ವಿಧಾನ ಪರಿಷತ್ ಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಕೇಂದ್ರಕ್ಕೆ ರವಾನೆ
ಜೂನ್ನಲ್ಲಿ ನಡೆಯುವ ಎರಡು ಪದವಿಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ಗೆ ರಾಜ್ಯ ನಾಯಕರು ಕಳುಹಿಸಿಕೊಟ್ಟಿದ್ದಾರೆ.
Published: 04th February 2022 11:49 PM | Last Updated: 04th February 2022 11:49 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಜೂನ್ನಲ್ಲಿ ನಡೆಯುವ ಎರಡು ಪದವಿಧರ ಹಾಗೂ ಎರಡು ಶಿಕ್ಷಕರ ಕ್ಷೇತ್ರಗಳಿಗೆ ಬಿಜೆಪಿ ಸಂಭಾವ್ಯರ ಪಟ್ಟಿಯನ್ನು ಹೈಕಮಾಂಡ್ಗೆ ರಾಜ್ಯ ನಾಯಕರು ಕಳುಹಿಸಿಕೊಟ್ಟಿದ್ದಾರೆ.
ವಾಯುವ್ಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಹನುಮಂತ ನಿರಾಣಿ, ವಾಯುವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ್ ಶಹಾಪುರೆ ಹಾಗೂ ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಲಿಂಬಿಕಾಯಿ ಅವರ ಹೆಸರುಗಳನ್ನು ಕಳುಹಿಸಲಾಗಿದೆ.
ಇದನ್ನು ಓದಿ: ಪರಿಷತ್ ಚುನಾವಣೆಯ ಎರಡು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಪ್ರಕಟ: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
ದಕ್ಷಿಣ ಪದವೀಧರ ಕ್ಷೇತ್ರಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಗೋ ಮಧುಸೂಧನ ಹಾಗೂ ಮೈ.ವಿ. ರವಿಶಂಕರ ಇಬ್ಬರ ಹೆಸರುಗಳನ್ನು ಹೈಕಮಾಂಡ್ಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಹೊರಟ್ಟಿಗೆ ಅನುಮಾನ
ರಾಜ್ಯ ಬಿಜೆಪಿ ಪಶ್ಚಿಮ ಶಿಕ್ಷಕರ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಪಟ್ಟಿಯನ್ನು ಕೇಂದ್ರ ಸಂಸದೀಯ ಮಂಡಳಿಗೆ ಕಳುಹಿಸಿಕೊಟ್ಟಿರುವುದರಿಂದ ಬಿಜೆಪಿ ಸೇರ್ಪಡೆ ಅಥವಾ ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧೆಗೆ ಒಲವು ತೋರಿದ್ದ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಬಿಜೆಪಿ ಬೆಂಬಲ ಅಥವಾ ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಪ್ರಮುಖವಾಗಿ ಬಸವರಾಜ ಹೊರಟ್ಟಿ ಅವರಿಗೆ 75 ವರ್ಷ ತುಂಬಿರುವುದರಿಂದ ಅವರು ಬಿಜೆಪಿ ಸೇರ್ಪಡೆಯಾಗಲು ವಯಸ್ಸಿನ ಅಡ್ಡಿಯಾಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಹೊರಟ್ಟಿ ಅವರು ಬಿಜೆಪಿ ಸೇರಿದರೆ, ಪಕ್ಷದ ಕೇಂದ್ರ ಸಂಸದೀಯ ಮಂಡಳಿ ವಯಸ್ಸಿನ ಕಾರಣದಿಂದ ಅವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಹೆಚ್ಚಿತ್ತು ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬಂದಿದ್ದವು.