ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 80 ಕ್ಕಿಂತ ಹೆಚ್ಚು ಸೀಟು ಪಡೆಯುವ ಸಾಮರ್ಥ್ಯವಿಲ್ಲ: ಎಚ್ ಡಿಕೆ ಲೇವಡಿ
2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80ಕ್ಕಿಂತ ಹೆಚ್ಚು ಸೀಟು ಪಡೆಯುವ ಸಾಮರ್ಥ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
Published: 27th January 2022 09:49 AM | Last Updated: 27th January 2022 12:58 PM | A+A A-

ಕುಮಾರಸ್ವಾಮಿ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80ಕ್ಕಿಂತ ಹೆಚ್ಚು ಸೀಟು ಪಡೆಯುವ ಸಾಮರ್ಥ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದು, 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
1999 ರ ಚುನಾವಣೆಯ ನಂತರ ಜನತಾದಳದ ವಿಭಜನೆಯಿಂದಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಹಾಗೂ ಬಿಜೆಪಿಯಲ್ಲಿನ ವಿಭಜನೆಯು 2013 ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಸಹಾಯ ಮಾಡಿತು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ. 2004ರಲ್ಲಿ ಐದು ವರ್ಷ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ 2008ರ ಚುನಾವಣೆಯಲ್ಲಿ ಪಕ್ಷಕ್ಕೆ ಬಹುಮತ ಬರದೇ ಕೇವಲ 65 ಸ್ಥಾನಗಳಿಗೆ ಕುಸಿಯಿತು.
ಇದನ್ನೂ ಓದಿ: ಸಿಎಂ ಹುದ್ದೆ ಮೇಲೆ ಕಣ್ಣು: ಸೇಫ್ ಕ್ಷೇತ್ರಗಳಿಗಾಗಿ 'ತಲಾಶ್; ದೇವರಾಜ್ ಅರಸ್ ಕ್ಷೇತ್ರ ಹುಣಸೂರಿನಿಂದ ಸಿದ್ದರಾಮಯ್ಯ ಸ್ಪರ್ಧೆ!
ಆದರೆ 2013ರಲ್ಲಿ ನಾಯಕರಾದ ಬಿ ಎಸ್ ಯಡಿಯೂರಪ್ಪ ಮತ್ತು ಬಿ ಶ್ರೀರಾಮುಲು ಅವರು ಬಿಜೆಪಿಯಿಂದ ಹೊರಬಂದದ್ದು ಕಾಂಗ್ರೆಸ್‌ಗೆ ಸಹಾಯ ಮಾಡಿತು. ಪಕ್ಷಕ್ಕೆ ಸ್ವಂತ ಬಲದಿಂದ 70ರಿಂದ 80ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಇಲ್ಲದೇ ಇರುವುದರಿಂದಲೇ ಅವರು ಇತರ ಪಕ್ಷಗಳ ಬಾಗಿಲು ತಟ್ಟುತ್ತಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಅನ್ನು ದುರ್ಬಲಗೊಳಿಸಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದು ಹೇಳಿದ ಕುಮಾರಸ್ವಾಮಿ, 2023 ರ ಚುನಾವಣೆಯ ನಂತರ ಪ್ರಾದೇಶಿಕ ಪಕ್ಷವು ಪ್ರಮುಖ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಜೆಡಿಎಸ್‌ನಲ್ಲಿದ್ದಾಗ ಪಕ್ಷಕ್ಕೆ ಶೇ.19ರಷ್ಟು ಮತಗಳು ಬರುತ್ತಿದ್ದವು, ಅವರ ನಿರ್ಗಮನದ ನಂತರವೂ ಪಕ್ಷಕ್ಕೆ ಶೇ.19ರಷ್ಟು ಮತಗಳು ಬಂದಿವೆ.
ಯಡಿಯೂರಪ್ಪ ಸಿಎಂ ಆಗಿದ್ದಾಗ ಎಂಟು ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ವೇಳೆ ಬಿಜೆಪಿಗೆ ಕಾಂಗ್ರೆಸ್ ನಾಯಕರು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿದರು.
ಚುನಾವಣೆಯಲ್ಲಿ 30 ಕೋಟಿ ರೂ.ವರೆಗೆ ಭಾರಿ ಖರ್ಚು ಮಾಡುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಮಾಜಿ ಸಿಎಂ, ಇಂತಹ ಪದ್ಧತಿಗಳನ್ನು ಕೊನೆಗೊಳಿಸಲು ಸುಧಾರಣೆಗಳನ್ನು ತರುವ ಅಗತ್ಯವಿದೆ ಎಂದು ಹೇಳಿದರು. ಜೆಡಿಎಸ್ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ನಿರಾಕರಿಸಿದರು.