
ಸತೀಶ್ ಜಾರಕಿಹೊಳಿ
ಬೆಳಗಾವಿ: ಕೋವಿಡ್ ಸೋಂಕು ಕಡಿಮೆಯಾದ ನಂತರ ಮೇಕೆದಾಟು ಹೋರಾಟದ ರೀತಿಯಲ್ಲೇ ಕಾಂಗ್ರೆಸ್ ಮಹದಾಯಿ ಯೋಜನೆ ಜಾರಿಗಾಗಿಯೂ ಪಾದಯಾತ್ರೆ ಮಾಡಲು ಯೋಜನೆ ರೂಪಿಸಿದೆ.
ಮೇಕೆದಾಟು ಹೋರಾಟದ ಮಾದರಿಯಲ್ಲಿ ಮಹದಾಯಿಗಾಗಿಯೂ ಪಾದಯಾತ್ರೆ ನಡೆಸಲು ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಹದಾಯಿ ಹೋರಾಟವನ್ನು ಎಲ್ಲಿಂದ ಆರಂಭ ಮಾಡಬೇಕು ಎಂಬುವುದನ್ನು ಪಕ್ಷದ ನಾಯಕರೊಂದಿಗೆ ಚರ್ಚಿಸಿ, ರೂಪುರೇಷೆ ತಯಾರಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು.
ಮೇಕೆದಾಟು ಯೋಜನೆಸಂಬಂಧ ಕಾಂಗ್ರೆಸ್ ವತಿಯಿಂದ ಈಗಾಗಲೇ ಹೋರಾಟ ಮಾಡಿ ಸರ್ಕಾರದ ಗಮನ ಸೆಳೆಯಲಾಗಿದೆ. ಮೇಕೆದಾಟು ಹೋರಾಟ ಅರ್ಧಕ್ಕೆ ನಿಂತಿಲ್ಲ, ಹೋರಾಟ ಯಶಸ್ವಿಯಾಗಿದೆ ಎಂದರು.
ಇದನ್ನೂ ಓದಿ: ಮೇಕೆದಾಟು ಕುರಿತು ಯೋಜನೆ ಕುರಿತು ಮೇಧಾ ಪಾಟ್ಕರ್, ನಟ ಚೇತನ್ ಗೆ ಮನವರಿಕೆ: ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್
ಹಲವು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹದಾಯಿ ಯೋಜನೆಗಾಗಿ ನರಗುಂದದಿಂದ ಮಹದಾಯಿ ಉಗಮ ಸ್ಥಾನವಾದ ಕಣಕುಂಬಿ ವರೆಗೆ ಪಾದಯಾತ್ರೆ ನಡೆಸಲು ಕಾಂಗ್ರೆಸ್ ಯೋಜನೆ ರೂಪಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ಹೊಸ ವರ್ಚಸ್ಸು ನೀಡುವ ಉದ್ದೇಶ ಕಾಂಗ್ರೆಸ್‌ಗಿದೆ.
ಗೋವಾದ ತಕರಾರಿಗೆ ಸೊಪ್ಪು ಹಾಕದೆ ಮಹದಾಯಿ ಯೋಜನೆ ಜಾರಿಗೊಳಿಸುವಂತೆ ಒತ್ತಡ ಹೇರುವುದು, ತನ್ಮೂಲಕ ಉತ್ತರ ಕರ್ನಾಟಕದಲ್ಲಿ ಪಕ್ಷಕ್ಕೆ ವರ್ಚಸ್ಸು ನೀಡಲು ಈ ಯಾತ್ರೆ ನಡೆಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ.