ಎಂ.ಬಿ.ಪಾಟೀಲ್'ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ: ಲಿಂಗಾಯತ ಸಮುದಾಯದ ಬೆಂಬಲ ಪಡೆಯಲು ಕಾಂಗ್ರೆಸ್ ತಂತ್ರ!
ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ನಡೆಯಲಿರುವ ಸರಣಿ ಚುನಾವಣೆಗೆ ತಂತ್ರ ರೂಪಿಸಲು ಮುಂದಾಗಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ...
Published: 26th January 2022 12:02 PM | Last Updated: 26th January 2022 12:02 PM | A+A A-

ಎಂಬಿ ಪಾಟೀಲ್
ಬೆಂಗಳೂರು: ಮುಂದಿನ ವರ್ಷಾಂತ್ಯದಲ್ಲಿ ನಡೆಯಲಿರುವ ತಾಲ್ಲೂಕು, ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ನಡೆಯಲಿರುವ ಸರಣಿ ಚುನಾವಣೆಗೆ ತಂತ್ರ ರೂಪಿಸಲು ಮುಂದಾಗಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ)ಯು, ಲಿಂಗಾಯತ ಸಮುದಾಯದ ಪ್ರಬಲ ಮತದಾರರನ್ನು ಸೆಳೆಯುವ ಸಲುವಾಗಿ ಮಂಗಳವಾರ ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ.
ಚುನಾವಣೆಗೆ ಸಿದ್ಧತೆ ಆರಂಭಿಸಿರುವ ರಾಜ್ಯ ಕಾಂಗ್ರೆಸ್, ಎಲ್ಲಾ ಪ್ರಮುಖ ಸಮುದಾಯಗಳ ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ. ಇದರಂತೆ ಬಿಎಸ್ ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಬಿಜೆಪಿಯನ್ನು ಬಲವಾಗಿ ಬೆಂಬಲಿಸಿದ ಲಿಂಗಾಯತರ ಮನ ಗೆಲ್ಲಲು ಪಾಟೀಲ್ ಅವರನ್ನು ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ನೇಮಕ ಮಾಡಿದೆ ಎಂದು ಹೇಳಲಾಗುತ್ತಿದೆ.
ಉತ್ತರ ಕರ್ನಾಟಕ ಭಾಗದ ಹಿರಿಯ ಲಿಂಗಾಯತ ಮುಖಂಡರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಪಕ್ಷಕ್ಕೆ ಲಾಭವನ್ನು ತರಲಿದೆ ಎಂದು ಮೂಲಗಳು ತಿಳಿಸಿವೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿಕಟವರ್ತಿ ಎಂದು ಪರಿಗಣಿಸಲ್ಪಟ್ಟಿರುವ ಮತ್ತು ಜಲಸಂಪನ್ಮೂಲ ಮತ್ತು ಗೃಹ ಸೇರಿದಂತೆ ಪ್ರಮುಖ ಖಾತೆಗಳಲ್ಲಿ ಕಾರ್ಯನಿರ್ವಹಿಸಿದ್ದ ಪಾಟೀಲ್ ಅವರು, ಇದೀಗ ಪಕ್ಷದ ಪ್ರಚಾರ ಕಾರ್ಯತಂತ್ರವನ್ನು ಸಿದ್ಧಪಡಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರೊಂದಿಗೆ ಕೆಲಸ ಮಾಡಲಿದ್ದಾರೆ.
ಪಕ್ಷಕ್ಕಾಗಿ ನಾನು ನನ್ನ ಕೈಲಾದಷ್ಟು ಮಾಡುತ್ತೇನೆ ಮತ್ತು ಕೆಪಿಸಿಸಿ ಅಧ್ಯಕ್ಷರು, ಸಿಎಲ್ಪಿ ನಾಯಕ ಮತ್ತು ಇತರ ಎಲ್ಲ ಹಿರಿಯ ನಾಯಕರೊಂದಿಗೆ ಸಮನ್ವಯದಿಂದ ಕೆಲಸ ಮಾಡುತ್ತೇನೆಂದು ಪಾಟೀಲ್ ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಐದು ವರ್ಷಗಳ ಕಾಂಗ್ರೆಸ್ ಸರ್ಕಾರವು ಸ್ಥಿರತೆ ಮತ್ತು ಜನಮುಖಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡಿದ್ದನ್ನು ಜನರು ನೆನೆಯುತ್ತಿದ್ದು, ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಅತೃಪ್ತರಾಗಿದ್ದಾರೆಂದು ತಿಳಿಸಿದ್ದಾರೆ.
2018 ರ ಚುನಾವಣೆ ಸಂದರ್ಭದಲ್ಲಿ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ಒತ್ತಾಯಿಸಿ ವೀರಶೈವ-ಲಿಂಗಾಯತ ಸಮುದಾಯವನ್ನು ವಿಭಜಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಈ ಹೋರಾಟದಲ್ಲಿ ಎಂಬಿ.ಪಾಟೀಲ್ ಅವರು ಮುಂಚೂಣಿಯಲ್ಲಿದ್ದರು.