ಆಡಳಿತ ವೈಫಲ್ಯ ಮುಚ್ಚಿಕೊಳ್ಳಲು ಸದನದಲ್ಲಿ ಬಿಜೆಪಿ ಗೂಂಡಾಗಿರಿ: ಶಾಸಕ ರಂಗನಾಥ್
ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಧರಣಿಯ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಗೆ ಜೋರಾಗಿ ಗದರಿದ ವರ್ತನೆ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು.
Published: 23rd December 2022 02:01 PM | Last Updated: 23rd December 2022 02:31 PM | A+A A-

ಶಾಸಕ ರಂಗನಾಥ್
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರ ಧರಣಿಯ ಸಂದರ್ಭದಲ್ಲಿ ಸಚಿವ ಗೋವಿಂದ ಕಾರಜೋಳ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಗೆ ಜೋರಾಗಿ ಗದರಿದ ವರ್ತನೆ ವಿಧಾನಸಭೆಯಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ಈ ಘಟನೆ ಬಗ್ಗೆ ಶಾಸಕ ರಂಗನಾಥ್ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಈ ಸಂಬಂಧ ಮಾತನಾಡಿರುವ ಶಾಸಕ ರಂಗನಾಥ್ ಸದನದ ಘನತೆ ಕಾಪಾಡಿ ಬಿಜೆಪಿ ತನ್ನ ಗೂಂಡಾಗಿರಿ ನಿಲ್ಲಿಸಬೇಕು ಎಂದು ಹೇಳಿದ್ದಾರೆ . ಬುಧವಾರ ನಡೆದ ಘಟನೆ ಬಗ್ಗೆ ವಿವರಿಸಿದ ರಂಗನಾಥ್, ಪ್ರಶ್ನೋತ್ತರ ಅವಧಿಯಲ್ಲಿ ಗ್ರಾಮೀಣ ಭಾಗದಲ್ಲಿ ಬಸ್ ಗಳ ಕೊರತೆ ವಿಚಾರವಾಗಿ ಶಾಸಕ ಸಿದ್ದು ಸವದಿ ಪ್ರಸ್ತಾಪ ಮಾಡಿದರು.
ಇದಕ್ಕೆ ಇತರ ಸದಸ್ಯರು ಕೂಡಾ ಧ್ವನಿಗೂಡಿಸಿ ತಮ್ಮ ಕ್ಷೇತ್ರದ ಸಮಸ್ಯೆಗಳನ್ನು ಹೇಳಿಕೊಂಡರು. ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ನೀಡಿದ ಉತ್ತರಕ್ಕೆ ತೃಪ್ತಿಯಾಗದ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ಮಾಡಿದರು. ಬಳಿಕ ಸಮಸ್ಯೆ ಬಗೆಹರಿಸುವ ಭರವಸೆಯನ್ನು ಶ್ರೀರಾಮುಲು ನೀಡಿದ ಬಳಿಕ ಪ್ರತಿಭಟನಾನಿರತರು ಬಾವಿಯಿಂದ ವಾಪಸ್ ಆದರು. ಆದರೆ ಕಾಂಗ್ರೆಸ್ ಸದಸ್ಯ ಕುಣಿಗಲ್ ರಂಗನಾಥ್ ಬಾವಿಯಲ್ಲಿ ಇದ್ದು ಏಕಾಂಗಿಯಾಗಿ ಪ್ರತಿಭಟನೆ ಮುಂದುವರಿಸಿದರು.
'ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಬಸ್ ಸಂಪರ್ಕದ ಸಮಸ್ಯೆಯನ್ನು ಮಾತ್ರ ನಾನು ಪ್ರಸ್ತಾಪಿಸುತ್ತಿದ್ದೆ ಏಕೆಂದರೆ ಅದು ಹೆಚ್ಚಾಗಿ ಗ್ರಾಮೀಣ ಪ್ರದೇಶವಾಗಿರುವ ನನ್ನ ಕ್ಷೇತ್ರದಲ್ಲಿ ಜ್ವಲಂತ ಸಮಸ್ಯೆಯಾಗಿದೆ. ಇಲ್ಲಿನ ಬಹುತೇಕ ಜನರು ಶಿಕ್ಷಣಕ್ಕಾಗಿ ನಗರ ಪ್ರದೇಶಗಳಿಗೆ ಹೋಗುತ್ತಾರೆ. ಅಸಭ್ಯವಾಗಿ ವರ್ತಿಸುವ ಅಗತ್ಯ ಏನಿತ್ತು ಎಂದು ರಂಗನಾಥ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸದನದಿಂದ ಹೊರ ನಡೆದ ಮಾಧುಸ್ವಾಮಿ, ಸ್ಪೀಕರ್ ತೀವ್ರ ಅಸಮಾಧಾನ
ಕೋವಿಡ್ ಸಮಸ್ಯೆಯಿಂದಾಗಿ ಸ್ಥಗಿತಗೊಂಡಿದ್ದ ಬಸ್ ಸೇವೆ ಇನ್ನೂ ಪೂರ್ಣ ಮಟ್ಟದಲ್ಲಿ ಪುನಾರಂಭಗೊಂಡಿಲ್ಲ, ನನ್ನ ಕ್ಷೇತ್ರದಲ್ಲಿ ಸುಮಾರು 10 ಸಾವಿರ ವಿದ್ಯಾರ್ಥಿಗಳಿದ್ದಾರೆ, ಅದರಲ್ಲಿ 3ಸಾವಿರ ವಿದ್ಯಾರ್ಥಿಗಳು ಬಸ್ ಅವಲಂಬಿಸಿದ್ದಾರೆ, ಇವರಿಗೆ ಪ್ರತಿನಿತ್ಯ ಬಸ್ ಬೇಕಾಗಬೇಕಾಗಿದೆ. ಅವರಿಗಾಗಿ ನಾನು ಬೇಡಿಕೆ ಇಡುವುದು ತಪ್ಪೆ.
ಈ ಕುರಿತು ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಅಸಹಾಯಕತೆ ತೋರಿದ್ದಾರೆ ಎಂದು ಶಾಸಕರು ತಿಳಿಸಿದರು. "ಈ ಸಮಸ್ಯೆಯು ಕುಣಿಗಲ್ ಕ್ಷೇತ್ರಕ್ಕೆ ಮಾತ್ರ ನಿರ್ದಿಷ್ಟವಾಗಿಲ್ಲ, ಆದರೆ ಬೆಂಗಳೂರಿನ ಸುತ್ತಮುತ್ತಲಿನ ಅನೇಕ ಕ್ಷೇತ್ರಗಳು ಮತ್ತು ಸಾರ್ವಜನಿಕ ಸಾರಿಗೆಯ ಅವಲಂಬಿಸಿರುವ ಎಲ್ಲಾ ವಿದ್ಯಾರ್ಥಿಗಳ ಸಮಸ್ಯೆಯಾಗಿದೆ.
ಸಾರಿಗೆ ಸಚಿವ ಶ್ರೀರಾಮುಲು ಅವರು ತಮ್ಮ ಇಲಾಖೆಯನ್ನು ಸಮರ್ಥವಾಗಿ ನಿರ್ವಹಿಸದ ಕಾರಣ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು. ಆಡಳಿತ ವೈಫಲ್ಯವನ್ನು ಒಪ್ಪಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿಲ್ಲ, ಹೀಗಾಗಿಯೇ ಆಡಳಿತ ಪಕ್ಷದ ಶಾಸಕರು ಆಕ್ರೋಶದಿಂದ ವರ್ತಿಸುತ್ತಿದ್ದಾರೆ ಎಂದು ರಂಗನಾಥ್ ಆರೋಪಿಸಿದ್ದಾರೆ.