ಬಿಜೆಪಿಯ ‘ಜನೋತ್ಸವ’ ಅಲ್ಲ, ಭ್ರಷ್ಟೋತ್ಸವ: ಕಾಂಗ್ರೆಸ್ ಕಿಡಿ

ಬಿಜೆಪಿ ಸರ್ಕಾರದ ಜನೋತ್ಸವ ಭ್ರಷ್ಟೋತ್ಸವ ಎಂದು ವ್ಯಂಗ್ಯವಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ಒಂದು ವರ್ಷದ ಸಾಧನ ಸಮಾವೇಶ ಮಾಡ್ತೇವೆ ಎಂದು ಹೇಳಿದೆ. ಒಂದು ವರ್ಷ ಅಂತ ಯಾಕೆ ಹೇಳುತ್ತಿದ್ದೀರಿ...
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್

ಬೆಂಗಳೂರು: ಬಿಜೆಪಿ ಸರ್ಕಾರದ ಜನೋತ್ಸವ ಭ್ರಷ್ಟೋತ್ಸವ ಎಂದು ವ್ಯಂಗ್ಯವಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು, ರಾಜ್ಯ ಸರ್ಕಾರ ಒಂದು ವರ್ಷದ ಸಾಧನ ಸಮಾವೇಶ ಮಾಡ್ತೇವೆ ಎಂದು ಹೇಳಿದೆ. ಒಂದು ವರ್ಷ ಅಂತ ಯಾಕೆ ಹೇಳುತ್ತಿದ್ದೀರಿ. ಹೆಚ್ಚು ಕಮ್ಮಿ ಬಿಜೆಪಿ ಸರ್ಕಾರ ಬಂದು ನಾಲ್ಕು ವರ್ಷಗಳಾಗಿವೆ. ಬಿಜೆಪಿಯ ಭ್ರಷ್ಟೋತ್ಸವ ಎಂದು ಮಾಡಿ ಎಂದು ತಿರುಗೇಟು ನೀಡಿದರು.

