ಉಸ್ತುವಾರಿ ಸಚಿವ ಹೊಣೆಗಾರಿಕೆಯಲ್ಲಿ ಯಾರೂ ಅಸಮಾಧಾನಗೊಂಡಿಲ್ಲ, ಎಲ್ಲರ ಜೊತೆ ಚರ್ಚಿಸಿಯೇ ನಿರ್ಧಾರಕ್ಕೆ ಬಂದಿದ್ದು: ಸಿಎಂ ಬಸವರಾಜ ಬೊಮ್ಮಾಯಿ
ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸಿರುವುದರಲ್ಲಿ ಯಾವ ಸಚಿವರುಗಳಿಗೂ ಅಸಮಾಧಾನವಿಲ್ಲ, ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ, ಎಲ್ಲರ ಜೊತೆ ನಾನು ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
Published: 25th January 2022 12:24 PM | Last Updated: 25th January 2022 01:22 PM | A+A A-

ಸಿಎಂ ಬಸವರಾಜ ಬೊಮ್ಮಾಯಿ
ಬೆಂಗಳೂರು: ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆ ವಹಿಸಿರುವುದರಲ್ಲಿ ಯಾವ ಸಚಿವರುಗಳಿಗೂ ಅಸಮಾಧಾನವಿಲ್ಲ, ಯಾರೂ ಕೂಡ ಅಸಮಾಧಾನ ವ್ಯಕ್ತಪಡಿಸಿಲ್ಲ, ಎಲ್ಲರ ಜೊತೆ ನಾನು ಮಾತನಾಡಿದ್ದೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ನಮ್ಮದು ರಾಷ್ಟ್ರೀಯ ಪಕ್ಷ, ರಾಷ್ಟ್ರೀಯ ಮಟ್ಟದಲ್ಲಿ ನೀತಿಯಡಿಯಲ್ಲಿ ಹೈಕಮಾಂಡ್ ಮತ್ತು ಎಲ್ಲರ ಜೊತೆ ಚರ್ಚಿಸಿ ಜಿಲ್ಲೆಗಳ ಉಸ್ತುವಾರಿ ಹೊಣೆಯನ್ನು ಸಚಿವರುಗಳಿಗೆ ವಹಿಸಲಾಗಿದೆ. ಇದು ತಮ್ಮ ನಿರ್ಧಾರವಲ್ಲ, ಎಲ್ಲವೂ ಹೈಕಮಾಂಡ್ ನಿರ್ಧಾರ ಎಂದು ದೆಹಲಿಯತ್ತ ಬೊಟ್ಟು ಮಾಡಿ ತೋರಿಸಿದ್ದಾರೆ. ಈ ಮೂಲಕ ಮಾಧ್ಯಮಗಳಲ್ಲಿ ನಿನ್ನೆಯಿಂದ ಬರುತ್ತಿರುವ ಅಸಮಾಧಾನದ ಹೊಗೆಯನ್ನು ಶಮನಗೊಳಿಸುವ ಪ್ರಯತ್ನವನ್ನು ಸಿಎಂ ಬೊಮ್ಮಾಯಿ ಮಾಡುತ್ತಿರುವಂತೆ ಕಾಣುತ್ತಿದೆ.
ಎಲ್ಲ ಸಚಿವರ ಬಳಿಯೂ ನಾನು ಮಾತನಾಡಿದ್ದೇನೆ, ನಾವೆಲ್ಲರೂ ಒಂದಾಗಿ ಒಗ್ಗಟ್ಟಾಗಿದ್ದೇವೆ. ಸರ್ಕಾರದ ಪರವಾಗಿ ಸೂಕ್ತವಾಗಿ ಜನರ ಪರವಾಗಿ ಕೆಲಸ ಮಾಡಲು ಬದ್ಧರಾಗಿದ್ದೇವೆ. ಗೊಂದಲ, ಅಸಮಾಧಾನ ಎಂಬ ಸುದ್ದಿಗಳೆಲ್ಲ ವಾಸ್ತವಕ್ಕೆ ದೂರ ಎಂದು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.
ಕಾಂಗ್ರೆಸ್ ಗೆ ಅಭದ್ರತೆ ಕಾಡುತ್ತಿದೆ: ಕಾಂಗ್ರೆಸ್ ನಾಯಕರಿಗೆ ಅಭದ್ರತೆ ಕಾಡುತ್ತಿದೆ, ಹೀಗಾಗಿ ಬಿಜೆಪಿಯಿಂದ ಅವರಿವರು ವಲಸೆ ಬರುತ್ತಿದ್ದಾರೆ ಎಂದು ಸುಳ್ಳು ಹೇಳಿಕೆಗಳನ್ನು ನೀಡುತ್ತಾರೆ. ಕಾಂಗ್ರೆಸ್ ಬೇಡವೇ ಬೇಡ ಎಂದು ಬಿಜೆಪಿಗೆ ಬಂದಿದ್ದಾರೆ. ಹೀಗಾಗಿ ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಗೆ ವಲಸೆ ಹೋಗುವುದಿಲ್ಲ. ಈಗ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಗ್ಗೆ ವ್ಯಾಖ್ಯಾನ ಕೊಡುವುದಿಲ್ಲ, ಕೆಲವೇ ದಿನಗಳಲ್ಲಿ ರಾಜ್ಯದ ಜನತೆಗೆ ರಾಜಕೀಯ ಬೆಳವಣಿಗೆ ಗೊತ್ತಾಗಲಿದೆ ಎಂದು ಸಿಎಂ ಕುತೂಹಲ ಕೆರಳಿಸುವ ಮಾತುಗಳನ್ನು ಕೂಡ ಹೇಳಿದರು.
ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ನೇಮಕ: ಕಲ್ಯಾಣ ಕರ್ನಾಟಕ ಭಾಗಕ್ಕೆ ಹೊರಗಿನವರ ನೇಮಕ ಕುರಿತು ಅಸಮಾಧಾನ
ಈಗಾಗಲೇ ಹಲವು ನಾಯಕರು ತಮಗೆ ನೀಡಿರುವ ಜಿಲ್ಲಾ ಉಸ್ತುವಾರಿ ಜವಾಬ್ದಾರಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಎಂಟಿಬಿ ನಾಗರಾಜ್ ಬೆಂಗಳೂರು ಗ್ರಾಮಾಂತರ ಜಿಲ್ಲೆ ಉಸ್ತುವಾರಿ ಸಿಗದಿರುವುದಕ್ಕೆ, ಸಚಿವ ಮಾಧುಸ್ವಾಮಿ ತುಮಕೂರು ಜಿಲ್ಲೆ ಉಸ್ತುವಾರಿ ಸಿಗದಿದ್ದಕ್ಕೆ, ಡಾ ಕೆ ಸುಧಾಕರ್ ಚಿಕ್ಕಬಳ್ಳಾಪುರ ಜಿಲ್ಲೆಯ ಉಸ್ತುವಾರಿ ಸಿಗದಿರುವುದಕ್ಕೆ ಈಗಾಗಲೇ ಅಸಮಾಧಾನ ಹೊರಹಾಕಿದ್ದಾರೆ.
ತುಮಕೂರು ಜಿಲ್ಲೆ ಕೈತಪ್ಪಿ ಹೋಗಿರುವುದಕ್ಕೆ ನನಗೆ ಬೇಸರವಿದೆ, ತುಮಕೂರು ನನ್ನ ತವರು ಜಿಲ್ಲೆ, ಅಲ್ಲಿಯ ಬಗ್ಗೆ ನನಗೆ ತಿಳಿದಿದೆ, ಕೆಲಸ ಮಾಡಲು ಅನುಕೂಲವಾಗುತ್ತದೆ. ಕೆಲಸದ ವಿಷಯದಲ್ಲಿ ರಾಜಿಯಿಲ್ಲ, ಬೇರೆ ಕಡೆ ಹೋಗಿ ಯಜಮಾನಿಕೆ ಮಾಡಲು ಇಚ್ಛೆಯಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಇನ್ನು ಸಚಿವ ಎಂಟಿಬಿ ನಾಗರಾಜ್ ಬಹಿರಂಗವಾಗಿಯೇ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ನಾನು ಬೆಂಗಳೂರು ಗ್ರಾಮಾಂತರ ಜಿಲ್ಲೆ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೆ, ನನಗೆ ಚಿಕ್ಕಬಳ್ಳಾಪುರ ಜಿಲ್ಲೆ ಕೊಟ್ಟುಬಿಟ್ಟಿದ್ದಾರೆ. ಕೆಲಸ ಮಾಡಬೇಕು, ನನ್ನ ಮನಸ್ಸಿನಲ್ಲಿದ್ದದ್ದನ್ನು ಸಿಎಂಗೆ ಹೇಳಿದ್ದೇನೆ, ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ತೆಗೆದುಕೊಳ್ಳಲಿ, ಸಚಿವ ಸ್ಥಾನದಿಂದ ತೆಗೆದು ಬೇರೆ ಹುದ್ದೆ ಕೊಟ್ಟರೂ ಕೆಲಸ ಮಾಡುತ್ತೇನೆ, ಬಿಜೆಪಿ ಬಿಟ್ಟು ಹೋಗುವುದಿಲ್ಲ, ರಾಜಕೀಯ ನಿವೃತ್ತಿ ಪಡೆಯುತ್ತೇನೆ ಹೊರತು ಪಕ್ಷ ಬಿಟ್ಟು ಹೋಗಲ್ಲ ಎಂದು ಹೇಳಿದ್ದಾರೆ.
ಇನ್ನು ಅಸಮಾಧಾನಿತ ಸಚಿವರಿಗೆ ಹಿರಿಯ ಸಚಿವರುಗಳಾದ ಕೆ ಎಸ್ ಈಶ್ವರಪ್ಪ, ವಿ ಸೋಮಣ್ಣ ಟಾಂಗ್ ಕೊಟ್ಟಿದ್ದಾರೆ. ದೇವರ ಪಲ್ಲಕ್ಕಿ ಹೊರುವವರಿಗೆ ಎಲ್ಲಿಯಾದರೇನು ಎಂದು ಸಚಿವ ಈಶ್ವರಪ್ಪನವರು ಹೇಳಿದರೆ, ಮೂಟೆ ಹೊರುವವರು ಎಲ್ಲಿ ಬೇಕಾದರೂ ಹೊರಬಹುದು, ನಾನು ಕೂಡ ಬೆಂಗಳೂರು ಕೇಳಿದ್ದೆ, ಸಿಗಲಿಲ್ಲ, ಹಾಗೆಂದು ಅಸಮಾಧಾನ ಮಾಡಿಕೊಂಡು ಕೂತರೆ ಆಗುವುದಿಲ್ಲ. ಸಿಎಂ ಜೊತೆ ಕೈಜೋಡಿಸಿ ಕೆಲಸ ಮಾಡಬೇಕು ಎಂದು ವಿ ಸೋಮಣ್ಣ ಹೇಳಿದ್ದಾರೆ.