ವಿಧಾನಸಭೆ ಚುನಾವಣೆ ಮೇಲೆ ಕಣ್ಣು: ಸಿದ್ದರಾಮಯ್ಯ ಬಣಕ್ಕೆ ಪಠ್ಯಪುಸ್ತಕ ಪರಿಷ್ಕರಣೆ ವಿವಾದವೇ ಅಸ್ತ್ರ!

ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಚಿಂತಕರ ಚಾವಡಿ ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ನಿರ್ಣಾಯಕ ವಿಷಯವಾಗಿ ತೆಗೆದುಕೊಂಡಿದೆ ಎನ್ನುತ್ತವೆ ರಾಜಕೀಯ ಮೂಲಗಳು.
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಚಿಂತಕರ ಚಾವಡಿ (think tank) ರಾಜ್ಯ ಪಠ್ಯಪುಸ್ತಕ ಪರಿಷ್ಕರಣೆ ವಿವಾದವನ್ನು ಮುಂದಿನ ವರ್ಷದ ವಿಧಾನಸಭೆ ಚುನಾವಣೆಗೆ ನಿರ್ಣಾಯಕ ವಿಷಯವಾಗಿ ತೆಗೆದುಕೊಂಡಿದೆ ಎನ್ನುತ್ತವೆ ರಾಜಕೀಯ ಮೂಲಗಳು.

ಇದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಮೇಲೆ ಪರಿಣಾಮ ಬೀರಬಹುದು ಎಂದು ಅವರು ಭಾವಿಸಿದ್ದಾರೆ. ಕಳೆದ ಜೂನ್ 18 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ವಿಶ್ವ ಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯ ಪ್ರತಿಭಟನೆಯ ನಂತರ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರ ತವರು ಕ್ಷೇತ್ರವಾದ ತುಮಕೂರಿನ ತಿಪಟೂರಿನಲ್ಲಿ ಮತ್ತೊಂದು ರ್ಯಾಲಿಯನ್ನು ನಡೆಸಲು ಮುಂದಾಗಿದೆ. ಇದು ನಾಡಿದ್ದು ಭಾನುವಾರದಂದು ನಡೆಯಲಿದ್ದು ಬೃಹತ್ ರ್ಯಾಲಿಯೊಂದಿಗೆ ಪ್ರತಿಭಟನೆ ಮುಕ್ತಾಯಗೊಳ್ಳಲಿದೆ. ಪಠ್ಯಪುಸ್ತಕ ಸಮಿತಿಯ ಲೋಪಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ನಾಯಕರು ಮತ್ತು ಸಿದ್ದರಾಮಯ್ಯನವರ (Siddaramaiah) ಆಪ್ತ ಬೆಂಬಲಿಗರು ಕಳೆದೊಂದು ವಾರದಿಂದ ಪಾದಯಾತ್ರೆ ನಡೆಸುತ್ತಿದ್ದಾರೆ.

ರೋಹಿತ್ ಚಕ್ರತೀರ್ಥ ಅವರ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯು (Textbook revision committee) ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ, ಕುವೆಂಪು ಮುಂತಾದ ಮಹನೀಯರನ್ನು ನಿಂದಿಸಿ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಅಕ್ಷಮ್ಯ ತಪ್ಪು ಎಸಗಿದೆ ಎಂದು ಸಿದ್ದರಾಮಯ್ಯ ಹಿಂದೆ ವಾಗ್ದಾಳಿ ನಡೆಸಿದ್ದರು. ನಾರಾಯಣ ಗುರು ಮತ್ತು ಕವಿ ಕಯ್ಯಾರ ಕಿಞ್ಞಣ್ಣ ರೈ ಅವರ ಅನುಯಾಯಿಗಳು ಪಠ್ಯಪುಸ್ತಕಗಳಲ್ಲಿ  ಈ ಮಹನೀಯರಿಗೆ ಪ್ರಾಮುಖ್ಯತೆ ನೀಡಿಲ್ಲ ಎಂದು ಕರಾವಳಿ ಭಾಗದಲ್ಲಿ ಆರೋಪಿಸಿದ್ದರು.

