ಹಿಂದೂ ದೇವಾಲಯಗಳಿಗೆ ಸ್ವಾತಂತ್ರ್ಯ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ
ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಯೋಜನೆಯು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
Published: 01st January 2022 11:23 AM | Last Updated: 01st January 2022 02:03 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ರಾಜ್ಯ ಸರ್ಕಾರದ ಯೋಜನೆಯು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವೆ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.
ದೇಗುಲಗಳನ್ನು ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸೋ ಬಗ್ಗೆ ಸಿಎಂ ಬೊಮ್ಮಾಯಿ ನೀಡಿರುವ ಹೇಳಿಕೆಯೊಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಆಡಳಿತಾರೂಢ ಬಿಜೆಪಿ ನಡುವಿನ ವಾಕ್ಸಮರಕ್ಕೆ ಕಾರಣವಾಗಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಈ ಮೊದಲು ಸಂಘ ಪರಿವಾರದ ಮುಖಂಡರ ಶಿಕ್ಷಣ ಸಂಸ್ಥೆಗಳಿಗೆ ಕೋಟ್ಯಂತರ ರೂ. ಬೆಲೆ ಬಾಳುವ ಜಮೀನುಗಳನ್ನು ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ದೇವಸ್ಥಾನಗಳನ್ನು ಮಾರಾಟ ಮಾಡುವ ಕ್ರೂರ ಕೃತ್ಯಕ್ಕೆ ಬಿಜೆಪಿ ಸರ್ಕಾರ ಕೈ ಹಾಕಿದೆ. ಇದಕ್ಕೆ ಕಾಂಗ್ರೆಸ್ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ರಾಜ್ಯದ 'ದೇವಾಲಯಗಳ ಸ್ವಾಯತ್ತತೆ ಐತಿಹಾಸಿಕ ಬ್ಲಂಡರ್, ಬಿಜೆಪಿ ಸರ್ಕಾರ ಭಸ್ಮವಾಗಲಿದೆ': ಡಿಕೆ ಶಿವಕುಮಾರ್
ರಾಜ್ಯದ ಕೆಲವು ದೇವಸ್ಥಾನಗಳನ್ನು ಹೊರತುಪಡಿಸಿದರೆ ಬಹುತೇಕ ಮುಜರಾಯಿ ಇಲಾಖೆಯ ಅೀಧಿನದಲ್ಲಿದೆ. ಸರ್ಕಾರದ ಹಿರಿಯ ಅಧಿಕಾರಿಗಳು ಇದರ ಆಡಳಿತ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಈಗ ಆ ದೇವಸ್ಥಾನಗಳನ್ನು ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಸಂಘ ಪರಿವಾರದ ಮುಖಂಡರಿಗೆ ನೀಡಲು ಸರ್ಕಾರ ಕಾನೂನು ತಿದ್ದುಪಡಿ ಮಾಡಲು ಮುಂದಾಗಿದೆ.
ಈ ನಿರ್ಧಾರವನ್ನು ದೇವರು, ಧರ್ಮ ಒಪ್ಪುವುದಿಲ್ಲ. ಹಿಂದುತ್ವದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಹಿಂದೂ ವಿರೋಧಿ ನಿಲುವನ್ನು ಅನುಸರಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಆಡಳಿತದಲ್ಲಿ ಒಂದೇ ಒಂದು ಜನಪರವಾದ ಕಾನೂನನ್ನು ತಂದಿಲ್ಲ. ಮತಾಂತರ ನಿಷೇಧ, ಗೋಹತ್ಯೆನಿಷೇಧ, ದೇವಸ್ಥಾನಗಳ ಹಸ್ತಾಂತರ ಎಂಬ ವಿಷಯಗಳ ಮೂಲಕ ಜನರನ್ನು ಭಾವನಾತ್ಮಕವಾಗಿ ಮೋಸಗೊಳಿಸಲಾಗುತ್ತಿದೆ.
ಇದನ್ನೂ ಓದಿ: ದೇವಾಲಯಗಳ ಸ್ವಾಯತ್ತತೆ ಪ್ರಸ್ತಾಪಕ್ಕೆ ಸ್ವಾಮೀಜಿಗಳ ಸ್ವಾಗತ, ಭಕ್ತರೆಂದರೆ ಬರೀ ಆರ್‌ಎಸ್‌ಎಸ್ ಅಲ್ಲ ಎಂದ ಮುಜರಾಯಿ ಸಚಿವ
ಧರ್ಮ, ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟ ಯಾರೂ ಕೂಡ ದೇವಸ್ಥಾನಗಳು ಮತ್ತು ಅದರ ಆಸ್ತಿಗಳನ್ನು ಖಾಸಗಿಯವರಿಗೆ ಹಸ್ತಾಂತರಿಸಲು ಒಪ್ಪುವುದಿಲ್ಲ. ನಮ್ಮ ಸರ್ಕಾರದಲ್ಲಿ ಬಹಳಷ್ಟು ಜನಪರ ಕಾನೂನುಗಳನ್ನು ಜಾರಿಗೆ ತರಲಾಗಿತ್ತು. ಅವುಗಳನ್ನು ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಕ್ಷಣವೇ ಮತಾಂತರ ಕಾಯ್ದೆಯನ್ನು ಹಿಂಪಡೆಯಲಾಗುವುದು ಎಂದು ತಿಳಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಮಾತಿಗೆ ತಿರುಗೇಟು ಕೊಟ್ಟಿರುವ ಸಿಎಂ ಬೊಮ್ಮಾಯಿ, ದೇವಸ್ಥಾನಗಳನ್ನು ಯಾರಿಗೂ ಹಸ್ತಾಂತರ ಮಾಡುತ್ತಿಲ್ಲ. ಡಿಕೆ ಶಿವಕುಮಾರ್ ಅಭಿಪ್ರಾಯ ದೇವಸ್ಥಾನಗಳು ಮತ್ತು ಭಕ್ತರ ವಿರುದ್ಧ ಇರೋದು ಸ್ಪಷ್ಟವಾಗಿದೆ. ಡಿಕೆ ಶಿವಕುಮಾರ್ ಹಿಂದೂ ದೇಗುಲದ ಹಿಂದೂ ಭಕ್ತರ ವಿರುದ್ಧ. ಡಿಕೆಎಸ್ಗೆ ಬೆಕ್ಕಿನ ಕನಸಲ್ಲಿ ಇಲಿ ಬಂದಂತಾಗಿದೆ. ಹಾಗೆಯೇ ನಾವು ಯಾರಿಗೂ ದೇಗುಲಗಳನ್ನ ಹಸ್ತಾಂತರ ಮಾಡುತ್ತಿಲ್ಲ. ಕಟ್ಟುಪಾಡುಗಳನ್ನ ಮುಕ್ತ ಮಾಡುತ್ತಿದ್ದೇವೆ. ಆರೋಪ ಮಾಡೋದು ಬಿಟ್ಟ ಬೇರೆ ಕೆಲಸ ಇಲ್ಲ ಎಂದು ಹೇಳಿದ್ದಾರೆ.