ವಿಧಾನ ಪರಿಷತ್ ನೂತನ ಸದಸ್ಯರ ಪ್ರತಿಜ್ಞಾ ವಿಧಿ ಸ್ವೀಕಾರ: ಕೊರೋನಾ ನಿಯಮ ಉಲ್ಲಂಘನೆ, ಕಾಂಗ್ರೆಸ್ ಕೆಂಡಾಮಂಡಲ
ವಿಧಾನ ಪರಿಷತ್ ನ 25 ನೂತನ ಸದಸ್ಯರು ಇಂದು ಗುರುವಾರ (ಜ.6) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪರಿಷತ್ ಸದಸ್ಯರ 500ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ.
Published: 06th January 2022 01:54 PM | Last Updated: 06th January 2022 03:53 PM | A+A A-

ವಿಧಾನ ಪರಿಷತ್ ನೂತನ ಸದಸ್ಯರ ಪ್ರತಿಜ್ಞಾ ವಿಧಿ ಸ್ವೀಕಾರ ನಂತರ ಫೋಟೋಗೆ ಫೋಸ್ ನೀಡಿದರು.
ಬೆಂಗಳೂರು: ವಿಧಾನ ಪರಿಷತ್ ನ 25 ನೂತನ ಸದಸ್ಯರು ಇಂದು ಗುರುವಾರ(ಜ.6) ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಪ್ರಮಾಣವಚನ ಸ್ವೀಕರಿಸಿಕೊಂಡಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಜ್ಞಾವಿಧಿ ಬೋಧಿಸಿದ್ದಾರೆ. ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಪರಿಷತ್ ಸದಸ್ಯರ 500ಕ್ಕೂ ಹೆಚ್ಚು ಬೆಂಬಲಿಗರು ಭಾಗಿಯಾಗಿದ್ದಾರೆ.
ಜನಪ್ರತಿನಿಧಿಗಳಿಂದಲೇ ಕೊರೋನಾ ನಿಯಮ ಉಲ್ಲಂಘನೆ: ಸರ್ಕಾರ ಎರಡು ದಿನಗಳ ಹಿಂದೆ ಹೊರಡಿಸಿರುವ ಕೊರೋನಾ ನಿರ್ಬಂಧ ಪ್ರಕಾರ, ಒಳಾಂಗಣ ಸಭೆ-ಸಮಾರಂಭಗಳಿಗೆ 100ಕ್ಕಿಂತ ಹೆಚ್ಚು ಜನರು ಸೇರಬಾರದು. ರಾಜ್ಯದಲ್ಲಿ ಓಮಿಕ್ರಾನ್, ಕೋವಿಡ್-19 ಸೋಂಕು ಹೆಚ್ಚಳವಾಗುತ್ತಿದೆ ಎಂದು ಹಲವು ನಿರ್ಬಂಧಗಳನ್ನು ಸರ್ಕಾರ ವಿಧಿಸಿದೆ.
ಆದರೆ ಶಕ್ತಿ ಕೇಂದ್ರ ವಿಧಾನ ಸೌಧದಲ್ಲಿಯೇ ಸರ್ಕಾರ ಮಾಡಿರುವ ನಿಯಮವನ್ನು ಜನಪ್ರತಿನಿಧಿಗಳೇ ಉಲ್ಲಂಘಿಸಿದ್ದು ಎದ್ದುಕಂಡುಬಂತು. ವಿಧಾನಸೌಧ ಪ್ರವೇಶಕ್ಕೆ ಎರಡು ಡೋಸ್ ಲಸಿಕೆ ಕಡ್ಡಾಯ, ಸಾಮಾನ್ಯ ಜನರ ಭೇಟಿ ನಿರ್ಬಂಧ, ವಿಧಾನಸೌಧದ ಕಾರಿಡಾರ್ಗಳಲ್ಲಿ ಗುಂಪು ಸೇರದಂತೆ ಸಿಎಂ ಈ ಹಿಂದೆ ಆದೇಶ ಹೊರಡಿಸಿದ್ದರು. ಇವೆಲ್ಲವೂ ಉಲ್ಲಂಘನೆಯಾಗಿದ್ದು ಕಂಡುಬಂತು. ಹಾಗಾದರೆ ಸರ್ಕಾರದ ನಿಯಮವಿರುವುದು ಸಾಮಾನ್ಯ ಜನತೆಗೆ ಮಾತ್ರವೇ ಎಂಬ ಪ್ರಶ್ನೆ ಉದ್ಭವಿಸಿದೆ.
