ರಾಜ್ಯಸಭೆ ಚುನಾವಣೆ: ಮತಗಳ ಕೊರತೆಯ ನಡುವೆಯೂ ನಾಲ್ಕನೇ ಸ್ಥಾನಕ್ಕೆ 3 ಪಕ್ಷಗಳ ಅಭ್ಯರ್ಥಿಗಳ ಸೆಣಸಾಟ!
ರಾಜ್ಯಸಭೆಗೆ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10 ರಂದು ನಡೆಯಲಿರುವ ಚುನಾವಣೆಯು ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ.
Published: 01st June 2022 02:11 PM | Last Updated: 01st June 2022 04:50 PM | A+A A-

ರಾಜ್ಯಸಭೆ ಚುನಾವಣೆಗೆ ನಿರ್ಮಲಾ ಸೀತರಾಮನ್ ನಾಮಪತ್ರ
ಬೆಂಗಳೂರು: ರಾಜ್ಯಸಭೆಗೆ ನಾಲ್ಕು ಸದಸ್ಯರನ್ನು ಆಯ್ಕೆ ಮಾಡಲು ಜೂನ್ 10 ರಂದು ನಡೆಯಲಿರುವ ಚುನಾವಣೆಯು ಎಲ್ಲಾ ಮೂರು ಪ್ರಮುಖ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ.
ನಾಲ್ಕನೇ ಅಭ್ಯರ್ಥಿಗೆ ಹೆಚ್ಚುವರಿ ಮತಗಳಿಗಾಗಿ ವಿರೋಧ ಪಕ್ಷಗಳ ಬೆಂಬಲವನ್ನು ಗಳಿಸಲು ಈಗಾಗಲೇ ರಾಜಕೀಯ ಮೇಲಾಟ ನಡೆಯುತ್ತಿದೆ. ಮಾಜಿ ರಾಜ್ಯ ಸಭೆ ಸದಸ್ಯ ಕುಪೇಂದ್ರ ರೆಡ್ಡಿ ಅವರನ್ನು ಜೆಡಿಎಸ್ ಕಣಕ್ಕಿಳಿಸಿದೆ. ಹೀಗಾಗಿ ಅವರನ್ನು ಗೆಲ್ಲಿಸುವ ಹೊಣೆ ದೇವೇಗೌಡರ ಮೇಲಿದೆ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಿ ಬೆಂಬಲ ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ನಾಯಕ ಎಚ್.ಡಿ ಕುಮಾರಸ್ವಾಮಿ ಗುರುವಾರ ಸಿಂಗಾಪುರದಿಂದ ಮರಳಲಿದ್ದು ಅದಾದ ನಂತರ ಸ್ಪಷ್ಟ ಚಿತ್ರಣ ದೊರೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಶುಕ್ರವಾರದವರೆಗೆ ಸಮಯವಿದೆ.
ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಮತಗಳ ಹಂಚಿಕೆ ಬಳಿಕ ಇಬ್ಬರು ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಅವರ ಬಳಿ ಉಳಿಯಲಿವೆ 32 ಹೆಚ್ಚುವರಿ ಮತಗಳು. ಕಾಂಗ್ರೆಸ್ ತನ್ನ ಮೊದಲ ಅಭ್ಯರ್ಥಿ ಗೆಲ್ಲಿಸಿಕೊಂಡ ನಂತರ 2ನೇ ಅಭ್ಯರ್ಥಿಗೆ 24 ಹೆಚ್ಚುವರಿ ಮತಗಳು ಉಳಿಯಲಿವೆ. ಕ್ರಾಸ್ ವೋಟಿಂಗ್ /ಶಾಸಕರ ಗೈರಾಗದಿದ್ದರೆ ಜೆಡಿಎಸ್ ಅಭ್ಯರ್ಥಿಗೆ ಕೂಡ 32 ಶಾಸಕರ ಬೆಂಬಲದ ಮತಗಳಿವೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ಕ್ರಾಸ್ ವೊಟಿಂಗ್ ಮಾಡಿದರೇ ಬಿಜೆಪಿಯ ಲೆಹರ್ ಸಿಂಗ್ ಗೆಲ್ಲುವ ಸಾಧ್ಯತೆಯಿದೆ.
ಗೌಡರು ಸೋನಿಯಾ ಅವರೊಂದಿಗೆ ಒಪ್ಪಂದ ಮಾಡಿಕೊಳ್ಳದ ಹೊರತು ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಹಿಂಪಡೆಯುವ ಸಾಧ್ಯತೆಯಿಲ್ಲ ಎಂದು ಮೂಲಗಳು ತಿಳಿಸಿವೆ. ಅಡ್ಡ ಮತದಾನ ನಡೆದರೆ ಶಾಸಕರ ರಾಜಕೀಯ ಭವಿಷ್ಯಕ್ಕೆ ಧಕ್ಕೆಯಾಗುವುದಿಲ್ಲ. ಪಕ್ಷಗಳು ಮಾಡಬಹುದಾದ ಗರಿಷ್ಠ ಕೆಲಸವೆಂದರೆ ಅಂತಹ ಶಾಸಕರನ್ನು ಅಮಾನತುಗೊಳಿಸುವುದಷ್ಟೇ ಅದನ್ನು ಬಿಟ್ಟು ಅವರಿಂದ ಇನ್ನೇನು ಮಾಡಲಾಗದು ಎಂದು ಹಿರಿಯ ನಾಯಕರೊಬ್ಬರು ಟೀಕಿಸಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಭರವಸೆ ಹಣದ ಭರವಸೆ ಸೇರಿದಂತೆ ವಿವಿಧ ಆಶ್ವಾಸನೆಗಳನ್ನು ಪಕ್ಷಗಳು ನೀಡುತ್ತಿವೆ ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.