಯ ಬಿಜೆಪಿ ಸಮರ್ಥಿಸಿಕೊಂಡಿದೆ.

ಸಾಂವಿಧಾನಿಕವಾಗಿ ರಚಿಸಲಾದ ಸಿಬಿಐ ಮುಂದೆ ಪ್ರಕರಣ ಬಾಕಿ ಉಳಿದಿದ್ದು, ಸೂಕ್ತ ಕ್ರಮ ಕೈಗೊಳ್ಳಲಿದೆ. ಶಿವಕುಮಾರ್ ಅವರಿಗೆ ಇದರ ಅರಿವಿದೆ ಎಂದು ಹೇಳಿದ್ದಾರೆ.

ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಸಾರಿಗೆ ಸಚಿವ ಬಿ ಶ್ರೀರಾಮುಲು ಅವರು ಮಾತನಾಡಿ, ಸಿಬಿಐ ಹಾಗೂ ಇಡಿ ಇದೀಗ ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ನಡೆಸುತ್ತಿದ್ದಾಗ ಈ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿತ್ತು ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com