ಪರಿಸ್ಥಿತಿ ಕೈ ಮೀರಿದೆ, ಶಿಕ್ಷಣ ಸಂಸ್ಥೆಗಳಿಗೆ ಒಂದು ವಾರ ರಜಾ ಕೊಡಿ: ಸರ್ಕಾರಕ್ಕೆ ಡಿ.ಕೆ.ಶಿವಕುಮಾರ್ ಆಗ್ರಹ
ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕ್ಕೇರಿದ ಬೆನ್ನಲ್ಲೇ ರಾಜ್ಯ ಸರ್ಕಾರ ಅನಿವಾರ್ಯವಾಗಿ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಪರಿಸ್ಥಿತಿ ಕೈ ಮೀರಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವಂತೆ ಆಗ್ರಹಿಸುತ್ತಿದೆ.
Published: 09th February 2022 07:51 AM | Last Updated: 09th February 2022 12:44 PM | A+A A-

ಡಿಕೆ.ಶಿವಕುಮಾರ್
ಬೆಂಗಳೂರು: ರಾಜ್ಯದಲ್ಲಿ ಹಿಜಾಬ್ ವಿವಾದ ತಾರಕ್ಕೇರಿದ ಬೆನ್ನಲ್ಲೇ ರಾಜ್ಯ ಸರ್ಕಾರ ಅನಿವಾರ್ಯವಾಗಿ ಹೈಸ್ಕೂಲ್ ಹಾಗೂ ಕಾಲೇಜುಗಳಿಗೆ ಮೂರು ದಿನಗಳ ಕಾಲ ರಜೆ ಘೋಷಣೆ ಮಾಡಿದ್ದು, ವಿರೋಧ ಪಕ್ಷ ಕಾಂಗ್ರೆಸ್ ಪರಿಸ್ಥಿತಿ ಕೈ ಮೀರಿರುವ ಹಿನ್ನೆಲೆಯಲ್ಲಿ ಶಿಕ್ಷಣ ಸಂಸ್ಥೆಗಳನ್ನು ಒಂದು ವಾರಗಳ ಕಾಲ ಬಂದ್ ಮಾಡುವಂತೆ ಆಗ್ರಹಿಸುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ರಾಜ್ಯದ ಕೆಲ ಶಿಕ್ಷಣ ಸಂಸ್ಥೆಗಳಲ್ಲಿ ಪರಿಸ್ಥಿತಿ ಕೈಮೀರಿ ಹೋಗಿದೆ. ಒಂದು ಪ್ರಕರಣದಲ್ಲಿ ರಾಷ್ಟ್ರಧ್ವಜ ಹಾರಬೇಕಿದ್ದ ಸ್ಥಳದಲ್ಲಿ ಕೇಸರಿ ಧ್ವಜವನ್ನು ಹಾರಿಸಲಾಗಿದೆ. ಹೀಗಾಗಿ ಕಾನೂನು ಮತ್ತು ಸುವ್ಯವಸ್ಥೆ ನಿಯಂತ್ರಣಕ್ಕೆ ತರಲು ಶಿಕ್ಷಣ ಸಂಸ್ಥೆಗಳನ್ನು ವಾರಗಳ ಕಾಲ ಬಂದ್ ಮಾಡಬೇಕಿದ್ದು, ಆನ್ ಲೈನ್ ತರಗತಿಗಳನ್ನು ಮುಂದುವರೆಸಬೇಕಿದೆ ಎಂದು ಹೇಳಿದ್ದಾರೆ.
ಈ ವೇಳೆ ಶಿವಮೊಗ್ಗದಲ್ಲಿ ನಡೆದಿರುವ ಘಟನೆಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯೊಂದಿಗೆ ಕೈಜೋಡಿಸಿರುವ ಕೆಲ ದೇಶವಿರೋಧಿಗಳು ಶಿವಮೊಗ್ಗದ ಕಾಲೇಜಿನಲ್ಲಿ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ಕೇಸರಿ ಧ್ವಜವನ್ನು ಹಾರಿಸಿದ್ದಾರೆಂದು ಕಿಡಿಕಾರಿದ್ದಾರೆ. ಇದೇ ವೇಳೆ ಪರಿಸ್ಥಿತಿ ಹತೋಟಿಗೆ ತರಲು ಸರ್ಕಾರ ಪ್ರೌಢಶಾಲೆ ಹಾಗೂ ಕಾಲೇಜುಗಳಿಗೆ ಮೂರು ದಿನ ರಜೆ ಘೋಷಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಡಿಕೆ.ಶಿವಕುಮಾರ್ ಅವರ ಈ ಹೇಳಿಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಕಿಡಿಕಾರಿದ್ದು, ಇದೊಂದು ಸುಳ್ಳು ಮತ್ತು ಪ್ರಚೋದನಕಾರಿ ಹೇಳಿಕೆ ಎಂದು ತಿಳಿಸಿದರು. ಡಿಕೆ.ಶಿವಕುಮಾರ್ ಅವರು ಆರೋಪಿಸಿದಂತೆ ರಾಷ್ಟ್ರಧ್ವಜವನ್ನು ಕೆಳಗಿಳಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು.