ಪ್ರಧಾನಿ ಮೋದಿ ಭದ್ರತೆಯಲ್ಲಿ ಲೋಪ: ಪಂಜಾಬ್ ಸರ್ಕಾರ ವಜಾಕ್ಕೆ ರಾಜ್ಯ ಬಿಜೆಪಿ ಮುಖಂಡರ ಒತ್ತಾಯ
ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪ ಕಂಡುಬಂದಿದ್ದಕ್ಕೆ ಪಂಜಾಬ್ ಸರ್ಕಾರವನ್ನು ವಜಾ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
Published: 06th January 2022 09:36 AM | Last Updated: 06th January 2022 01:15 PM | A+A A-

ಪ್ರಧಾನಿ ಮೋದಿ ಅವರ ಬೆಂಗಾವಲು ಪಡೆ ವಾಹನ
ಬೆಂಗಳೂರು: ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಲೋಪ ಕಂಡುಬಂದಿದ್ದಕ್ಕೆ ಪಂಜಾಬ್ ಸರ್ಕಾರವನ್ನು ವಜಾ ಮಾಡಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ರಾಜ್ಯದ ಹಲವು ಬಿಜೆಪಿ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಧಾನಿಗೆ ಸೂಕ್ತ ಭದ್ರತೆ ಒದಗಿಸದ ಪಂಜಾಬ್ ಸರ್ಕಾರ, ರಾಜ್ಯವನ್ನು ಆಳಲು ಅರ್ಹವಾಗಿಲ್ಲ, ಕೂಡಲೇ ಅದನ್ನು ಅಮಾನತುಪಡಿಸಬೇಕೆಂದು ಬೊಮ್ಮಾಯಿ ಹೇಳಿದ್ದಾರೆ.
ಪ್ರಧಾನಿಯವರ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವಲ್ಲಿ ವಿಫಲವಾಗಿರುವುದು ದೇಶಾದ್ಯಂತ ವ್ಯಾಪಕ ಖಂಡನೆಗೆ ಗುರಿಯಾಗಿದೆ ಮತ್ತು ಇದು ಅತ್ಯಂತ ಖಂಡನೀಯ ಘಟನೆಯಾಗಿದೆ. ಪ್ರತಿಯೊಂದು ಸರ್ಕಾರವೂ ದೇಶದ ಪ್ರಧಾನಿಯನ್ನು ಗೌರವಿಸಬೇಕು ಮತ್ತು ತಪ್ಪಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಬೊಮ್ಮಾಯಿ ಮಾಧ್ಯಮಗಳಿಗೆ ತಿಳಿಸಿದರು.
ಇದನ್ನೂ ಓದಿ: ಮೋದಿ ತೆರಳುತ್ತಿದ್ದ ರಸ್ತೆಯಲ್ಲಿ ಪಂಜಾಬ್ ರೈತರ ಪ್ರತಿಭಟನೆ, ಪ್ರಧಾನಿ ದೆಹಲಿಗೆ ವಾಪಸ್; 'ಭದ್ರತಾ ಲೋಪ' ಎಂದ ಕೇಂದ್ರ
ಇದಕ್ಕೂ ಮುನ್ನ ಸೋಶಿಯಲ್ ಮೀಡಿಯಾಗಳಲ್ಲಿ, ಇದು ಸಹಜ ಘಟನೆ ಎಂದು ಹೇಳಿದ್ದ ಪಂಜಾಬ್ ಮುಖ್ಯಮಂತ್ರಿ ಅವರ ಹೇಳಿಕೆಯನ್ನು ಬೊಮ್ಮಾಯಿ ಖಂಡಿಸಿದ್ದರು. ಇದು ಕಾನೂನು ಮತ್ತು ಸುವ್ಯವಸ್ಥೆಯ ನಿಮ್ಮ ಕಲ್ಪನೆಯಾಗಿದ್ದರೆ, ಪಂಜಾಬ್ ತನ್ನ ಭವಿಷ್ಯದ ಬಗ್ಗೆ ನಿಜವಾಗಿಯೂ ಚಿಂತಿಸಬೇಕಾಗಿದೆ ಎಂದು ಬೊಮ್ಮಾಯಿ ಹೇಳಿದ್ದರು.
ಪಂಜಾಬ್ ಸರ್ಕಾರದ ಅಕ್ಷಮ್ಯ ಭದ್ರತಾ ಲೋಪದಿಂದಾಗಿ ಪ್ರಧಾನಿಯವರ ಪಂಜಾಬ್ ಭೇಟಿಗೆ ಅಡ್ಡಿಪಡಿಸಿರುವುದು ಆಘಾತಕಾರಿ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
"ಭದ್ರತಾ ಲೋಪಕ್ಕೆ ಕಾಂಗ್ರೆಸ್ ಹೊಣೆ ಎಂದು ಬಿಜೆಪಿ ರಾಜ್ಯ ಘಟಕ ಹೇಳಿದರೆ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರ ಪ್ರತಿಭಟನಾಕಾರರೊಂದಿಗೆ ಶಾಮೀಲಾಗಿರುವುದು ಮತ್ತು ಭದ್ರತಾ ಲೋಪಕ್ಕೆ ಗಂಭೀರ ಹೊಣೆಯಾಗಿದೆ ಎಂದು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ. ದಕ್ಷಿಣ ಕನ್ನಡ ಸಂಸದ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಂಜಾಬ್ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ಪಂಜಾಬ್ ಸಿಎಂ ಅವರನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.