ಡಿಕೆಶಿ ಆಕ್ರೋಶ: ರಾಜ್ಯದಲ್ಲಿ ಕೋವಿಡ್ ನಿಯಮ ಜಾರಿಯಲ್ಲಿದೆ, ವೀಕೆಂಡ್ ಕರ್ಫ್ಯೂ ಇದೆ, ಮೇಕೆದಾಟು ಯೋಜನೆಗೆ ಆಗ್ರಹಿಸಿ ನಡೆಸಲು ಉದ್ದೇಶಿಸಿರುವ ನೀರಿಗಾಗಿ ನಡಿಗೆ ಪಾದಯಾತ್ರೆಯನ್ನು ಹಿಂತೆಗೆದುಕೊಳ್ಳಲಿ ಎಂದು ಮುಖ್ಯಮಂತ್ರಿ ಸೇರಿದಂತೆ ಸಚಿವರುಗಳು ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.
ಇದನ್ನೂ ಓದಿ: ವಿಧಾನ ಪರಿಷತ್ ಸದಸ್ಯರಿಗೆ ಬೀಳ್ಕೊಡುಗೆ: ಮೇಲ್ಮನೆ ಅಗತ್ಯತೆ ಬಗ್ಗೆ ಸಿಂಹಾವಲೋಕನ ಅಗತ್ಯವೆಂದ ಸಿಎಂ ಬೊಮ್ಮಾಯಿ
ನಮಗೆ ಬುದ್ದಿ ಹೇಳುವವರು ಇಂದು ಇಷ್ಟು ಜನ ವಿಧಾನಸೌಧದಲ್ಲಿ ಸೇರಿದ್ದು ಏಕೆ, ಹೇಗೆ ಜನರನ್ನು ಸೇರಲು ಬಿಟ್ಟರು,ಕಾರ್ಯಕ್ರಮದಲ್ಲಿ ಎಷ್ಟು ಜನರು ಸೇರಿದ್ದಾರೆ, ನಿಯಂತ್ರಿಸಿದ್ದಾರಾ? ಇಲ್ಲಿ ಕೊವಿಡ್ ಇಲ್ಲವಾ?, ಗೃಹ ಸಚಿವರು ಏನು ಮಾಡುತ್ತಿದ್ದಾರೆ. ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದು ಹೇಗೆ? ಸರ್ಕಾರದವರು ನಮ್ಮನ್ನೇನು ಹೆದರಿಸುತ್ತಿದ್ದಾರಾ? ವರ್ಚುವಲ್ ಆಗಿ ಪ್ರತಿಜ್ಞಾವಿಧಿ ಕಾರ್ಯಕ್ರಮ ಮಾಡಬಹುದಾಗಿತ್ತಲ್ಲವೇ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮೇಕೆದಾಟು ಪಾದಯಾತ್ರೆ ಮಾಡಿಯೇ ಸಿದ್ಧ: ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತದೆ, ಹೆದರಿಕೆ ಎಲ್ಲ ಊರಲ್ಲಿಟ್ಟುಕೊಳ್ಳಿ. ನಮ್ಮ ಪಾದಯಾತ್ರೆ ನಿಲ್ಲಿಸಲು ಇನ್ನೊಂದು ಜನ್ಮ ಎತ್ತಿ ಬರಬೇಕು. ಯಾರು ಬೇಕಾದ್ರೂ ನಮ್ಮನ್ನ ಬಂಧಿಸಲಿ. ನನ್ನನ್ನ ಬಂಧಿಸಲಿ, ಸಿದ್ದರಾಮಯ್ಯರನ್ನ, ಶಾಸಕರನ್ನ ಬಂಧಿಸಲಿ. ಕೊವಿಡ್ ರೂಲ್ಸ್ಗೆ ನಾವು ಗೌರವ ಕೊಡುತ್ತಿದ್ದೇವೆ. ಇಂದು MLCಗಳ ಪ್ರತಿಜ್ಞಾವಿಧಿ ಕಾರ್ಯಕ್ರಮದಲ್ಲಿ ರೂಲ್ಸ್ ಬ್ರೇಕ್ ಆಗಿದೆ. ಗೃಹ ಸಚಿವರು ಏನು ಮಾಡ್ತಿದ್ದಾರೆ, ಇವರ ಮೇಲೆ ಕೇಸ್ ಹಾಕಿದ್ರಾ? ನಮ್ಮನ್ನ ಹೆದರಿಸುತ್ತಿದ್ದಾರಾ? ಯಾವುದೇ ಗೊಡ್ಡು ಬೆದರಿಕೆಗೆ ಬಗ್ಗಲ್ಲ ಎಂದು ಕಿಡಿಕಾರಿದ್ದಾರೆ.