ನಿಗಮ, ಮಂಡಳಿಗಳಿಗೆ ನೇಮಕಾತಿ ಪ್ರಸ್ತಾಪ ನನ್ನ ಮುಂದಿಲ್ಲ: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ನಿಗಮ ಹಾಗೂ ಮಂಡಳಿಗಳಿಗೆ ನೇಮಕಾತಿ ಕುರಿತು ಪಕ್ಷದಲ್ಲಿ ನಡೆಯುವ ಚರ್ಚೆಯ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದ್ದಾರೆ.
Published: 24th January 2022 05:17 PM | Last Updated: 24th January 2022 05:17 PM | A+A A-

ಸಿಎಂ ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ನಿಗಮ ಹಾಗೂ ಮಂಡಳಿಗಳಿಗೆ ನೇಮಕಾತಿ ಕುರಿತು ಪಕ್ಷದಲ್ಲಿ ನಡೆಯುವ ಚರ್ಚೆಯ ಮೇಲೆ ಅವಲಂಬಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೋಮವಾರ ಹೇಳಿದ್ದಾರೆ.
ನಳಿನ್ ಕುಮಾರ್ ಕಟೀಲ್ ಅವರು ಮುಂದಿನ ವಾರ ನಿಗಮ ಮತ್ತು ಮಂಡಳಿಗಳಿಗೆ ನೇಮಕಾತಿ ಆಗಲಿದೆ ಎಂದು ಹೇಳಿಕೆ ನೀಡಿರುವ ಬಗ್ಗೆ ಇಂದು ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಇದು ಪಕ್ಷದ ಮೇಲೆ ಅವಲಂಬಿಸಿದೆ. ಅದರ ಆಧಾರದ ಮೇಲೆ ಮುಂದಿನ ಕ್ರಮ ವಹಿಸಲಾಗುವುದು ಎಂದರು. ನಿಗಮ, ಮಂಡಳಿಗಳ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ಮುಂದೆ ಯಾವುದೇ ಪ್ರಸ್ತಾವನೆ ಇಲ್ಲ. ಪಕ್ಷದವರು ಪರಾಮರ್ಶೆ ಮಾಡಿ ವರದಿ ನೀಡುತ್ತಾರೆ. ಅದರ ಆಧಾರಾದ ಮೇಲೆ ಕ್ರಮ ವಹಿಸಲಾಗುವುದು ಎಂದರು.
ಇದನ್ನು ಓದಿ: ಚಿಂತನಾ ಭೈಠಕ್ ನಲ್ಲಿ ಅಮಿತ್ ಶಾ?: 'ಸೋಮಾರಿ' ನಾಯಕರಿಗೆ ಗೇಟ್ ಪಾಸ್; ಸಂಕ್ರಾಂತಿ ನಂತರ ಸರ್ಕಾರದಲ್ಲಿ ಬದಲಾವಣೆ ಪರ್ವ!
ಆಯವ್ಯಯಕ್ಕೆ ಸಿದ್ಧತೆ
ರಾಜ್ಯದ ಬಜೆಟ್ ಸಿದ್ಧತೆಗಳು ಪ್ರಾರಂಭವಾಗಿದೆ. ಡಿಸೆಂಬರ್ ಮಾಹೆಯಲ್ಲಿ ಹಣಕಾಸು ಹಾಗೂ ಆದಾಯ ಬರುವ ಇಲಾಖೆಗಳೊಂದಿಗೆ ಆಂತರಿಕ ಸಭೆಗಳನ್ನು ನಡೆಸಲಾಗಿದ್ದು, ಗುರಿಗಳನ್ನು ತಲುಪಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಸೂಚನೆ ನೀಡಲಾಗಿದೆ. ಡಿಸೆಂಬರ್ ಅಂತ್ಯದಿಂದ ಕೋವಿಡ್ ಬಂದಿರುವ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯೊಂದಿಗೆ ಮತ್ತೊಂದು ಸಭೆಯನ್ನು ಇದೇ 25ರಂದು ಮಾಡಲಿದ್ದೇನೆ. ನಂತರ ಎಲ್ಲಾ ಇಲಾಖೆಗಳ ಪ್ರಸ್ತಾವನೆಗಳು, ಸಂಘ ಸಂಸ್ಥೆಗಳ ಬಗ್ಗೆ ಚರ್ಚೆ ಮಾಡಿ ಬಜೆಟ್ ಸಿದ್ಧಪಡಿಸಲಾಗುವುದು ಎಂದರು.
ಕೋವಿಡ್ ಸ್ಥಿತಿಗತಿ
ಕೋವಿಡ್ ಬಗ್ಗೆ ಈಗಾಗಲೇ ಹಲವು ನಿರ್ಣಯಗಳನ್ನು ಕೈಗೊಂಡಿದ್ದು, ವಾರಾಂತ್ಯದ ಕರ್ಫ್ಯೂ ಹಿಂಪಡೆಯಲಾಗಿದೆ. ನಮ್ಮ ರಾಜ್ಯದಲ್ಲಿ ಕೋವಿಡ್ ಯಾವ ರೀತಿ ಮುಂದುವರಿದಿದೆ, ಸೋಂಕಿತರ ಸ್ಥಿತಿಗತಿ ಏನು ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಪರಿಸ್ಥಿತಿ ಅವಲೋಕಿಸಿ ಯಾವುದೇ ತೀರ್ಮಾನಕ್ಕೆ ಬರಲಾಗುವುದು. ನಾಲ್ಕು ದಿನಗಳಿಂದ ಉಡುಪಿ ಕಾಲೇಜಿನಲ್ಲಿ ಆಗುತ್ತಿರುವ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಈ ಬಗ್ಗೆ ಶಿಕ್ಷಣ ಸಚಿವರಿಗೆ ಪರಿಶೀಲಿಸಲು ಸೂಚಿಸಲಾಗಿದೆ ಎಂದರು.