'ನಮ್ಮ ಸರ್ಕಾರದಲ್ಲಿ ತಂದಿದ್ದ ಯೋಜನೆಗಳನ್ನು ನಿಲ್ಲಿಸಿದ್ದು, ಹಳೆಯ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದು ಬಿಜೆಪಿ ಸಾಧನೆ': ಸಿದ್ದರಾಮಯ್ಯ ಟೀಕೆ
ತಮ್ಮ ನೇತೃತ್ವದ ಸರ್ಕಾರದ 6 ತಿಂಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.
Published: 29th January 2022 12:56 PM | Last Updated: 29th January 2022 01:04 PM | A+A A-

ಸಿದ್ದರಾಮಯ್ಯ
ಬೆಂಗಳೂರು: ತಮ್ಮ ನೇತೃತ್ವದ ಸರ್ಕಾರದ 6 ತಿಂಗಳ ಸಾಧನೆಗಳನ್ನು ಬಿಂಬಿಸುವ ಕಿರುಹೊತ್ತಿಗೆಯನ್ನು ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಡುಗಡೆ ಮಾಡಿದ್ದರು. ಕೋವಿಡ್ ಮತ್ತು ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ಸರ್ಕಾರ ನಿಭಾಯಿಸಿದೆ ಎಂದು ನಿನ್ನೆ ಭಾಷಣ ವೇಳೆ ಬಸವರಾಜ ಬೊಮ್ಮಾಯಿಯವರು ಹೇಳುತ್ತಿದ್ದರು. ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡಿದ್ದರು.
ಆದರೆ ಸರ್ಕಾರದ ಸಾಧನೆಯೇನೂ ಇಲ್ಲ, ಎಲ್ಲಾ ರಂಗದಲ್ಲಿಯೂ ವಿಫಲವಾಗಿದೆ. ಕೊರೋನಾದಿಂದ ಸಾವು-ನೋವು, ಉದ್ಯೋಗ-ಬದುಕನ್ನು ಅನೇಕ ಮಧ್ಯಮ, ಕೆಳ ಮಧ್ಯಮ, ಬಡ ಜನರು ಅನುಭವಿಸಿದ್ದಾರೆ ಎಂದು ಸರ್ಕಾರವನ್ನು ಟೀಕಿಸುತ್ತಾ ಹೋಗಿದ್ದಾರೆ ವಿಪಕ್ಷ ನಾಯಕ ಸಿದ್ದರಾಮಯ್ಯ.
ಇಂದು ಬೆಂಗಳೂರಿನ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾಗಿದೆ. ಬಿ.ಎಸ್.ಯಡಿಯೂರಪ್ಪ ನಂತರ ಬೊಮ್ಮಾಯಿ ಸಿಎಂ ಆಗಿದ್ದಾರೆ. ಬೊಮ್ಮಾಯಿ ಸಿಎಂ ಆಗಿ ನಿನ್ನೆಗೆ 6 ತಿಂಗಳು ಪೂರೈಕೆಯಾಗಿದೆ. ಬಿಎಸ್ವೈ (BS Yediyurappa) ಸಂಪುಟದಲ್ಲಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ (Basavaraj Bommai) ಈಗ ಸಿಎಂ ಆಗಿದ್ದಾರೆ. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ. 2018ರ ಚುನಾವಣೆ ವೇಳೆ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿತ್ತು. ಪ್ರಣಾಳಿಕೆ ಬಿಎಸ್ವೈ, ಬೊಮ್ಮಾಯಿ ಸರ್ಕಾರಕ್ಕೆ ಅನ್ವಯವಾಗುತ್ತದೆ. ಇದರಲ್ಲಿ ನೀರಾವರಿಗೆ 6,300 ಕೋಟಿ ಖರ್ಚು ಮಾಡಿದ್ದೇವೆಂದು ಉಲ್ಲೇಖ ಮಾಡಿದ್ದರು. 5 ವರ್ಷದಲ್ಲಿ 1.5 ಲಕ್ಷ ಕೋಟಿ ಖರ್ಚು ಮಾಡುತ್ತೇವೆ ಎಂದಿದ್ದರು. ಆದರೆ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆ ಬಿಜೆಪಿಯವರು ಮರೆತಿದ್ದಾರೆ ಎಂದು ಆರೋಪಿಸಿದರು.
ನಿನ್ನೆ ತಮ್ಮ ಸಾಧನೆ ಎಂದು ಪುಸ್ತಕ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಸಾಧನೆಗಳಿಗಿಂತ ಭರವಸೆಗಳೇ ತುಂಬಿಹೋಗಿವೆ. ಹಳೆಯ ಕಾರ್ಯಕ್ರಮಗಳಿಗೆ ಹೊಸ ಹೆಸರು ನೀಡಿದ್ದಾರೆ. ಹೆಸರು ಬದಲಾವಣೆ ಮಾಡಿದ್ದೇ ಬಿಜೆಪಿ ಸಾಧನೆ ಎಂದು ಟೀಕಿಸಿದರು.
