ಪಕ್ಷಾಂತರ ತಡೆ ಕಾಯ್ದೆಗೆ ತಿದ್ದುಪಡಿ ತರಬೇಕು: ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಯಾವುದೇ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸುವುದು ಬಿಜೆಪಿಗೆ ಇಷ್ಟವಿಲ್ಲ. ಇದಕ್ಕೆ ಕಾರಣಕ್ಕೆ ಮಹಾರಾಷ್ಟ್ರದ ಎಂವಿಎ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ವ್ಯವಸ್ಥಿತ ಪಿತೂರಿ ನಡೆಸಿತು ಎಂದು ರಾಜ್ಯಸಭೆಯ ವಿರೋಧ...
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಯಾವುದೇ ರಾಜ್ಯಗಳಲ್ಲಿ ವಿರೋಧ ಪಕ್ಷಗಳು ಆಡಳಿತ ನಡೆಸುವುದು ಬಿಜೆಪಿಗೆ ಇಷ್ಟವಿಲ್ಲ. ಇದಕ್ಕೆ ಕಾರಣಕ್ಕೆ ಮಹಾರಾಷ್ಟ್ರದ ಎಂವಿಎ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ವ್ಯವಸ್ಥಿತ ಪಿತೂರಿ ನಡೆಸಿತು ಎಂದು ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಕೇಸರಿ ಪಕ್ಷದ ವಿರುದ್ಧ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಸಿಂಧೆ ಅವರು ಶಿವಸೇನೆಯನ್ನು ಒಡೆದು ಬಿಜೆಪಿಯ ನೆರವಿನಿಂದ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲು ಮಹಾ ಅಘಾಡಿ ಸರ್ಕಾರವನ್ನು ಪತನಗೊಳಿಸಿದರು ಮತ್ತು ಇದರ ಹಿಂದೆ ಬಿಜೆಪಿಯ ವ್ಯವಸ್ಥಿತ ಪಿತೂರಿ ಇದೆ.  ಮಹಾ ಅಘಾಡಿ ಸರ್ಕಾರ ಸುಸೂತ್ರವಾಗಿ ನಡೆಯುತ್ತಿತ್ತು ಮತ್ತು ರಾಜ್ಯದಲ್ಲಿ ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿತ್ತು ಎಂದು ಖರ್ಗೆ ಹೇಳಿದ್ದಾರೆ.

ಇಂತಹ ಪಕ್ಷ ವಿರೋಧಿ ಚಟುವಟಿಕೆಗಳನ್ನು ನಿಲ್ಲಿಸಲು ಮತ್ತು ಸರ್ಕಾರಗಳ ಅಸ್ಥಿರತೆಯನ್ನು ತಡೆಯಲು ಕೇಂದ್ರ ಸರ್ಕಾರ 'ಪಕ್ಷಾಂತರ ತಡೆ ಕಾನೂನಿಗೆ' ಹೆಚ್ಚಿನ ಬಲವನ್ನು ನೀಡಬೇಕು. 'ಪಕ್ಷಾಂತರ ತಡೆ ಕಾನೂನಿಗೆ' ತಿದ್ದುಪಡಿ ತರುಬೇಕು. ಪಕ್ಷಾಂತರ ಮಾಡುವ ಯಾವುದೇ ಜನಪ್ರತಿನಿಧಿಗಳನ್ನು ಸ್ಪರ್ಧಿಸದಂತೆ ಅನರ್ಹಗೊಳಿಸಬೇಕು. ಪಕ್ಷದಿಂದ ಪಕ್ಷಾಂತರ ಮಾಡಿದರೆ 5 ವರ್ಷ ಚುನಾವಣೆ ಸ್ಪರ್ಧಿಸುವಂತಿಲ್ಲ ಎಂಬ ನಿಯಮ ಮಾಡಬೇಕು. ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ ಪಕ್ಷಾಂತರ ತಡೆ ಕಾನೂನಿಗೆ ತಿದ್ದುಪಡಿ ತರುವಂತೆ ಸರ್ಕಾರಕ್ಕೆ ಒತ್ತಡ ಹೇರುವುದಾಗಿ ಖರ್ಗೆ ತಿಳಿಸಿದರು.

ವಿರೋಧ ಪಕ್ಷಗಳ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಐಟಿ ಮತ್ತು ಇಡಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಶಾಸಕರ ಮೇಲೆ ದಾಳಿ ನಡೆಸುವುದು ಮತ್ತು ಆಮಿಷ ಹಾಗೂ ಬೆದರಿಕೆಯಂತಹ ಎಲ್ಲಾ ವಿಧಾನಗಳನ್ನು ಬಳಸುತ್ತಿದ್ದಾರೆ ಎಂದು ಆರೋಪಿಸಿದರು.

ರಾಜಸ್ಥಾನದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ ಎಂಬುದನ್ನು ನಿರಾಕರಿಸಿದ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ, ರಾಜಸ್ಥಾನ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ರಾಜಸ್ಥಾನದಲ್ಲಿ ಟೈಲರ್ ಕನ್ನಯ್ಯಲಾಲ್ ಅವರನ್ನು ಕೊಂದ ಘಟನೆಯ ನಂತರ, ಸರ್ಕಾರ ಆರೋಪಿಗಳನ್ನು ಬಂಧಿಸಿದೆ ಮತ್ತು ಆರೋಪಿಗಳಿಗೆ ಶಿಕ್ಷೆ ನೀಡಲು ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದೆ. ಉತ್ತರ ಪ್ರದೇಶದಲ್ಲೂ ಇಂತಹ ಹಲವು ಘಟನೆಗಳು ನಡೆದಿದ್ದು, ಕೇಂದ್ರ ಸರ್ಕಾರ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕ್ರಮ ಕೈಗೊಳ್ಳಬಹುದೇ ಎಂದು ಖರ್ಗೆ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com