ಸೌಜನ್ಯದ ಭೇಟಿಯಷ್ಟೇ, ರಾಜಕೀಯ ಉದ್ದೇಶವಿಲ್ಲ: ಡಿಕೆ ಶಿವಕುಮಾರ್ ಭೇಟಿ ಬಗ್ಗೆ ಆನಂದ್ ಸಿಂಗ್ ಸ್ಪಷ್ಟನೆ
ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
Published: 03rd February 2022 12:37 PM | Last Updated: 04th February 2022 01:35 PM | A+A A-

ಆನಂದ್ ಸಿಂಗ್
ಬೆಂಗಳೂರು: ಇತ್ತೀಚೆಗೆ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಅವರು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.
ಈ ಸಂಬಂಧ ಬುಧವಾರ ಮಾತನಾಡಿದ ಅವರು ಇದೊಂದು ಸೌಜನ್ಯಯುತ ಭೇಟಿಯಾಗಿತ್ತು, ಅದರಲ್ಲಿ ರಾಜಕೀಯ ಉದ್ದೇಶವಿರಲಿಲ್ಲ ಎಂದು ಹೇಳಿದ್ದಾರೆ.
ಅದೊಂದರ ಆಕಸ್ಮಿಕ ಭೇಟಿಯಾಗಿತ್ತು, ಅದಕ್ಕೂ ರಾಜಕೀಯಕ್ಕೂ ಯಾವುದೇ ಸಂಬಂಧವಿರಲಿಲ್ಲ ಎಂದು ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ, ಮಾಜಿ ಸಿಎಂ ಯಡಿಯೂರಪ್ಪ ವಿಜಯ ನಗರ ಜಿಲ್ಲೆ ಮಾಡುವ ಬಗ್ಗೆ ನೀಡಿದ್ದ ಭರವಸೆ ಈಡೇರಿಸಿದ್ದಾರೆ, ಜಿಲ್ಲೆಯ ಅಭಿವೃದ್ಧಿಗಾಗಿ ಸಾಕಷ್ಟು ಅನುದಾನ ನೀಡಿದ್ದಾರೆ, ನಾನು ಬೇರೆ ಪಕ್ಷಕ್ಕೆಹೋಗುವ ಪ್ರಮೇಯವೇ ಇಲ್ಲ ಎಂದು ಹೇಳಿದ್ದಾರೆ.
ನಂದಿ ಗಿರಿಧಾಮದಲ್ಲಿ ಪ್ರಮುಖವಾಗಿ ಕೆಲವೊಂದು ಮೂಲಭೂತ ಸೌಕರ್ಯಗಳು, ಪ್ರಮುಖವಾಗಿ ಕುಡಿಯುವ ನೀರಿನ ಸಮಸ್ಯೆ ಇರುವುದನ್ನು ಗಮನಿಸಿದರು. ಅಲ್ಲದೆ ಬೆಟ್ಟಕ್ಕೆ ರೂಪ್ ವೇ ಕಾಮಗಾರಿಯನ್ನು ಆದಷ್ಟು ಬೇಗ ಪ್ರಾರಂಭ ಮಾಡಲು ಟೆಂಡರ್ ಅನ್ನು ಕರೆಯಲಾಗುವುದು ಎಂದು ತಿಳಿಸಿದರು. ಇದೇ ವೇಳೆ ಗಿರಿಧಾಮದಲ್ಲಿ ಕಲಾಧಾಮ ಮಾಡಿ ರಾಜಸ್ಥಾನದಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿ, ಇಲ್ಲಿನ ಕೆಲ ಸ್ಥಳೀಯ ಕಲಾವಿದರಿಗೂ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ: ಆನಂದ್ ಸಿಂಗ್- ಡಿಕೆಶಿ ನಡುವಣ ರಹಸ್ಯ ಮಾತುಕತೆ: ಹಲವು ಊಹಾಪೋಹ!
ಹೊಸ ಪ್ರವಾಸೋದ್ಯಮದ ನೀತಿಯನ್ನು ಜಾರಿಗೆ ತಂದಿದ್ದೇವೆ. ಅದರಂತೆ ಈಗಾಗಲೇ ಹಂಪಿ, ಹಳೇಬೀಡು, ಬೇಲೂರು, ಬಾದಾಮಿಯಲ್ಲಿ ಈಗಾಗಲೇ ಯೋಜನೆಗಳು ಪ್ರಾರಂಭವಾಗಿವೆ. ಪ್ರವಾಸಿ ತಾಣಗಳಲ್ಲಿ ಕೆಲವು ಕ್ಲಸ್ಟರ್ಗಳನ್ನು ತಂದಿದ್ದೇವೆ. ಪ್ರವಾಸಿ ತಾಣಗಳಲ್ಲಿ ಹೋಟೆಲ್ ಉದ್ಯಮ ನಡೆಸುವವರಿಗೆ ಸಬ್ಸಿಡಿ ನೀಡಬೇಕೆಂದು ಯೋಚನೆ ಮಾಡಿದ್ದೇವೆ ಎಂದು ಆನಂದ್ ಸಿಂಗ್ ತಿಳಿಸಿದರು.