ಅಕ್ರಮ ಹಣ ವರ್ಗಾವಣೆ ಕೇಸ್: ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆ ಜುಲೈ 30ಕ್ಕೆ ಮುಂದೂಡಿಕೆ

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ಜುಲೈ 30ಕ್ಕೆ ಮುಂದೂಡಿದೆ. 
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ (Money Laundering Case) ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಜಾಮೀನು ಅರ್ಜಿ ವಿಚಾರಣೆಯನ್ನು ಇಡಿ ವಿಶೇಷ ನ್ಯಾಯಾಲಯ ಜುಲೈ 30ಕ್ಕೆ ಮುಂದೂಡಿದೆ. 

ಜಾಮೀನಿಗೆ ಆಕ್ಷೇಪ ಸಲ್ಲಿಸಲು ಇಡಿ (ಜಾರಿ ನಿರ್ದೇಶನಾಲಯ) ಸಮಯಾವಕಾಶ ಕೇಳಿದ್ದು, ಜುಲೈ 30ಕ್ಕೆ ಆಕ್ಷೇಪಣೆ ಸಲ್ಲಿಸಲು ಜಾರಿ ನಿರ್ದೇಶನಾಲಯ ವಿಶೇಷ ಕೋರ್ಟ್​ (ED Court) ಅನುಮತಿ ನೀಡಿದೆ. ದೆಹಲಿಯ ಇಡಿ ವಿಶೇಷ ಕೋರ್ಟ್​​ನಲ್ಲಿ ಡಿ.ಕೆ. ಶಿವಕುಮಾರ್​ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ವಿಕಾಸ್ ಧುಲ್ ಪೀಠದಿಂದ ವಿಚಾರಣೆ ನಡೆಸಲಾಗಿದೆ. ಹೈಕೋರ್ಟ್ ಡಿಕೆ ಶಿವಕುಮಾರ್ ಗೆ ಜಾಮೀನು ನೀಡಿದ ಬಗ್ಗೆ ವಕೀಲರು ಮನವರಿಕೆ ಮಾಡಿಕೊಟ್ಟಿದ್ದು, ಇಡಿ ಪರ ವಕೀಲರು 20 ನಿಮಿಷ ವಿಚಾರಣೆ ಮುಂದೂಡುವಂತೆ ಮನವಿ ಮಾಡಿದರು. ಆದರೆ, ವಿಚಾರಣೆ ಮುಂದೂಡಲು ಡಿಕೆಶಿ ಪರ ವಕೀಲರಿಂದ ಆಕ್ಷೇಪ ವ್ಯಕ್ತವಾಯಿತು. ಡಿಕೆಶಿ ಜಾಮೀನು ನವೀಕರಿಸಲು ಇಡಿ ವಕೀಲರು ವಿರೋಧಿಸಿದರು.

ಡಿಕೆಶಿಗೆ ಹಿಂದೆ ಜಾಮೀನು​ ನೀಡಿರುವುದು ದೆಹಲಿ ಹೈಕೋರ್ಟ್, ಇಡಿ ವಿಶೇಷ ನ್ಯಾಯಾಲಯದಲ್ಲಿ ಅಲ್ಲ. ಈ ನ್ಯಾಯಾಲಯ ಜಾಮೀನನ್ನು ನಿರಾಕರಿಸಬೇಕು ಎಂದು ಇಡಿ ಪರ ವಕೀಲರು ಹೇಳಿದರು. ಇಡಿ ವಕೀಲರ ವಾದಕ್ಕೆ ಡಿಕೆ ಶಿವಕುಮಾರ್ ಪರ ವಕೀಲರ ಆಕ್ಷೇಪ ವ್ಯಕ್ತವಾಯಿತು. ಇದೇ ಕೋರ್ಟ್ ಕಾರ್ತಿ ಚಿದಂಬರಂಗೆ ಜಾಮೀನು ನೀಡಿದೆ. ಹಾಗಾಗಿ, ಡಿಕೆ ಶಿವ ಕುಮಾರ್ ಗೂ ಜಾಮೀನು ನೀಡಬಹುದು ಎಂದು ವಕೀಲರು ವಾದ ಮಂಡಿಸಿದರು.

ವಾದ-ಪ್ರತಿವಾದ ಆಲಿಸಿದ ಇ.ಡಿ ನ್ಯಾಯಾಲಯವು ಜಾಮೀನು ಅರ್ಜಿ ವಿಚಾರಣೆಯನ್ನು ಜುಲೈ 30ಕ್ಕೆ ಮುಂದೂಡಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಇ.ಡಿ.ಅಧಿಕಾರಿಗಳು ಇತ್ತೀಚೆಗಷ್ಟೇ ಜಾರ್ಜ್​ಶೀಟ್‌ ಸಲ್ಲಿಸಿದ್ದು, ಅದರಂತೆ ಡಿ.ಕೆ. ಶಿವಕುಮಾರ್‌ ಸೇರಿ ಐವರಿಗೆ ನ್ಯಾಯಾಲಯವು ಸಮನ್ಸ್‌ ಜಾರಿ ಮಾಡಿತ್ತು. ಈ ಸಂಬಂಧ ದೆಹಲಿಯ ರೋಸ್‌ ಅವೆನ್ಯೂ ಕೋರ್ಟ್ ನಲ್ಲಿ ವಿಚಾರಣೆ ನಡೆದಿದೆ. 2018ರಲ್ಲಿ ದೆಹಲಿಯ ಸಪ್ಧರ್ ಜಂಗ್‌ ಫ್ಲಾಟ್‌ನಲ್ಲಿ ಸಿಕ್ಕ ಹಣಕ್ಕೆ ಸಂಬಂಧಿಸಿ ಇ.ಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಈ ಸಂಬಂಧ 2019ರಲ್ಲಿ ಡಿ.ಕೆ. ಶಿವಕುಮಾರ್‌ ಅವರನ್ನು ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com