ರಾಮನಗರ- ಚನ್ನಪಟ್ಟಣ ಬಿಟ್ಟು ಎಚ್ ಡಿಕೆ ಚಾಮುಂಡೇಶ್ವರಿಗೆ ಏಕೆ ಹೋಗಬೇಕು; ನಿಖಿಲ್ ಸ್ಪರ್ಧೆ ಬಗ್ಗೆ ತಂದೆಯ ನಿರ್ಧಾರವೇ ಅಂತಿಮ!
ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿ ಗೆದ್ದಿದಾರೆ. ಅಲ್ಲಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡಾ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದೂ ನನ್ನ ಅಭಿಪ್ರಾಯ ಎಂದರು.
Published: 15th February 2022 08:54 AM | Last Updated: 15th February 2022 12:55 PM | A+A A-

ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಎಲ್ಲಿ ಸ್ಪರ್ಧೆ ಮಾಡಬೇಕು ಎಂಬುವುದನ್ನು ದೈವದ ಆಟ ನಿರ್ಧಾರ ಮಾಡುತ್ತದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಮಾರ್ಮಿಕವಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿ ಗೆದ್ದಿದಾರೆ. ಅಲ್ಲಿಂದಲೇ ಕುಮಾರಸ್ವಾಮಿ ಮುಖ್ಯಮಂತ್ರಿ ಕೂಡಾ ಆಗಿದ್ದಾರೆ. ಹಾಗಾಗಿ ಮತ್ತೆ ಅಲ್ಲಿಂದಲೇ ಸ್ಪರ್ಧೆ ಮಾಡಲಿ ಅನ್ನುವುದೂ ನನ್ನ ಅಭಿಪ್ರಾಯ ಎಂದರು. ಕುಮಾರಸ್ವಾಮಿ ಯಾಕೆ ಚಾಮುಂಡೇಶ್ವರಿಯಿಂದ ಸ್ಪರ್ಧೆ ಮಾಡಬೇಕು. ರಾಮನಗರ, ಚನ್ನಪಟ್ಟಣ ಬಿಟ್ಟು ಬೇರೆ ಕಡೆ ಯಾಕೆ ಹೋಗಬೇಕು ಹೇಳಿ ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಹಿರಿಯ ನಾಯಕರ ಸಮಾಧಿ ಮೇಲೆ ಸೌಧ ಕಟ್ಟಿರುವ ಹೆಚ್ ಡಿಕೆ ಯಾವ ಪುಣ್ಯದ ಹಣದಲ್ಲಿ ರಾಧಿಕಾಗೆ ನೂರಾರು ಕೋಟಿ ಕೊಟ್ಟರು?
ಇನ್ನು ನಿಖಿಲ್ ಕುಮಾರಸ್ವಾಮಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ನಿಖಿಲ್ ಈಗ ಸಿನಿಮಾ ಜಗತ್ತಿನಲ್ಲಿದ್ದಾರೆ. ಯುವ ಜನತಾದಳದ ಅಧ್ಯಕ್ಷ ಆಗಿದ್ದಾರೆ. ಸಿನಿಮಾ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ನಿಖಿಲ್ ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕೋ ಅಥವಾ ಸಿನಿಮಾದಲ್ಲಿ ಮುಂದುವರೆಯಬೇಕೋ ಎಂಬ ವಿಚಾರದ ಬಗ್ಗೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ತೀರ್ಮಾನ ಮಾಡುತ್ತಾರೆ ದೇವೇಗೌಡರು ತಿಳಿಸಿದರು.