ಟೇಪ್ ಕಟ್ ಮಾಡುವ ವಿಚಾರಕ್ಕೆ ಶಾಸಕ-ಸಚಿವರ ಜಟಾಪಟಿ; ಬಚ್ಚೇಗೌಡ ಕುಟುಂಬದಿಂದ ಹೊಸಕೋಟೆ ಬಿಹಾರವಾಗಿತ್ತು; ಎಂಟಿಬಿ ಆಕ್ರೋಶ
ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಕುಟುಂಬದವರು ಹೊಸಕೋಟೆಯನ್ನು ಬಿಹಾರ ಮಾಡಿದ್ದರು. ಎಷ್ಟೋ ಜನರ ಹತ್ಯೆಗಳನ್ನು ಮಾಡಿದ್ದಾರೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ ಆರೋಪಿಸಿದ್ದಾರೆ.
Published: 11th February 2022 08:59 AM | Last Updated: 11th February 2022 12:39 PM | A+A A-

ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್
ಬೆಂಗಳೂರು: ಚಿಕ್ಕಬಳ್ಳಾಪುರ ಸಂಸದ ಬಿ.ಎನ್. ಬಚ್ಚೇಗೌಡ ಕುಟುಂಬದವರು ಹೊಸಕೋಟೆಯನ್ನು ಬಿಹಾರ ಮಾಡಿದ್ದರು. ಎಷ್ಟೋ ಜನರ ಹತ್ಯೆಗಳನ್ನು ಮಾಡಿದ್ದಾರೆ ಎಂದು ಪೌರಾಡಳಿತ ಸಚಿವ ಎಂ.ಟಿ.ಬಿ. ನಾಗರಾಜ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಹೊಸಕೋಟೆಯಲ್ಲಿ ಬಚ್ಚೆೇಗೌಡರ ಕುಟುಂಬ ಬಿಹಾರ ಮಾದರಿಯಲ್ಲಿ ದಬ್ಬಾಳಿಕೆ ನಡೆಸುತ್ತಿತ್ತು. ಇವರಿಂದ ಭಯಭೀತರಾಗಿ ಎಷ್ಟೋ ಜನರು ಊರು ತೊರೆದು ಹೋಗಿದ್ದಾರೆ. ಕೆರೆ, ಸ್ಮಶಾನ ಎಲ್ಲ ಜಾಗವನ್ನೂ ಕಬಳಿಸಿದ್ದಾರೆ. ಇದರ ಬಗ್ಗೆ ಮಾತನಾಡಲು ನಾನು ದಾಖಲೆ ಸಮೇತ ಬರುತ್ತೇನೆ, ಅವರೂ ಬರಲಿ ಎಂದು ಬಚ್ಚೇಗೌಡ ಕುಟುಂಬಕ್ಕೆ ಸವಾಲು ಹಾಕಿದರು.
ಮೊದಲು ಹೊಸಕೋಟೆ ಗೂಂಡಾ ತಾಲ್ಲೂಕಾಗಿತ್ತು. ಚುನಾವಣೆ ಸಂದರ್ಭದಲ್ಲಿ ಮಾಡಬಾರದನ್ನು ಮಾಡುತ್ತಿದ್ದರು. ಇವರು ಎಷ್ಟೋ ಕೊಲೆಗಳನ್ನ ಮಾಡಿದ್ದಾರೆ. ನಾನು ಬಂದ ಮೇಲೆ ಹೊಸಕೋಟೆ ತಾಲ್ಲೂಕು ಶಾಂತಿಯುತವಾಗಿದೆ. ಇವರ ವಿರುದ್ಧ ಕೋರ್ಟ್ನಲ್ಲಿ ಗೂಂಡಾಗಿರಿ ಪ್ರಕರಣಗಳಿವೆ. ಬಚ್ಚೇಗೌಡ ಕುಟುಂಬ ಗೂಂಡಾಗಿರಿ ಮಾಡಿ ನೂರಾರು ಎಕರೆ ಭೂಕಬಳಿಕೆ ಮಾಡಿದೆ. ನಾನು ನೀಡುವ ದಾಖಲೆ ಸುಳ್ಳಾದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಎಂ.ಟಿ.ಬಿ. ನಾಗರಾಜ ಸವಾಲು ಹಾಕಿದರು.
ಇದನ್ನೂ ಓದಿ: ಹೊಸಕೋಟೆ ಪಟ್ಟಣಕ್ಕೆ ಮೆಟ್ರೊ ರೈಲು ಸಂಚಾರ ವಿಸ್ತರಿಸಿ: ಸಚಿವ ಎಂಟಿಬಿ ನಾಗರಾಜ್
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಹಾಗೂ ಸಚಿವ ಎಂಟಿಬಿ ನಾಗರಾಜ್ ನಡುವೆ ಕಟ್ಟಡ ಉದ್ಘಾಟನೆ ವಿಚಾರಕ್ಕಾಗಿ ಜಟಾಪಟಿ ನಡೆಯಿತು. ಟೇಪ್ ಕಟ್ ಮಾಡಲು ನಾ ಮುಂದು ತಾ ಮುಂದು ಎಂದು ಇಬ್ಬರ ನಡುವೆ ಕಿತ್ತಾಟವಾಗಿದೆ. ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮ ಪಂಚಾಯತಿ ಕಟ್ಟಡ ಉದ್ಘಾಟನೆ ವೇಳೆ ಈ ಘಟನೆ ನಡೆದಿದೆ.
ಉದ್ಘಾಟನೆಗೆ ತಂದಿದ್ದ ಕತ್ತರಿಯನ್ನ ಶಾಸಕ ಶರತ್ ಎತ್ತಿಕೊಂಡು ಟೇಪ್ ಕಟ್ ಮಾಡಲು ಮುಂದಾದಾಗ ಎಂಟಿಬಿ ಗರಂ ಆಗಿದ್ದಾರೆ. ಸಚಿವ ಎಂಟಿಬಿ ಗರಂ ಆದರೂ ತಲೆಕೆಡಿಸಿಕೊಳ್ಳದೇ ಶಾಸಕ ಶರತ್ ಟೆಪ್ ಕಟ್ ಮಾಡಿದ್ದಾರೆ. ಕಟ್ ಮಾಡಿ ಒಳಗೆ ಹೋಗುತ್ತಿದ್ದಂತೆ ಬಚ್ಚೇಗೌಡ ನಿಂದು ಇದೇ ಆಗೋಯ್ತು ಅಂತ ಶರತ್ ಬಗ್ಗೆ ಎಂಟಿಬಿ ಗರಂ ಆಗಿ ಹೇಳಿದ್ದಾರೆ.
ಈ ವೇಳೆ ಸಚಿವರಿಗೆ ಗೌರವ ಕೊಡುವಂತೆ ಎಂಟಿಬಿ ನಾಗರಾಜ್ ವಾರ್ನ್ ಮಾಡಿದ್ದಾರೆ. ಆಗ ಸಚಿವ ಎಂಟಿಬಿಯನ್ನು ಒಂದುಕಡೆ ತಳ್ಳಿ ಶಾಸಕ ಶರತ್ ಒಳನುಗ್ಗಿದ್ದಾರೆ. ಪಕ್ಕಕ್ಕೆ ಎಡವಿದ ಎಂಟಿಬಿ ನಾಗರಾಜ್, ತಂದೆ, ಮಗನ ದಬ್ಬಾಳಿಕೆ ಹೆಚ್ಚಾಯಿತೆಂದು ಗರಂ ಆಗಿದ್ದಾರೆ. ಈ ನಡುವೆ ಕೈ ಬೆರಳು ತೋರಿಸಿ ಮಾತನಾಡದಂತೆ ಎಂಟಿಬಿಗೆ ಶಾಸಕ ಶರತ್ ಎಚ್ಚರಿಕೆ ಕೊಟ್ಟಿದ್ದಾರೆ. ಈ ವೇಳೆ ಇಬ್ಬರ ನಡುವೆ ಪರಸ್ಪರ ಮಾತಿಗೆ ಮಾತು ಬೆಳೆದು ಮಾತಿನ ಚಕಮಕಿ ತಾರಕಕ್ಕೇರಿದೆ, ನಂತರ ಪೊಲೀಸರ ಮಧ್ಯಪ್ರವೇಶಿಸಿ ಇಬ್ಬರನ್ನು ಸಮಾಧಾನ ಪಡಿಸಿದ್ದಾರೆ.