ಹಿಂದೆ ತಮ್ಮ ಸರ್ಕಾರವಿದ್ದಾಗ ಹೆಚ್.ಕೆ.ಪಾಟೀಲ್ ಸಚಿವರಾಗಿದ್ದಾಗ ಗ್ರಾಮಸೇವಾ ಕೇಂದ್ರ ಆರಂಭ ಮಾಡಲಾಗಿತ್ತು. ಗ್ರಾಮಸೇವಾ ಕೇಂದ್ರವನ್ನು ಗ್ರಾಮಒನ್ ಕೇಂದ್ರವಾಗಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಇಷ್ಟೊಂದು ಪ್ರಚಾರ ಇಂದಿನ ಬಿಜೆಪಿ ಸರ್ಕಾರ ನೀಡುತ್ತಿರುವುದೇಕೆ? ಕಲ್ಯಾಣ ಕರ್ನಾಟಕ ಭಾಗಕ್ಕೆ 1 ಸಾವಿರ ಕೋಟಿ ರೂಪಾಯಿ ಕೊಟ್ಟಿರಬಹುದು ಆದರೆ ಕಲ್ಯಾಣ ಕರ್ನಾಟಕಕ್ಕೆ 3,500 ಕೋಟಿ ಕೊಡುತ್ತೇವೆ ಅಂದಿದ್ದಾರೆ. ಅಂದರೆ ಈ ವರ್ಷ ಒಂದೇ ಒಂದು ರೂಪಾಯಿ ಕೊಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: 6 ತಿಂಗಳು ಪೂರೈಸಿದ ಬೊಮ್ಮಾಯಿ ಸರ್ಕಾರ: 'ಭವ್ಯ ಭವಿಷ್ಯಕ್ಕಾಗಿ ಭರವಸೆಯ ಹೆಜ್ಜೆಗಳು' ಪುಸ್ತಕ ಬಿಡುಗಡೆ ಮಾಡಿದ ಸಿಎಂ
ಕೊರೋನಾದಿಂದ ಮೃತಪಟ್ಟವರನ್ನು ಸರ್ಕಾರದಿಂದ ಸರಿಯಾಗಿ ಅಂತ್ಯಸಂಸ್ಕಾರ ಮಾಡಿಲ್ಲ, ಸಾಮೂಹಿಕವಾಗಿ ಬೇಕಾಬಿಟ್ಟಿ, ಇನ್ನು ಹಲವರನ್ನು ನೀರಿಗೆ ಬೇಕಾಬಿಟ್ಟಿ ಎಸೆದರು. ದಾಖಲೆಗಳಲ್ಲಿ 38 ಸಾವಿರ ಜನ ಕೊರೊನಾದಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ದಾಖಲೆ ಪ್ರಕಾರ 38 ಸಾವಿರ ಕುಟುಂಬಗಳಿಗೆ ಪರಿಹಾರ ನೀಡಿಲ್ಲ. ಮೃತಪಟ್ಟ 38 ಸಾವಿರ ಜನರ ಪೈಕಿ 13,451 ಜನರಿಗೆ ಪರಿಹಾರ ನೀಡಿದ್ದಾರೆ. ಇನ್ನೂ ಕೊರೊನಾ ಸಂದರ್ಭದಲ್ಲಿ 1,53,000 ಜನರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಎನ್ಸಿಆರ್ಬಿ ದಾಖಲೆ ಪ್ರಕಾರ 1,53,000 ಜನರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರೆಲ್ಲ ಉದ್ಯೋಗ ನಷ್ಟ, ನಿರುದ್ಯೋಗದಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅಷ್ಟೇ ಅಲ್ಲದೇ ಕಾರ್ಮಿಕ ಇಲಾಖೆಯಿಂದ 237.9 ಕೋಟಿ ಖರ್ಚು ಜಾಹೀರಾತು ನೀಡಿದ್ದಾರೆ. ಕಾರ್ಮಿಕ ಕಲ್ಯಾಣ ನಿಧಿ ಹಣ ನೀಡಿ ಸಾಧನೆ ಎಂದು ಜಾಹೀರಾತು ಮಾಡಿದ್ದಾರೆ ಎಂದು ಟೀಕಿಸಿದರು.
ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂದು ಹೇಳುವ ಮೋದಿ ಸರ್ಕಾರ ಸರ್ವನಾಶ ಮಾಡಿದೆ, ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಆರ್ಥಿಕ ಅಸಮಾನತೆ ಹೆಚ್ಚಾಗಿದೆ, ಅನುಕಂಪ-ಅಂತಃಕರಣ ಇರುವ ಸರ್ಕಾರ ಎಂದು ಹೇಳುವ ಬಿಜೆಪಿಯವರು ಜನಪರ ಕೆಲಸಗಳನ್ನೇನು ಮಾಡುವುದಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.