ಮತ್ತೆ ಸುದ್ದಿಯಲ್ಲಿ ಮೊಹಮ್ಮದ್ ಹ್ಯಾರಿಸ್ ನಲಪಾಡ್: ಬಳ್ಳಾರಿ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷನ ಮೇಲೆ ನಲಪಾಡ್ ಬೆಂಬಲಿಗರಿಂದ ಹಲ್ಲೆ ಆರೋಪ
ರಾಜ್ಯ ಯುವ ಕಾಂಗ್ರೆಸ್ ಘಟಕದ(Karnataka youth congress) ನಿಯೋಜಿತ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಮತ್ತೊಮ್ಮೆ ಸುದ್ದಿಯಾಗಿದ್ದಾರೆ.
Published: 20th January 2022 12:45 PM | Last Updated: 20th January 2022 12:47 PM | A+A A-

ಮೊಹಮ್ಮದ್ ಹ್ಯಾರಿಸ್ ನಲಪಾಡ್
ಬಳ್ಳಾರಿ: ರಾಜ್ಯ ಯುವ ಕಾಂಗ್ರೆಸ್ ಘಟಕದ(Karnataka youth congress) ನಿಯೋಜಿತ ಅಧ್ಯಕ್ಷ ಮೊಹಮ್ಮದ್ ಹ್ಯಾರಿಸ್ ನಲಪಾಡ್(Mohammed Harris Nalapad) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನಲಪಾಡ್ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಗ್ರಾಮೀಣ ಯುವ ಕಾಂಗ್ರೆಸ್ ಅಧ್ಯಕ್ಷ ಸಿದ್ಧು ಹಳ್ಳೇಗೌಡ ಮತ್ತು ಅವರ ಬೆಂಬಲಿಗರ ಮೇಲೆ ಮೊಹಮ್ಮದ್ ನಲಪಾಡ್ ಬೆಂಬಲಿಗರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ವಾಟ್ಸಾಪ್ ಸಂದೇಶಗಳು ಹರಿದಾಡಿದವು.
ನಿನ್ನೆ ತಡರಾತ್ರಿ ಬೆಂಗಳೂರಿನ ಯಲಹಂಕದ (Yelahanka) ಕ್ಲಬ್ ನಲ್ಲಿ ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ಸಿದ್ದು ಕಾಂಗ್ರೆಸ್ ನಾಯಕರಿಗೆ ದೂರು ನೀಡಿದ್ದಾರೆ ಎಂಬ ಸುದ್ದಿ ವೇಗವಾಗಿ ಹಬ್ಬಿಕು. ನಂತರ ಮಾಧ್ಯಮಗಳಲ್ಲಿ ವರದಿ ಬರುತ್ತಿದ್ದಂತೆ ಯೂಟರ್ನ್ ಹೊಡೆದ ಸಿದ್ದು ಹಳ್ಳೇಗೌಡ, ನನ್ನ ಮೇಲೆ ಯಾವುದೇ ಹಲ್ಲೆಯಾಗಿಲ್ಲ, ಮೊಹಮ್ಮದ್ ನಲಪಾಡ್ ಬೆಂಬಲಿಗರು ಏನೂ ಮಾಡಿಲ್ಲ, ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಸಂದೇಶ ಬಗ್ಗೆ ನನಗೇನೂ ಗೊತ್ತಿಲ್ಲ ಎನ್ನುತ್ತಿದ್ದಾರೆ.
ಸಿದ್ಧು ಹಳ್ಳೇಗೌಡ ಈಗ ಹೇಳುತ್ತಿರುವುದೇನು?: ಕಳೆದ ರಾತ್ರಿ ಜೆಡಬ್ಲ್ಯು ಮ್ಯಾರೇಟ್ ಹೋಟೆಲ್ ಹೋಗಿದ್ದು ನಿಜ, ಅಲ್ಲಿ ಯುವ ಕಾಂಗ್ರೆಸ್ ಪೂರ್ವಭಾವಿ ಸಭೆ ಮುಗಿಸಿಕೊಂಡು ಹೊರಟೆ. ಆದರೆ ಆನಂತರ ನಲಪಾಡ್ ಕಡೆಯವರು ನನಗೆ ಬೆದರಿಕೆ ಯಾವುದೇ ಹಾಕಿಲ್ಲ. ವಾಟ್ಸಪ್ ನಲ್ಲಿ ಹರಿದಾಡುತ್ತಿರುವ ಫೋಟೋ ನನ್ನದಲ್ಲ. ನಾನು ಚೆನ್ನಾಗಿಯೇ ಇದ್ದೇನೆ. ಯಾಕೆ ಈ ರೀತಿ ಸುದ್ದಿ ಹಬ್ಬಿದೆಯೋ ಗೊತ್ತಿಲ್ಲ. ನಾನೇ ಸುದ್ದಿ ಹಬ್ಬಿಸಿರೋದೇ ಆಗಿದ್ದರೆ ನನ್ನ ಹೆಸರು, ಡಿಸಿಗ್ನೇಷನ್ ಸಹಿತ ಮೆಸೇಜ್ ಮಾಡಿ ಹರಿಬಿಡುತ್ತಿರಲಿಲ್ಲ. ಇದೆಲ್ಲ ಸುಳ್ಳು ಎಂದಿದ್ದಾರೆ.
ಕಾಂಗ್ರೆಸ್ ಯುವ ಕಾಂಗ್ರೆಸ್ ಅಧ್ಯಕ್ಷರಾಗಿರುವ ರಕ್ಷಾ ರಾಮಯ್ಯ(Raksha Ramaiah) ಅಧಿಕಾರಾವಧಿ ಇದೇ ತಿಂಗಳ 30ಕ್ಕೆ ಮುಕ್ತಾಯವಾಗಲಿದೆ. ಕಾಂಗ್ರೆಸ್ ನಲ್ಲಿ ಆದ ಒಪ್ಪಂದದ ಪ್ರಕಾರ ನಂತರ ಮೊಹಮ್ಮದ್ ನಲಪಾಡ್ ಗೆ ಅಧಿಕಾರ ಹಸ್ತಾಂತರವಾಗಬೇಕಿದೆ. ಈ ಹಿನ್ನೆಲೆಯಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರ ಸಭೆ ಕರೆದು ಮೊಹಮ್ಮದ್ ನಲಪಾಡ್ ಖಾಸಗಿ ಹೊಟೇಲ್ ನಲ್ಲಿ ನಿನ್ನೆ ಮಧ್ಯಾಹ್ನ ಸಭೆ ಆಯೋಜಿಸಿ ರಾತ್ರಿ ಯಲಹಂಕದ ಕ್ಲಬ್ ನಲ್ಲಿ ಔತಣಕೂಟಕ್ಕೆ ಏರ್ಪಡಿಸಿದ್ದರು. ಸಭೆಯಲ್ಲಿ ಜಿಲ್ಲೆಗಳ ಮುಖಂಡರು ಭಾಗವಹಿಸಿದ್ದರು. ಊಟ ಮುಗಿದ ಮೇಲೆ ಎರಡು ಗುಂಪುಗಳ ಮಧ್ಯೆ ಮಾತಿಗೆ ಮಾತು ಬೆಳೆದು ಗಲಭೆಯುಂಟಾಗಿದೆ ಎಂದು ಹೇಳಲಾಗುತ್ತಿದೆ.