
ಎಚ್.ಕೆ ಕುಮಾರಸ್ವಾಮಿ
ಬೆಂಗಳೂರು: ಇತ್ತೀಚೆಗೆ ನಡೆದ ಹಲವು ಉಪ ಚುನಾವಣೆಗಳಲ್ಲಿ ನಿರಂತರ ಸೋಲು ಕಂಡ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವನ್ನು ಬಲ ಪಡಿಸಲು ನಿರ್ಧರಿಸಿದೆ.
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಕೆ ಕುಮಾರಸ್ವಾಮಿ ಮತ್ತು ವಿಧಾನಸಭೆ ಉಪನಾಯಕ ಬಂಡೆಪ್ಪ ಕಾಶೆಂಪೂರ್ ಸೇರಿದಂತೆ ಹಲವರು ನಗರದ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪಕ್ಷದ ವಿವಿಧ ಹುದ್ದೆಗಳನ್ನು ಅಲಂಕರಿಸಿರುವ ನಾಯಕರು ಉತ್ತಮ ಫಲಿತಾಂಶ ನೀಡಲು ವಿಫಲವಾಗಿರುವ ಹಿನ್ನೆಲೆಯಲ್ಲಿ ಅವರನ್ನೆಲ್ಲಾ ಕಿತ್ತೊಗೆಯಲು ನಿರ್ಧರಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಕೇವಲ ಇನ್ನೂ 15 ತಿಂಗಳು ಬಾಕಿ ಇದ್ದು ಪಕ್ಷವನ್ನು ಸಮರ್ಥವಾಗಿಸಲು ದಿನನಿತ್ಯದ ಕಾರ್ಯಚಟುವಟಿಕೆಗಳು ಮತ್ತು ಸವಾಲುಗಳನ್ನು ಎದುರಿಸಲು ಕೋರ್ ಕಮಿಟಿಯನ್ನು ನೇಮಿಸಲಿದೆ.
ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ. ಹೊಸದಾಗಿ ನೇಮಕಗೊಂಡವರ ಪಟ್ಟಿಯನ್ನು ಸುಮಾರು ಒಂದು ವಾರದ ನಂತರ ಹೊರತರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಕರ್ನಾಟಕ ಸ್ಥಳೀಯ ಸಂಸ್ಥೆ ಚುನಾವಣೆ: ಕಾಂಗ್ರೆಸ್ ಆರ್ಭಟ, ಮಂಕಾದ ಬಿಜೆಪಿ, ಎರಡಂಕಿಯಲ್ಲಿ ಜೆಡಿಎಸ್
ಪಕ್ಷವನ್ನು ಬಲಪಡಿಸಲು ಹಾಗೂ ಅಧಿಕಾರಕ್ಕೆ ತರಲು ಕಳೆದ ಕೆಲವು ವಾರಗಳಿಂದ ಜೆಡಿಎಸ್ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲುವುದಾಗಿ ಜೆಡಿಎಸ್ ಘೋಷಿಸಿತ್ತು.
ಜನವರಿ 26 ರಂದು 'ಜನತಾ ಜಲಧಾರೆ' ಅಭಿಯಾನವನ್ನು ನಡೆಸಲು ಯೋಜಿಸಿದ್ದ ಜೆಡಿಎಸ್, ಕೋವಿಡ್ ಪರಿಸ್ಥಿತಿಯಿಂದಾಗಿ ಕಾರ್ಯಕ್ರಮವನ್ನು ಮುಂದೂಡಿದೆ. ಪಕ್ಷವು ಪರಿಸ್ಥಿತಿಗೆ ಅನುಗುಣವಾಗಿ ನಿರ್ಧಾರ ಕೈಗೊಳ್ಳಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ಕೆ ಕುಮಾರಸ್ವಾಮಿ ಹೇಳಿದರು.
ಜನತಾ ಪಕ್ಷದ ಹೊಸ ಅಧ್ಯಕ್ಷೆಯಾಗಿ ಬಿಟಿ ಲಲಿತಾ ನಾಯಕ್ ನೇಮಕಗೊಂಡಿದ್ದಾರೆ. ನೇಗಿಲು ಹೊತ್ತ ರೈತ ಈ ಪಕ್ಷದ ಚಿಹ್ನೆಯಾಗಿದೆ. ಜಯಪ್ರಕಾಶ್ ಬಂಧು ಇದರ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಬೇರೆ ಪಕ್ಷಗಳ ಜೊತೆ ಕೈಜೋಡಿಸುವ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ಲಲಿತಾ ನಾಯಕ್ ತಿಳಿಸಿದ್ದಾರೆ.