ಬಿಜೆಪಿ ಅಧಿಕಾರಕ್ಕೆ ಬಂದಾಗಿಂದ ಭ್ರಷ್ಟಾಚಾರ ತಾಂಡವ ಆಡುತ್ತಿದೆ‌. ಬೆಂಗಳೂರು ಮತ್ತು ರಾಜ್ಯ ಭ್ರಷ್ಟ ಕ್ಯಾಪಿಟಲ್ ಆಗಿದೆ‌. ನಿಜವಾಗಿಯೂ ಸಾಧನೆ ಮಾಡಿದ್ದರೇ, ನಿಮ್ಮ ಪ್ರಧಾನಿಗಳು, ವರಿಷ್ಠರು ಬಂದು ಹಾಡಿ ಹೊಗಳಿ ಹೋಗುತ್ತಿದ್ದರು. ರೈತರ ಆದಾಯ ಡಬಲ್ ಮಾಡುತ್ತೇನೆ ಎಂದ್ರಿ. ಆದ್ರೆ ಅವರ ತೆಗೆದುಕೊಳ್ಳುವ ಗೊಬ್ಬರ ಡಬಲ್ ಆಗಿದೆ. ಹಾಲು, ಮೊಸರು, ಪನ್ನೀರಿಗೆಲ್ಲಾ ಜಿಎಸ್ ಟಿ ಹಾಕಿ ದಾಖಲೆ ಸೃಷ್ಟಿ ಮಾಡಿದ್ದೀರ. ರೈತರಿಗೆ ಯಾವುದೇ ಅನುಕೂಲ ಆಗಿಲ್ಲ. ನಿರ್ಮಲ ಸೀತಾರಾಮನ್ ಅವರು 21 ಲಕ್ಷ ಕೋಟಿ ಘೋಷಣೆ ಮಾಡಿದ್ರು. ಯಾರಿಗೆ ಸಹಾಯ ಮಾಡಿದ್ರು ಲಿಸ್ಟ್ ಬಿಡುಗಡೆ ಮಾಡಿ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬಂದು ಮೂರು ವರ್ಷ ಆಗ್ತಾ ಇದೆ. ಜುಲೈ 28ಕ್ಕೆ ಒಂದು ವರ್ಷದ ಸಾಧನಾ ಸಮಾವೇಶ ಮಾಡ್ತಾ ಇದ್ದಾರೆ. ಬೊಮ್ಮಾಯಿ ಸಿಎಂ ಆದಾಗ ಭರವಸೆ ಇತ್ತು.ಜನತಾ ದಳದಿಂದ ಬಂದಿದ್ದಾರೆ. ವಿಭಿನ್ನವಾಗಿ ಕೆಲಸ ಮಾಡಬಹುದು ಅಂತ. ಆದರೆ ಅವರ ಒಂದು ವರ್ಷದ ಆಡಳಿತ ನೋಡಿ ಭ್ರಮನಿರಸನ ಆಗಿದೆ ಎಂದರು.  ಬೊಮ್ಮಾಯಿ‌ ಕಾಲದಲ್ಲಿ ಹಿಂದೆಂದೂ ನಡೆಯದಷ್ಟು ಭ್ರಷ್ಟಾಚಾರ ನಡೆದಿದೆ. 40 % ಕಮಿಷನ್ ಕೊಡಬೇಕಾದದ್ದು ಇತಿಹಾಸದಲ್ಲಿ ಇದೇ ಮೊದಲು. ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಪೊಲೀಸರಿಂದ ನ್ಯಾಯ ಸಿಗಲಿಲ್ಲ. ಆತ್ಮಹತ್ಯೆಗೆ ಕಾರಣರಾದವರಿಗೆ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ನಾವು ನ್ಯಾಯಾಂಗ ತನಿಖೆ ಮಾಡಿ ಅಂದ್ವಿ. ಆದ್ರೆ ಬಿಜೆಪಿ ಸರ್ಕಾರ ಒಪ್ಪಲಿಲ್ಲ. ಕೇಸ್ ಮುಚ್ಚಿ ಹಾಕಲು ಬಿ ರಿಪೋರ್ಟ್ ಹಾಕಿದ್ದು ಎದ್ದು ಕಾಣುತ್ತದೆ. ಈಗ ಇದರ ಸಾಧನೆ ಸಂಭ್ರಮಿಸಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ನಮ್ದು ಡಬಲ್ ಇಂಜಿನ್ ಸರ್ಕಾರ ಅಂತಾರೆ. ಕೇಂದ್ರ ದಿಂದ ಸಾಕಷ್ಟು ಕೊಡುಗೆ ಬಂದಿದೆ ಅಂತಾರೆ.. ಕೇಂದ್ರ ದಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ. 14ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಹಣ ಬರಬೇಕು. 52% ಹಣ ರಾಜ್ಯಕ್ಕೆ ಬರಬೇಕಿತ್ತು.ಆದ್ರೆ 32% ಹಣ ಮಾತ್ರ ಬಂದಿದೆ. ಕೇಂದ್ರ ಸರ್ಕಾರದಿಂದ ಕೂಡ ರಾಜ್ಯಕ್ಕೆ ಅನ್ಯಾಯ ಆಗಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಜಿಎಸ್ಟಿ ಹಣದಲ್ಲಿ ಕೂಡ ರಾಜ್ಯಕ್ಕೆ ಅನ್ಯಾಯ ಆಗಿದೆ. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಅನ್ಯಾಯ ಮಾಡಿದ್ದಾರೆ. ಬೊಮ್ಮಾಯಿ ಜಿಎಸ್ ಟಿ ಕೌನ್ಸಿಲ್ ಗೆ ಹೋಗ್ತಾ ಇದ್ರು. ಆದ್ರೆ ರಾಜ್ಯಕ್ಕೆ ಬರಬೇಕಾದ ಹಣದ ಬಗ್ಗೆ ಕೇಳಲೇ ಇಲ್ಲ. ಹಾಗಾಗಿ ಬರಬೇಕಾದ ಹಣ ಬರಲಿಲ್ಲ. ಪರಿಹಾರ ಕೇಳಿ ಅಂದ್ರೆ ಕೇಂದ್ರ ಹೇಳಿದ ಹಾಗೆ ಬೊಮ್ಮಾಯಿ ತೆಲೆ ಆಡಿಸುತ್ತಿದ್ದಾರೆ. ರಾಜ್ಯಕ್ಕೆ ಸತತವಾಗಿ ಕೇಂದ್ರ ಅನ್ಯಾಯ ಮಾಡುತ್ತಿದೆ. 25 ಬಿಜೆಪಿ ಸಂಸದರು ಇದ್ದಾರೆ. ಯಾರು‌ಕೂಡ ಅನ್ಯಾಯದ ಬಗ್ಗೆ ಧ್ವನಿ ಎತ್ತುತ್ತಿಲ್ಲ. ಅನ್ಯಾಯ ಆಗಿದ್ದಕ್ಕೆ ಸಂಭ್ರಮ ಆಚರಣೆ ಮಾಡುತ್ತಿದ್ದೀರ..? ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com