2023 ಕರ್ನಾಟಕ ವಿಧಾನಸಭೆ ಚುನಾವಣೆಗೆ ಸಿದ್ಧತೆ ಪ್ರಾರಂಭಿಸಿದ ಬಿಜೆಪಿ: ಮುಂದಿನ ದಿನಗಳಲ್ಲಿ ಮಹತ್ವದ ಬದಲಾವಣೆ?
ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಬಿಜೆಪಿ ಶ್ರಮಿಸುತ್ತಿದೆ. ಉತ್ತರ ಪ್ರದೇಶ ಚುನಾವಣೆ ನಂತರ ದೆಹಲಿಯ ಪಕ್ಷದ ನಾಯಕರು ಕರ್ನಾಟಕದತ್ತ ಗಮನ ಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Published: 21st January 2022 01:18 PM | Last Updated: 21st January 2022 01:18 PM | A+A A-

ಬಸವರಾಜ ಬೊಮ್ಮಾಯಿ
ಬೆಂಗಳೂರು: ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಪಕ್ಷವನ್ನು ತಳಮಟ್ಟದಲ್ಲಿ ಬಲಪಡಿಸಲು ಬಿಜೆಪಿ ಶ್ರಮಿಸುತ್ತಿದೆ. ಉತ್ತರ ಪ್ರದೇಶ ಚುನಾವಣೆ ನಂತರ ದೆಹಲಿಯ ಪಕ್ಷದ ನಾಯಕರು ಕರ್ನಾಟಕದತ್ತ ಗಮನ ಹರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಬಿಎಂಪಿ ಚುನಾವಣೆ ಸೇರಿದಂತೆ ಮುಂಬರುವ ಚುನಾವಣೆಗಳಿಗೆ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಸಚಿವರು ಮತ್ತು ಶಾಸಕರು ಹಾಗೂ ವಿವಿಧ ಮಂಡಳಿಗಳು ಮತ್ತು ನಿಗಮಗಳ ಮುಖ್ಯಸ್ಥರು ಬೇಡಿಕೆಯಿಡುತ್ತಿದ್ದಾರೆ.
ಕರ್ನಾಟಕದಲ್ಲಿ ಪಕ್ಷವನ್ನು ಹೇಗೆ ಬಲಪಡಿಸಬೇಕು ಎಂಬುದರ ಕುರಿತು ಚರ್ಚಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಜೆಪಿಯ ಇತರ ಹಿರಿಯ ನಾಯಕರೊಂದಿಗೆ ಬುಧವಾರ ತಡರಾತ್ರಿ ಸಭೆ ನಡೆಸಿದ್ದು, ಪ್ರತಿ ಜಿಲ್ಲೆಗೆ ರೂಟ್ ಮ್ಯಾಪ್ ಅನ್ನು ರೂಪಿಸುತ್ತಿದ್ದಾರೆ ಎಂದು ವರದಿಯಾಗಿದೆ. ಬೆಂಗಳೂರು ಹೊರತುಪಡಿಸಿ ವಿವಿಧ ಜಿಲ್ಲೆಗಳಲ್ಲಿ ಪಕ್ಷವನ್ನು ಬಲಪಡಿಸುವ ಸಂಬಂಧ ಚರ್ಚಿಸಲು ಸಭೆ ನಡೆಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.
2023ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಬೂತ್ ಮಟ್ಟದಲ್ಲಿ ಸೂಕ್ಷ್ಮ ನಿರ್ವಹಣೆಗೆ ಒತ್ತು ನೀಡಲು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿಸಭೆ ನಿರ್ಧರಿಸಿದೆ.
ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಕೇವಲ ಒಂದು ವರ್ಷ ಬಾಕಿ ಉಳಿದಿದ್ದು, ಶಾಸಕರು ಮತ್ತು ಸಚಿವರು ತಮ್ಮ ನಿಷ್ಠಾವಂತರಿಗೆ ಮಂಡಳಿ ಮತ್ತು ನಿಗಮದ ಉನ್ನತ ಹುದ್ದೆಗಳನ್ನು ಪಡೆಯಲು ಉತ್ಸುಕರಾಗಿದ್ದಾರೆ ಮತ್ತು ಪಕ್ಷದ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಹಿಂದೆ ಅಧ್ಯಕ್ಷರನ್ನಾಗಿ ನೇಮಿಸಿಕೊಂಡವರನ್ನು ಮುಂದುವರಿಸಿಕೊಂಡು ಹೋಗಬೇಕೆಂಬ ಒತ್ತಡಗಳು ಕೇಳಿ ಬರುತ್ತಿವೆ. ಮೂಲಗಳ ಪ್ರಕಾರ, ಕರ್ನಾಟಕ ರೂರಲ್ ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್ ಲಿಮಿಟೆಡ್ನ ಅಧ್ಯಕ್ಷ ಎಂ.ರುದ್ರೇಶ್ ಸೇರಿದಂತೆ 32 ಮಂಡಳಿಗಳು ಮತ್ತು ನಿಗಮಗಳ ಪೈಕಿ 20 ಅಧ್ಯಕ್ಷರನ್ನು ಬದಲಾಯಿಸುವ ಸಾಧ್ಯತೆಯಿದೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಅವರ ಆಪ್ತ ಸಂಬಂಧಿಯೊಬ್ಬರು ತಿಳಿಸಿದ್ದಾರೆ.
ಮುಂಬರುವ ಬಿಬಿಎಂಪಿ ಚುನಾವಣೆಗೆ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡುವಂತೆ ಬೆಂಗಳೂರಿನ ಶಾಸಕರು ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 27 ವಿಧಾನಸಭಾ ಕ್ಷೇತ್ರಗಳಿವೆ, ಬಿಜೆಪಿಗೆ ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲುವುದು ಮುಖ್ಯವಾಗಿದೆ. ಇದಕ್ಕಾಗಿ ಅವರಿಗೆ ಕೌನ್ಸಿಲರ್ಗಳ ಬೆಂಬಲ ಬೇಕು ಹೀಗಾಗಿ ಪ್ರಮುಖ ಹುದ್ದೆಗಳಲ್ಲಿ ತಮ್ಮ ಬೆಂಬಲಿತ ಕಾರ್ಯಕರ್ತರು ಸ್ಪರ್ಧಿಸಬೇಕೆಂಬದು ಅವರ ಒತ್ತಾಯವಾಗಿದೆ ಎಂದು ಮೂಲಗಳು ತಿಳಿಸಿವೆ.