ಮಂಗಳೂರು ಸ್ಫೋಟ ಪ್ರಕರಣ: ವಿಧಾನಸಭೆಯಲ್ಲಿ ಸಿಟಿ ರವಿ-ಡಿಕೆ ಶಿವಕುಮಾರ್ ನಡುವೆ ಮಾತಿನ ಚಕಮಕಿ
ಮಂಗಳೂರನಲ್ಲಿ ಸಂಭವಿಸಿದ ಕುಕ್ಕಲ್ ಸ್ಫೋಟ ಪ್ರಕರಣವು ಮಂಗಳವಾರ ಸದನದಲ್ಲಿ ಪ್ರತಿಧ್ವನಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು.
Published: 28th December 2022 09:21 AM | Last Updated: 28th December 2022 09:21 AM | A+A A-

ಸಿಟಿ ರವಿ ಮತ್ತು ಡಿಕೆ. ಶಿವಕುಮಾರ್.
ಬೆಳಗಾವಿ: ಮಂಗಳೂರನಲ್ಲಿ ಸಂಭವಿಸಿದ ಕುಕ್ಕಲ್ ಸ್ಫೋಟ ಪ್ರಕರಣವು ಮಂಗಳವಾರ ಸದನದಲ್ಲಿ ಪ್ರತಿಧ್ವನಿಸಿದ್ದು, ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವೆ ಮಾತಿನ ಸಮರಕ್ಕೆ ಕಾರಣವಾಗಿತ್ತು.
ಮಂಗಳವಾರ ಸಾರ್ವಜನಿಕ ಮಹತ್ವದ ವಿಶಯದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿಟಿ ರವಿ ಅವರು ಮಂಗಳೂರು ಕುಕ್ಕಲ್ ಬಾಂಬ್ ಸ್ಫೋಟ ಪ್ರಕರಣವನ್ನು ಪ್ರಸ್ತಾಪಿಸಿದರು, ಘಟನೆ ಸಂಬಂಧ ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರು ನೀಡಿದ ಹೇಳಿಕೆಯನ್ನು ವಾಪಸ್ ಪಡೆದುಕೊಳ್ಳಬೇಕು ಮತ್ತು ಬೇಷರತ್ ಕ್ಷಮೆಯಾಚಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆರಸನ್ನು ಪ್ರಸ್ತಾಪಿಸದೆ ಒತ್ತಾಯಿಸಿದರು.
ತಮ್ಮದೇ ಪಕ್ಷದ ಇಬ್ಬರು ನಾಯರನ್ನು ಭಯೋತ್ಪಾದನೆಯಿಂದಾಗಿ ಕಳೆದುಕೊಂಡಿದ್ದಾರೆ. ಅವರನ್ನು ಗಮನದಲ್ಲಿಟ್ಟುಕೊಂಡು ಹೇಳಿಕೆ ನೀಡಬೇಕಾಯಿತು. ಕೇವಲ ಮತ ಬ್ಯಾಂಕ್ ಗಾಗಿ ಸಿಂಪತಿ ಪಡೆದುಕೊಳ್ಳಲು ಒಂದು ಸಮುದಾಯವನ್ನು ಓಲೈಕೆ ಮಾಡುವುದು ಸರಿಯಲ್ಲ. ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡಬೇಕು. ಪ್ರತಿಯೊಬ್ಬ ನಾಯಕರು ಭಯೋತ್ಪಾದಕರನ್ನು ವಿರುದ್ಧ ಶೂನ್ಯ ಸಹಿಷ್ಣುತೆ ತೋರಿದರೆ ಮಾತ್ರ ಭಯೋತ್ಪಾದನೆ ಹರಡುವಿಕೆಗೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ಡಿಕೆ.ಶಿವಕುಮಾರ್ ಅವರು, ಈ ರಾಜ್ಯದಲ್ಲಿ ಎಲ್ಲಾ ರೀತಿಯ ಕಳ್ಳತನವನ್ನು ನೋಡಿದ್ದೇವೆ. ಹಣ ಕದಿಯುವವರು, ಒಡವೆ ಕದಿಯವವರು, ಚಪ್ಪಲಿ ಕದಿಯುವವರು, ಬೇಕೆ ವಸ್ತು ಕದಿಯುವವರನ್ನು ನೋಡಿದ್ದೇನೆ. ಆದರೆ, ಮತ ಕಳ್ಳತನ ಮಾಡುವುದನ್ನು ನೋಡಿರಲಿಲ್ಲ. ಈ ವಿಚಾರದ ದಾರಿ ತಪ್ಪಿಸಲು ಕುಕ್ಕುರ್ ಬಾಂಬ್ ಪ್ರಕರಣವನ್ನು ಪ್ರಸ್ತಾಪಿಸಿ ದಿಕ್ಕು ತಪ್ಪಿಸಲಾಗಿದೆ. ಭಯೋತ್ಪಾದನೆಗೆ ಎಂದಿಗೂ ಕಾಂಗ್ರೆಸ್ ಬೆಂಬಲ ನೀಡುವುದಿಲ್ಲ, ಕಟುವಾಗಿ ಅದನ್ನು ವಿರೋಧಿಸುತ್ತೇವೆಂದು ತಿರುಗೇಟು ನೀಡಿದರು.