ಮುಂದಿನ ವಿಧಾನಸಭಾ ಚುನಾವಣೆಯು ರಾಜಕೀಯ ಪಕ್ಷಗಳಲ್ಲಿ ಸೈದ್ಧಾಂತಿಕ ಕದನಕ್ಕೆ ಸಾಕ್ಷಿಯಾಗುವ ಸಾಧ್ಯತೆ ಇರುವುದರಿಂದ ಅಲ್ಪಸಂಖ್ಯಾತರನ್ನು ಓಲೈಸಲು ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇದರಲ್ಲಿ ಅವರು ಖ್ಯಾತ ಲೇಖಕ ದೇವನೂರು ಮಹಾದೇವ ಅವರ ‘ಆರ್‌ಎಸ್‌ಎಸ್: ಆಳ ಮತ್ತು ಅಗಲ ಪುಸ್ತಕವನ್ನು ಬಳಸಿಕೊಂಡು ಸಂಘಪರಿವಾರದ ಸಿದ್ಧಾಂತವನ್ನು ಟೀಕಿಸಲು ಸೂಕ್ತವೆಂದು ಕಂಡುಕೊಂಡಿದ್ದಾರೆ. ದೇವನೂರು ಅವರನ್ನು ಯಾವಾಗಲೂ ಹೊಗಳಿಕೊಂಡು ಬರುವ ಸಿದ್ದರಾಮಯ್ಯ, ಜನಸಾಮಾನ್ಯರು ಈ ಪುಸ್ತಕವನ್ನು ಕಡ್ಡಾಯವಾಗಿ ಓದಬೇಕು ಎಂದು ಸಲಹೆ ನೀಡಿದ್ದಾರೆ.

ಇದು ಸೈದ್ಧಾಂತಿಕ ಘರ್ಷಣೆಯಾಗಿದ್ದರೆ, ಬಿಜೆಪಿ ಮತ್ತು ಆರ್‌ಎಸ್‌ಎಸ್ ವಿರುದ್ಧ ಸೆಕ್ಯುಲರ್ ಪಕ್ಷಗಳು ಒಗ್ಗೂಡಿದರೆ ಮಾತ್ರ ಪಠ್ಯಪುಸ್ತಕ ಪರಿಷ್ಕರಣೆ ವಿಚಾರ ಚುನಾವಣೆಯಲ್ಲಿ ಕೆಲಸ ಮಾಡಬಹುದು ಎನ್ನುತ್ತಾರೆ ಮಾಜಿ ಶಾಸಕ ವೈಎಸ್‌ವಿ ದತ್ತ. ಇಲ್ಲಿ ಕುತೂಹಲಕಾರಿ ಸಂಗತಿಯೆಂದರೆ, ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಕೂಡ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸುವುದರಲ್ಲಿ ಹಿಂದೆ ಬಿದ್ದಿಲ್ಲ. ಅವರು ಕೂಡ ದೇವನೂರು ಅವರ ಪುಸ್ತಕವನ್ನು ಉಲ್ಲೇಖಿಸುತ್ತಿದ್ದಾರೆ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ. 

ಬಿಜೆಪಿಯು ಮುಂದಿನ ವಿಧಾನಸಭೆ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುವ ಸಾಧ್ಯತೆ ಇರುವುದರಿಂದ ಪ್ರಧಾನಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ ಅಭಿವೃದ್ಧಿ, ಭ್ರಷ್ಟಾಚಾರ ಮತ್ತು ಸಿದ್ಧಾಂತದ ವಿಷಯಗಳೂ ಮುನ್ನೆಲೆಗೆ ಬರುವ ಸಾಧ್ಯತೆ ಇದೆ. ಇದನ್ನು ಗಮನದಲ್ಲಿಟ್ಟುಕೊಂಡು ಸಿದ್ದರಾಮಯ್ಯ ಪಾಳಯ ಅಲ್ಪಸಂಖ್ಯಾತರ ಬೆಂಬಲಕ್ಕೆ ನಿಂತಿದೆ ಎಂಬ ಸ್ಪಷ್ಟ ಸಂದೇಶವನ್ನು ಅವರಿಗೆ ರವಾನಿಸುವ ಮೂಲಕ ಘರ್ಷಣೆಯ ತಾರ್ಕಿಕ ಅಂತ್ಯಕ್ಕೆ ಸಿದ್ಧತೆ ನಡೆಸಿದೆ. ಕುಮಾರಸ್ವಾಮಿ ಕೂಡ ಈ ನಿಟ್ಟಿನಲ್ಲಿ ತಮ್ಮದೇ ಆದ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com