ಹಿಜಾಬ್ ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಲಿ: ಬಸನಗೌಡ ಪಾಟೀಲ್ ಯತ್ನಾಳ್
ಶಾಲೆಗೆ ಹಿಜಾಬ್ ಧರಿಸಿ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ. ಇಂದು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿಯೇ ಮಸೀದಿ ಬೇಕು ಅಂತಾರೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಕಿಡಿಕಾರಿದ್ದಾರೆ.
Published: 06th February 2022 01:04 PM | Last Updated: 07th February 2022 01:12 PM | A+A A-

ಯತ್ನಾಳ್
ಮೈಸೂರು: ಶಾಲೆಗೆ ಹಿಜಾಬ್ ಧರಿಸಿ ಹೋಗುವುದಾದರೆ ಪಾಕಿಸ್ತಾನಕ್ಕೆ ಹೋಗಿ, ಈ ನೆಲದಲ್ಲಿ ಅದಕ್ಕೆ ಅವಕಾಶವಿಲ್ಲ. ಇಂದು ಹಿಜಾಬ್ ಕೇಳಿದವರು ನಾಳೆ ಶಾಲೆಯಲ್ಲಿಯೇ ಮಸೀದಿ ಬೇಕು ಅಂತಾರೆ ಎಂದು ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಅವರು ಕಿಡಿಕಾರಿದ್ದಾರೆ.
ಹಿಜಾಬ್ ವಿವಾದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಉರ್ದು ಬೇಕು, ಹಿಜಾಬ್ ಬೇಕು, ಇಸ್ಲಾಂ ಧರ್ಮದ ಸಂಸ್ಕೃತಿ ಪಾಲಿಸಬೇಕು ಎಂದಾದರೆ ಅದಕ್ಕೆ ಪಾಕಿಸ್ತಾನವನ್ನು ಕೊಟ್ಟಿದ್ದೇವೆ. ಇಲ್ಲಿಯೇ ಇರಬೇಕಾದರೆ ದೇಶದ ಸಂವಿಧಾನ ಮತ್ತು ಸಂಸ್ಕೃತಿಯನ್ನು ಪಾಲಿಸಬೇಕು. ಹಿಜಾಬ್ ಧರಿಸಿಕೊಂಡು ಬರುವವರನ್ನು ಶಾಲೆಯಿಂದ ಹೊರಗೆ ಹಾಕಬೇಕು ಎಂದು ಹೇಳಿದ್ದಾರೆ.
ಇಂದು ಹಿಜಾಬ್ ಧರಿಸಲು ಅವಕಾಶ ನೀಡಿ ಎನ್ನುವವರು, ನಾಳೆ ಶಾಲೆಯಲ್ಲಿ ಮಸೀದಿ ಕಟ್ಟಬೇಕು ಎನ್ನುತ್ತಾರೆ. ಅಂತವರಿಗೆ ಬೆಂಬಲ ಕೊಡುವವರು ನಿಜವಾದ ದೇಶದ್ರೋಹಿಗಳು. ಇಂತಹ ಚಟುವಟಿಕೆಗಳನ್ನು ಯಾವುದೇ ಮುಲಾಜಿಲ್ಲದೆ ಹತ್ತಿಕ್ಕಬೇಕು. ರಾಜ್ಯದಲ್ಲಿ ಅಶಾಂತಿ ಉಂಟುಮಾಡುವ ಪ್ರಯತ್ನ ನಡೆಯುತ್ತಿದೆ. ಇದರ ಹಿಂದೆ ದೇಶವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ: ತಾಕತ್ತಿದ್ದರೆ ನಾನು ಹಿಜಾಬ್ ಧರಿಸಿ ಬಂದಾಗ ವಿಧಾನಸೌಧದೊಳಗೆ ತಡೆಯಲಿ ನೋಡೋಣ: ಶಾಸಕಿ ಕನೀಝ್ ಫಾತಿಮ ಸವಾಲು
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಅವರು, ಹಿಜಾಬ್ ಬೆಂಬಲಿಸುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ನವರು ಹಿಂದೂನಾ? ಅಥವಾ ಮುಸ್ಲಿಂಗೆ ಮತಾಂತರಗೊಂಡಿದ್ದಾರಾ? ಪ್ರತಿ ಬಾರಿಯೂ ಮುಸ್ಲಿಮರನ್ನು ಓಲೈಸುವ ಗುಣ ಹೊಂದಿರುವ ಸಿದ್ದರಾಮಯ್ಯ ಜಾತ್ಯತೀತತೆ ಬಗ್ಗೆ ಮಾತನಾಡುವುದು ಮತಾಂತರವೇ ಎಂದು ಪ್ರಶ್ನಿಸಿದ್ದಾರೆ.
ದೇಶದಲ್ಲಿ ಶೇ 15ರಷ್ಟು ಮುಸ್ಲಿಮರಿದ್ದಾರೆ. ಇವರ ಸಂಖ್ಯೆ ಶೇ.50 ಆದರೆ, ಹಿಂದೂಗಳು ಉಳಿಯಲು ಸಾಧ್ಯವೇ?. ಇದನ್ನು ಹಿಂದೂಗಳು ಅರ್ಥ ಮಾಡಿಕೊಳ್ಳಬೇಕು. ಈ ದೇಶ ಇಬ್ಭಾಗವಾದಾಗ ಧರ್ಮದ ಆಧಾರದ ಮೇಲೆ ಪಾಕಿಸ್ತಾನ ಕೊಟ್ಟಿದ್ದಾರೆ. ನಿಮಗೆ ಈ ಸಂಸ್ಕೃತಿ ಬೇಡವೆಂದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಖಾರವಾಗಿ ಉತ್ತರಿಸಿದರು.