ಮಹಾತ್ಮಾ ಗಾಂಧಿಯವರನ್ನು ಕೊಂದಿದ್ದು ಒಬ್ಬ ಅಪ್ಪಟ ಹಿಂದೂವಾದಿ, ಗೋಡ್ಸೆ ದೇಶದ್ರೋಹಿ: ಬಿ ಕೆ ಹರಿಪ್ರಸಾದ್
ಜನವರಿ 30ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮ ದಿನ. ಈ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು.
Published: 30th January 2022 01:17 PM | Last Updated: 31st January 2022 01:11 PM | A+A A-

ಬಿ ಕೆ ಹರಿಪ್ರಸಾದ್
ಬೆಂಗಳೂರು: ಜನವರಿ 30ರಂದು ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹುತಾತ್ಮ ದಿನ. ಈ ಸಂದರ್ಭದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಪುಣ್ಯಸ್ಮರಣೆ ಕಾರ್ಯಕ್ರಮ ನೆರವೇರಿತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್, ಮಾಜಿ ಸಚಿವ ಹೆಚ್.ಆಂಜನೇಯ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ರಾಷ್ಟ್ರಪಿತ ಗಾಂಧೀಜಿ ಕೊಂದಿದ್ದು ಒಬ್ಬ ಹಿಂದುತ್ವವಾದಿ, ಸ್ವತಂತ್ರ ಭಾರತದಲ್ಲಿ ಗಾಂಧೀಜಿಯನ್ನು ಗುಂಡಿಟ್ಟು ಕೊಂದರು. ಇದು ಸಾಧಾರಣ, ಮಾಮೂಲಿ ಕೊಲೆಯಲ್ಲ. ಸ್ವಾತಂತ್ರ್ಯ ತಂದುಕೊಟ್ಟ ಮಹಾನ್ ನಾಯಕನ ಕಗ್ಗೊಲೆ. ಗಾಂಧೀಜಿಯನ್ನು ದೇಶದ್ರೋಹಿ ಗೋಡ್ಸೆ ಕೊಲೆ ಮಾಡಿದ್ದಾನೆ. ಗಾಂಧೀಜಿಯನ್ನು ಕೊಲೆ ಮಾಡುವುದಕ್ಕೆ ಗೋಡ್ಸೆಗೆ ಸದ್ಯ ರಾಜಕಾರಣದಲ್ಲಿರುವ ಬಿಜೆಪಿಯವರಿಂದ ಪ್ರೇರಣೆ ಪಡೆದು ಹತ್ಯೆ ಮಾಡಿದ ಮೊದಲ ಉಗ್ರ ಗೋಡ್ಸೆ.
ಗಾಂಧಿಯನ್ನು ಕೊಲೆಮಾಡಿದ್ದು ಯಾರೋ ಪಾಕಿಸ್ತಾನದವರಲ್ಲ. ಗಾಂಧಿ ಕೊಂದಿದ್ದು ಒಬ್ಬ ಹಿಂದುತ್ವವಾದಿ. ಗಾಂಧಿಗಿಂತ ದೊಡ್ಡ ಹಿಂದೂ ವಿಶ್ವದಲ್ಲಿ ಯಾರೊಬ್ಬರೂ ಇಲ್ಲ. ಅವರನ್ನ ಕೊಂದಿದ್ದು ಮುಸ್ಲಿಂ ಅಲ್ಲ, ಸಿಖ್ ಅಲ್ಲ, ಹಿಂದುತ್ವವಾದಿ. ಇವರಿಗೆ ನಿಜವಾದ ಹಿಂದುತ್ವ ಇದ್ದರೆ ಜಿನ್ನಾ ಕೊಲೆ ಮಾಡಬೇಕಿತ್ತು. ಸಂಘ ಪರಿವಾರದ ಸದಸ್ಯರೇ ಗಾಂಧಿ ಹತ್ಯೆಗೆ ನಾಂದಿ ಹಾಕಿಕೊಟ್ಟರು ಎಂದು ಸ್ಫೋಟಕ, ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಗಾಂಧಿ ಪ್ರಗತಿಪರ ಚಿಂತನೆ ವಿರುದ್ಧ ಸಂಘ ಪರಿವಾರದವರು ಸಾಮಾಜಿಕ ನ್ಯಾಯದ ಸಂವಿಧಾನ ವಿರೋಧಿಗಳು. ಸಂಘ ಪರಿವಾರದವರು ವೈಜ್ಞಾನಿಕ ಚಿಂತನೆ ವಿರೋಧಿಗಳು. ಸಂಘ ಪರಿವಾರದವರಿಗೆ ದೇಶದ ಬೆಳವಣಿಗೆ ಸಹಿಸಲಿಕ್ಕಾಗದೆ ನಾಥೂರಾಮ್ ಗೋಡ್ಸೆ ಎಂಬ ಗಾಂಧೀಜಿಯವರನ್ನು ಕೊಲೆ ಮಾಡಿದ್ದಾನೆ. ನಾವು ದೇಶದ ಮೊಟ್ಟ ಮೊದಲ ಉಗ್ರಗಾಮಿ ಗೋಡ್ಸೆ ಎನ್ನುವುದನ್ನು ಒತ್ತಿ ಒತ್ತಿ ಹೇಳಬೇಕು. ಗಾಂಧಿ ಆದರ್ಶ ಸಿದ್ದಾಂತ ಪ್ರಚಾರ ಮಾಡಿ ಜನರಿಗೆ ತಲುಪಿಸುವ ಜವಾಬ್ದಾರಿ ಕಾಂಗ್ರೆಸ್ ನವರದ್ದು ಎಂದು ಹೇಳಿದರು.