ಪ್ರಕರಣದ ಆರೋಪಿ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಆತನ ವಿಚಾರಣೆ ಮಾಡಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಹೇಳಿಕೆ ನೀಡಿರುವಾಗ, ಪೊಲೀಸ್ ಮಹಾನಿರ್ದೇಶಕರು ಘಟನೆ ನಡೆದ ಮರುದಿನವೇ, ಆರೋಪಿಯ ವಿಚಾರಣೆ ನಡೆಯುವ ಮುನ್ನವೇ ಇದನ್ನು ಭಯೋತ್ಪಾದಕ ಕೃತ್ಯ ಎಂದು ಘೋಷಿಸಿದರು. ಆ ಮೂಲಕ ಮತದಾರರ ಮಾಹಿತಿ ಕಳವು ವಿಚಾರ ಚರ್ಚೆ ಆಗುವಾಗ ಅದರ ಮೇಲೆ ಗಮನ ಬೇರೆಡೆಗೆ ಸಳೆಯುವ ಪ್ರಯತ್ನ ಮಾಡಿದ್ದಾರೆ. ವಿಷಯಾಂತರ ಮಾಡಲು ಈ ಕುಕ್ಕರ್ ಪ್ರಕರಣವನ್ನು ಬಳಸಿಕೊಂಡಿದ್ದಾರೆಂಬ ಅರ್ಥದಲ್ಲಿ ಹೇಳಿಕೆ ನೀಡಿದ್ದೆ ಎಂದು ಸ್ಪಷ್ಟನೆ ನೀಡಿದರು.
ವಿಪಕ್ಷ ಉಪನಾಯಕ ಯು.ಟಿ ಖಾದರ್ ಅವರು ಮಾತನಾಡಿ, ಯಾವುದೇ ಧರ್ಮ ಭಯೋತ್ಪಾದನೆಗೆ ಬೆಂಬಲ ಕೊಡಲ್ಲ. ಕುರಾನ್, ಬೈಬಲ್ ಸೇರಿದಂತೆ ಯಾವುದೇ ಧರ್ಮ ಭಯೋತ್ಪಾದನೆಗೆ ಬೆಂಬಲ ಕೊಡಲ್ಲ. ಯಾರೋ ಕೆಲವರು ಮಾಡಿದರೆ ಅದಕ್ಕೆ ಧರ್ಮ ಹೊಣೆಯಲ್ಲ. ಕ್ರಿಮಿನಲ್ ಕ್ರಿಮಿನಲ್ ರೀತಿಯಲ್ಲಿ ನೋಡಬೇಕು. ನಮ್ಮ ಜಾತಿ ಮಾಡಿದರೆ ಸರಿ ಬೇರೆಯವರು ಮಾಡಿದರೆ ತಪ್ಪು ಎಂಬ ಮನಸ್ಥಿತಿ ಸರಿಯಲ್ಲ. ಭಯೋತ್ಪಾದಕರನ್ನು ವಿಮಾನದಲ್ಲಿ ಕರೆದುಕೊಂಡು ಹೋಗಿ ಕಂದಹಾರ್ ಗೆ ಬಿಟ್ಟದ್ದು ಯಾರು? ಅವತ್ತು ಮಾಡಿದ ತಪ್ಪು ಇವಾಗ ಭಯೋತ್ಪಾದಕರಿಗೆ ಅನುಕೂಲ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪುಲ್ವಾಮಾ ಸ್ಫೋಟಕ್ಕೆ ಆರ್ ಡಿ ಎಕ್ಷ್ ಎಲ್ಲಿಂದ ಸಿಕ್ತು? ಭಯೋತ್ಪಾದಕರಿಗೆ ಬೆಂಬಲ ಕೊಟ್ಟ ಪಿಡಿಪಿ ಜೊತೆಗೆ ಅಧಿಕಾರ ನಡೆಸಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು. ಮಲೆಗಾಂವ್ ಸ್ಫೋಟದ ಆರೋಪಗಳನ್ನು ಎಂಪಿಯನ್ನಾಗಿ ಮಾಡಲಾಯಿತು. ಮಂಗಳೂರು ಸ್ಫೋಟದ ಆರೋಪಿ ಈ ಹಿಂದೆ ಬಂಧನ ಆಗಿ ಬಿಡುಗಡೆ ಆದಾಗ ಅವನು ಎಲ್ಲಿ ಇದ್ದಾನೆ ಎಂದು ಪೊಲೀಸರಿಗೆ, ಗುಪ್ತಚರ ಇಲಾಖೆಗೂ ಗೊತ್ತಿಲ್ಲ ಎಂದು ಹೇಳಿದರು.